ವಾಷಿಂಗ್ಟನ್: ಮುಂದಿನ ವರ್ಷ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವಂತೆಯೇ ಹಾಲಿ ಅಧ್ಯಕ್ಷ ಜೋ ಬೈಡೆನ್ ಸೆಪ್ಟಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಜಾಗತಿಕವಾಗಿ ಚೀನ-ರಷ್ಯಾ ಪರಸ್ಪರ ಒಗ್ಗಟ್ಟು ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರವಾಸಕ್ಕೆ ಮಹತ್ವ ಬಂದಿದೆ. ಪ್ರಸಕ್ತ ವರ್ಷ ಹಾಗೂ 2024ನೇ ಸಾಲಿನಲ್ಲಿ ಎರಡು ದೇಶಗಳ ನಡುವಿನ ಬಾಂಧವ್ಯದಲ್ಲಿ ಹೊಸ ಶಕೆ ಆರಂಭವಾಗಲಿದೆ ಎಂದು ಬೈಡೆನ್ ಆಡಳಿತ ಶನಿವಾರ ಬಣ್ಣಿಸಿದೆ.
ಪ್ರಸಕ್ತ ವರ್ಷ ಭಾರತ ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನೂ ವಹಿಸಿಕೊಂಡಿದೆ. ಜತೆಗೆ ಅಮೆರಿಕದಲ್ಲಿ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಒಕ್ಕೂಟದ ಸಮ್ಮೇಳನ, ಜಪಾನ್ ಜಿ7 ರಾಷ್ಟ್ರಗಳ ಸಭೆ ನಡೆಸಲಿದೆ. ಇದರ ಜತೆಗೆ ಕ್ವಾಡ್ ಸದಸ್ಯ ರಾಷ್ಟ್ರಗಳು ಹಲವಾರು ನಾಯಕತ್ವ ವಹಿಸಿಕೊಂಡಿವೆ ಎಂದು ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾ ವ್ಯವಹಾರಗಳ ಸಹಾಯಕ ಸಚಿವ ಡೊನಾಲ್ಡ್ ಲು ಹೇಳಿದ್ದಾರೆ.
ಸೆಪ್ಟಂಬರ್‌ನಲ್ಲಿ ಜಿ20 ರಾಷ್ಟ್ರಗಳ ಸಮ್ಮೇಳನ ನಡೆಯುವ ಸಂದರ್ಭದಲ್ಲಿಯೇ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸಮ್ಮೇಳನ ಪ್ರಯುಕ್ತ ಭಾರತ ಪ್ರವಾಸ ಕೈಗೊಳ್ಳುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ. ಹೀಗಾಗಿ, ಮುಂದಿನ ಮೂರು ತಿಂಗಳು ಅತ್ಯಂತ ಕಾತರದಿಂದ ಕಾಯುತ್ತಿದ್ದೇವೆ ಎಂದು ಡೊನಾಲ್ಡ್ “ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್, ವಿತ್ತ ಸಚಿವ ಜೆನೆಟ್ ಯೆಲ್ಲೆನ್ ಮತ್ತು ವಾಣಿಜ್ಯ ಸಚಿವೆ ಗಿನಾ ರೈಮೊನೊಡೋ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು. ಹೊಸದಿಲ್ಲಿಯಲ್ಲಿ ಮಾರ್ಚ್‌ನಲ್ಲಿ ನಡೆದಿದ್ದ ರೈಸಿನಾ ಮಾತುಕತೆ ವೇಳೆ, ಕ್ವಾಡ್ ರಾಷ್ಟ್ರಗಳ ಸಭೆಯನ್ನೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಚ್ಚುಕಟ್ಟಾಗಿ ಆಯೋಜಿಸಿದ್ದರು ಎಂದರು.
ಭಾರತೀಯರಿಗೆ 10 ಲಕ್ಷ ವೀಸಾ
ಪ್ರಸಕ್ತ ವರ್ಷ ಎಚ್1ಬಿ, ಎಲ್ ವೀಸಾ ಸೇರಿದಂತೆ ಹಲವು ರೀತಿಯ ಉದ್ಯೋಗ ವೀಸಾಗಳನ್ನು ನೀಡುವಲ್ಲಿ ಭಾರತೀಯರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ವಿವಿಧ ಶ್ರೇಣಿಗಳ ವೀಸಾಗಳ ಪೈಕಿ ಭಾರತೀಯರಿಗೇ 10 ಲಕ್ಷಕ್ಕಿಂತ ವೀಸಾ ಹೆಚ್ಚು ನೀಡಲಾಗುತ್ತದೆ ಎಂದು ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾ ವ್ಯವಹಾರಗಳಿಗಾಗಿನ ಸಹಾಯಕ ಸಚಿವ ಡೊನಾಲ್ಡ್ ಲು ಹೇಳಿದ್ದಾರೆ. ಜತೆಗೆ ವಿದ್ಯಾರ್ಥಿಗಳಿಗಾಗಿನ ವೀಸಾ ಅರ್ಜಿಗಳನ್ನು ತ್ವರಿತ ವಾಗಿ ಪರಿಷ್ಕರಿಸಿ ವಿವಿಗಳಲ್ಲಿ ಅಧ್ಯಯನಕ್ಕೆ ಅನು ಕೂಲವಾಗುವಂತೆ ಮಾಡಲಾಗುತ್ತದೆ ಎಂದರು.