Advertisement

ಅಧಿಕಾರಕ್ಕೆ ಬಂದರೆ ಎಚ್‌1 ಬಿ ವೀಸಾ ನಿಯಮ ಸಡಿಲ: ಬೈಡನ್‌ ಆಶ್ವಾಸನೆ

09:20 AM Aug 17, 2020 | Nagendra Trasi |

ವಾಷಿಂಗ್ಟನ್‌: ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಮುಳುವಾಗಿರುವ ಎಚ್‌1ಬಿ ವೀಸಾದ ಬಿಗಿ ನಿಯಮಗಳನ್ನು ತಾವು ಅಧಿಕಾರಕ್ಕೆ ಬಂದರೆ ಸಡಿಲಗೊಳಿಸುವುದಾಗಿ ಬೈಡನ್‌, ಭಾರತೀಯ ಸಮುದಾಯಕ್ಕೆ ಆಶ್ವಾಸನೆ ನೀಡಿದ್ದಾರೆ.

Advertisement

ವಾಷಿಂಗ್ಟನ್‌ನಲ್ಲಿ ಭಾರತ ಮೂಲದ ಅಮೆರಿಕನ್ನರ ಸಂಘಟನೆಗಳು ಆಯೋಜಿಸಿದ್ದ ಭಾರತ ಸ್ವತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಅಲ್ಲದೆ, ಅಮೆರಿಕದಲ್ಲಿ ಹೆಚ್ಚುತ್ತಿರುವ ಜನಾಂಗೀಯ ದ್ವೇಷ, ದಳ್ಳುರಿಗಳನ್ನು ಶಮನ ಮಾಡಲು ಪ್ರಯತ್ನಿಸಿ, ಎಲ್ಲರೂ ದೇಶ, ಭಾಷೆಗಳ ಹಂಗಿಲ್ಲದೆ ಕೆಲಸ ಮಾಡುವ ವಾತಾವರಣ ಸೃಷ್ಟಿಸಲಾಗುವುದು ಎಂದಿದ್ದಾರೆ. ಇತ್ತೀಚೆಗೆ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಚ್‌1ಬಿ ವೀಸಾದ  ನಿಯಮಗಳನ್ನು ಬಿಗಿಗೊಳಿಸಿದ್ದರಿಂದಾಗಿ, ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರು ಸ್ವದೇಶಕ್ಕೆ ಹಿಂದಿರುಗುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ತಾವು ಅಧ್ಯಕ್ಷರಾದರೆ ಭಾರತ ಮತ್ತು ಅಮೆರಿಕ ಬಾಂಧವ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ತನ್ನ ಪ್ರದೇಶದಲ್ಲೇ ಭಾರತ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ ಆಶ್ವಾಸನೆ ನೀಡಿದ್ದಾರೆ.

“ನಾನು ಹಿಂದೆ ಬರಾಕ್‌ ಒಬಾಮಾ ಅವರ ಸಂಪುಟದಲ್ಲಿ ಅಮೆರಿಕದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದಾಗ, ಭಾರತ ಮತ್ತು ಅಮೆರಿಕದ ನಡುವಿನ ಐತಿಹಾಸಿಕ ಎನಿಸಿರುವ ನಾಗರಿಕ ಪರಮಾಣು ಒಪ್ಪಂದವನ್ನು ಜಾರಿಗೊಳಿಸಲು ಬಹುವಾಗಿ ಶ್ರಮಿಸಿದ್ದೆ. ಆಗಲೇ ನನಗೆ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಪರಸ್ಪರ ಹತ್ತಿರಕ್ಕೆ ಬಂದರೆ ಅದರಿಂದ ಎರಡೂ ದೇಶಗಳಿಗೆ ಲಾಭವಿದೆ ಎಂದೆನಿಸಿತ್ತು. ಈ ಎರಡೂ ದೇಶಗಳ ಗೆಳತನದಿಂದ ವಿಶ್ವಕ್ಕೇ ಲಾಭವಾಗಲಿದೆ” ಎಂದರು.

“ನಾನು ಅಧ್ಯಕ್ಷ ಪದವಿಗೆ ಆರಿಸಿ ಬಂದರೆ ಭಾರತ-ಅಮೆರಿಕದ ಸ್ನೇಹಕ್ಕೆ ಹೊಸ ಭಾಷ್ಯ ಬರೆಯುವುದಲ್ಲದೆ, ಎರಡೂ ದೇಶಗಳ ಬಾಂಧವ್ಯವನ್ನು ಹೆಚ್ಚಿಸಿ, ಭಾರತವು ತನ್ನ ಪ್ರಾಂತ್ಯದಲ್ಲೇ ಅನುಭವಿಸು  ತ್ತಿರುವ ತೊಂದರೆಗಳನ್ನು ನಿವಾರಿಸಲು ಸಹಕರಿಸುತ್ತೇನೆ. ಜೊತೆಗೆ, ಪ್ರಜಾಪ್ರಭುತ್ವವಿರುವ ಯಾವುದೇ ರಾಷ್ಟ್ರಗಳಲ್ಲಿ ಅವರಲ್ಲಿನ ವಿವಿಧತೆಯನ್ನು ಕಾಪಾಡಲು ಶ್ರಮಿಸುತ್ತೇನೆ” ಎಂದು ತಿಳಿಸಿದರು. ಇನ್ನು, ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಸಂಬಂಧ ವೃದ್ಧಿಗೂ ಶ್ರಮಿಸುವುದಾಗಿ ಅವರು ತಿಳಿಸಿದರು.

Advertisement

ಹೋರಾಟದ ಕಥೆಗಳೇ ಸ್ಫೂರ್ತಿ: ಕಮಲಾ ವಾಷಿಂಗ್ಟನ್‌ನಲ್ಲಿ ಶನಿವಾರ ರಾತ್ರಿ ನಡೆದ ಸೌತ್‌ ಏಷ್ಯನ್‌ ಫಾರ್‌ ಬೈಡನ್‌ ಎಂಬ ಮತ್ತೂಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌, ಸಭಿಕರ ಮುಂದೆ ಮದ್ರಾಸ್‌ನಲ್ಲಿ (ಈಗಿನ ಚೆನ್ನೈ) ತಾವು ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. “ಚೆನ್ನೈನಲ್ಲಿ ನನ್ನ ತಾಯಿಯ ತಂದೆಯ ಮನೆಯಿತ್ತು. ಬಾಲ್ಯದಲ್ಲಿದ್ದಾಗ ನಾವು ಆಗಾಗ ಅಲ್ಲಿಗೆ ಹೋಗುತ್ತಿದ್ದೆವು. ಆಗೆಲ್ಲಾ ನಾನು ನನ್ನ ತಾತ ಪಿ.ವಿ. ಗೋಪಾಲನ್‌ ಅವರ ಜೊತೆಗೆ ವಾಯು ವಿಹಾರಕ್ಕೆ ಹೋಗುತ್ತಿದ್ದೆ. ಆಗ, ಅವರು ನನಗೆ ಭಾರತದ ಸ್ವತಂತ್ರ ಸಂಗ್ರಾಮದ ನೇತಾರರ ಕಥೆಗಳನ್ನು ಹೇಳುತ್ತಿದ್ದರು. ಅವರ ಆ ಕಥೆಗಳಿಂದಲೇ ನನ್ನಲ್ಲಿ ಹೋರಾಟದ ಕಿಚ್ಚು ಹೊತ್ತಿಕೊಂಡಿತು. ಅದರಿಂದಾಗಿಯೇ ನಾನು ಇಲ್ಲಿಯವರೆಗೆ ಬಂದು ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next