ಬೀಜಿಂಗ್/ವಾಷಿಂಗ್ಟನ್: ಅಧ್ಯಕ್ಷ ಸ್ಥಾನದ ಚುನಾವಣೆ ಬಗ್ಗೆ ಡೊನಾಲ್ಡ್ ಟ್ರಂಪ್ ತಕರಾರು ಎತ್ತಿರುವಂತೆಯೇ ಅರಿಜೋನಾ ಪ್ರಾಂತ್ಯದ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ ಡೆಮಾಕ್ರಾಟ್ ಪಕ್ಷದ ನಾಯಕ ಜೋ ಬೈಡೆನ್ ಅಲ್ಪ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. 11 ಮತಗಳ ಅಂತರದಿಂದ ಟ್ರಂಪ್ ವಿರುದ್ಧ ಜಯ ಸಾಧಿಸಿದ್ದಾರೆ.
ಏಳು ದಶಕಗಳ ಅವಧಿಯಲ್ಲಿ ಎರಡನೇ ಬಾರಿಗೆ ಅರಿಜೋನಾ ಪ್ರಾಂತ್ಯದಿಂದ ಡೆಮಾಕ್ರಾಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ವಿರುದ್ಧ ಜಯ ಸಾಧಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಇದರಿಂದಾಗಿ ಬೈಡೆನ್‌ಗೆ 290, ಟ್ರಂಪ್‌ಗೆ 217 ಮತಗಳು ಪ್ರಾಪ್ತವಾದಂತಾಗಿದೆ. 1996ರಲ್ಲಿ ಬಿಲ್ ಕ್ಲಿಂಟನ್ ಅಲ್ಪಮತಗಳ ಅಂತರದಿಂದ ಗೆದ್ದಿದ್ದರು. 1948ರಲ್ಲಿ ಹೆನ್ರಿ ತುರ್ಮಾನ್ ಅವರು ಜಯಗಳಿಸಿದ ಬಳಿಕ ಬೈಡೆನ್ ಅಲ್ಲಿ ಗೆದ್ದಿದ್ದಾರೆ.
ಇದನ್ನೂ ಓದಿ:ಅಲ್-ಖೈದಾದಿಂದ ಪ.ಬಂಗಾಳದಲ್ಲಿ ಉಗ್ರ ದಾಳಿಗೆ ಸಂಚು: ಗುಪ್ತಚರ ಸಂಸ್ಥೆಯಿಂದ ಮುನ್ನೆಚ್ಚರಿಕೆ
ಕೊನೆಗೂ ಅಭಿನಂದನೆ ಸಲ್ಲಿಸಿದ ಚೀನಾ
ಅಮೆರಿಕ ಚುನಾವಣೆಯಲ್ಲಿ ಜಯ ಗಳಿಸಿರುವ ಡೆಮಾಕ್ರಾಟಿಕ್ ಪಕ್ಷದ ನಾಯಕ ಜೋ ಬೈಡೆನ್ ಮತ್ತು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಚೀನಾ ಸರ್ಕಾರ ಅಧಿಕೃತವಾಗಿ ಅಭಿನಂದನೆ ಸಲ್ಲಿಸಿದೆ. ಅಮೆರಿಕದ ಜನರ ಆಯ್ಕೆಯನ್ನು ನಾವು ಮನ್ನಿಸುತ್ತೇವೆ. ಅಲ್ಲಿನ ಫಲಿತಾಂಶದ ಬಗ್ಗೆ ಅಂತಾರಾಷ್ಟ್ರೀಯವಾಗಿ ವ್ಯಕ್ತವಾಗಿರುವ ಅಭಿಪ್ರಾಯ ಗಮನಿಸಿದ್ದೇವೆ. ನಿಯೋಜಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆಗಳು ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್‌ಬಿನ್ ಶುಕ್ರವಾರ ಹೇಳಿದ್ದಾರೆ. ನ.9ರಂದು ವಾಂಗ್ ಅವರು ಬೈಡೆನ್ ಮತ್ತು ಹ್ಯಾರಿಸ್‌ಗೆ ಅಭಿನಂದನೆ ಸಲ್ಲಿಸಲು ನಿರಾಕರಿಸಿದ್ದರು.
ರೋ ಖನ್ನಾ ಸೆನೆಟ್ ಅಭ್ಯರ್ಥಿ?
ಸಿಲಿಕಾನ್ ವ್ಯಾಲಿ ಕ್ಷೇತ್ರದ ಪ್ರತಿನಿಧಿಯಾಗಿದ್ದ ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವುದರಿಂದ ಆ ಸ್ಥಾನಕ್ಕೆ ಭಾರತೀಯ- ಅಮೆರಿಕನ್ ರೋ ಖನ್ನಾರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಕ್ಯಾಲಿಫೋರ್ನಿಯಾ ನಿಯಮ ಪ್ರಕಾರ ಅಲ್ಲಿನ ಗವರ್ನರ್ ಗ್ಯಾವಿನ್ ನ್ಯೂಸಮ್ ಬಾಕಿ ಉಳಿದಿರುವ 2 ವರ್ಷಗಳ ಅವಧಿಗೆ ಸದಸ್ಯರನ್ನು ನೇಮಿಸಬೇಕು.