Advertisement

Bharath Jodo: 7ರಂದು ಎಲ್ಲ ಜಿಲ್ಲೆಗಳಲ್ಲೂ “ಜೋಡೋ” ಯಾತ್ರೆ

09:14 PM Sep 03, 2023 | Team Udayavani |

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ “ಭಾರತ್‌ ಜೋಡೋ ಪಾದಯಾತ್ರೆ’ಗೆ ಸೆ.7ರಂದು ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಇದರ ಸ್ಮರಣಾರ್ಥ ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಭಾರತ್‌ ಜೋಡೋ ಯಾತ್ರೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ.

Advertisement

ಪ್ರಸಕ್ತ ವರ್ಷದ ಪಂಚರಾಜ್ಯ ವಿಧಾನಸಭೆ ಚುನಾವಣೆಗಳು ಹಾಗೂ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವಂತೆಯೇ ದೇಶವಾಸಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಈ ನಿರ್ಧಾರ ಮಹತ್ವ ಪಡೆದಿದೆ.

ಕಳೆದ ವರ್ಷದ ಸೆ.7ರಂದು ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದ ಭಾರತ್‌ ಜೋಡೋ ಯಾತ್ರೆ ಈ ವರ್ಷದ ಜನವರಿ 7ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಮಾಪ್ತಿಗೊಂಡಿತ್ತು. ಒಟ್ಟು 145 ದಿನಗಳ ಕಾಲ ನಡೆದ ಈ ಯಾತ್ರೆಯಲ್ಲಿ ರಾಹುಲ್‌ ಮತ್ತಿತರ ಭಾರತಯಾತ್ರಿಗಳು ಸುಮಾರು 4 ಸಾವಿರ ಕಿ.ಮೀ. ಪಾದಯಾತ್ರೆ ನಡೆಸಿದ್ದರು.
ಈ ಸೆ.7ಕ್ಕೆ ಭಾರತ್‌ ಜೋಡೋ ಯಾತ್ರೆ ಒಂದು ವರ್ಷ ಪೂರೈಸುತ್ತಿದ್ದು, ವರ್ಷಾಚರಣೆ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ಭಾನುವಾರ ಕಾಂಗ್ರೆಸ್‌ ಘೋಷಿಸಿದೆ. ಅದರಂತೆ, ಗುರುವಾರ ದೇಶದ ಪ್ರತಿ ಜಿಲ್ಲೆಯಲ್ಲೂ ಭಾರತ್‌ ಜೋಡೋ ಯಾತ್ರೆ ನಡೆಸಲಾಗುತ್ತದೆ. ಈ ಯಾತ್ರೆಯ ಅವಧಿ ಮತ್ತು ಇತರೆ ವಿವರಗಳನ್ನು ಸದ್ಯದಲ್ಲೇ ಘೋಷಿಸಲಾಗುವುದು ಎಂದೂ ಹೇಳಿದೆ.

ಕಳೆದ ವರ್ಷದ ಯಾತ್ರೆಯಲ್ಲಿ ರಾಹುಲ್‌ 12 ಸಾರ್ವಜನಿಕ ಸಭೆಗಳು, 100ಕ್ಕೂ ಹೆಚ್ಚು ಸಂವಾದಗಳು, 13 ಸುದ್ದಿಗೋಷ್ಠಿಗಳಲ್ಲಿ ಭಾಗಿಯಾಗಿದ್ದರು. ಈ ನಡಿಗೆಯು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದ್ದಲ್ಲದೇ, ರಾಹುಲ್‌ ಗಾಂಧಿಯವರ ವರ್ಚಸ್ಸು ವೃದ್ಧಿಗೂ ಸಹಾಯ ಮಾಡಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next