ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ವೈದ್ಯ ಡಾ.ವಿವೇಕ್ ಮೂರ್ತಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಕೋವಿಡ್ 19 ಮುಖ್ಯ ಸಲಹೆಗಾರಾರನ್ನಾಗಿ ಆಯ್ಕೆ ಮಾಡುವ ಮೂಲಕ ಮುಂದಿನ ಸರ್ಜನ್ ಜನರಲ್ ಕಾರ್ಯನಿರ್ವಹಿಸಲಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಹಿಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಮಾಬಾ ಆಡಳಿತಾವಧಿಯಲ್ಲಿ ಸರ್ಜನ್ ಜನರಲ್ ಆಗಿ ವಿವೇಕ್ ಮೂರ್ತಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಹುದ್ದೆಯಿಂದ ನಿರ್ಗಮಿಸಿದ್ದರು ಎಂದು ವರದಿ ಹೇಳಿದೆ.
43 ವರ್ಷದ ಭಾರತೀಯ ಮೂಲದ ಅಮೆರಿಕನ್ ವೈದ್ಯ ವಿವೇಕ್ ಮೂರ್ತಿ ಅವರು ಜೋ ಬೈಡೆನ್ ಅವರ ಕೋವಿಡ್ 19 ಸಲಹಾ ಮಂಡಳಿಯ ಮೂವರು ಅಧ್ಯಕ್ಷರಲ್ಲಿ ಒಬ್ಬರಾಗಿದ್ದಾರೆ. ಈ ಕುರಿತು ಶೀಘ್ರವೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡಲು ಜೋ ಬೈಡೆನ್ ಒಬಾಮಾ ಆಡಳಿತದ ಮತ್ತೊಬ್ಬ ಮಾಜಿ ಅಧಿಕಾರಿ ಜೆಫ್ ಝಿಯೆಂಟ್ ಅವರನ್ನು ಹಿರಿಯ ಅಧಿಕಾರಿಯನ್ನಾಗಿ ಆಯ್ಕೆ ಮಾಡಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಅನೈತಿಕ ಸಂಬಂಧ: ‘ವಿಸ್ಮಯ’ ಸಿನಿಮಾ ಪ್ರೇರಣೆಯಿಂದ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪತ್ನಿ
ನೂತನ ಆಡಳಿತದಲ್ಲಿ ಅಮೆರಿಕದ ಮಾಜಿ ಸರ್ಜನ್ ಜನರಲ್ ವಿವೇಕ್ ಎಚ್ ಮೂರ್ತಿಗೆ ಮತ್ತೆ ಅದೇ ಹುದ್ದೆ ದೊರೆತಂತಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ್ದು, ಇದೊಂದು ಖುಷಿಯ ಸಂಗತಿ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ತಿಳಿಸಿದೆ.