ಜೈಪುರ್: ಈದ್ ಉಲ್ ಫಿತರ್ ಹಬ್ಬದ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದ ಪರಿಣಾಮ ಮಂಗಳವಾರ (ಮೇ 03) ರಾಜಸ್ಥಾನದ ಜೋಧ್ ಪುರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿ ಕರ್ಫ್ಯೂ ಜಾರಿಗೊಳಿಸಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕಾಲೇಜ್ ಲವ್‌ಸ್ಟೋರಿಯಲ್ಲಿ ‘ನಿರ್ಮುಕ್ತ’; ಅಂಬರೀಶ್ ತಂಗಿ ಮಗನ ಸಿನಿಎಂಟ್ರಿ
ಜೋಧ್ ಪುರದ ಜಾಲೋರಿ ಗೇಟ್ ಪ್ರದೇಶದಲ್ಲಿ ಸೋಮವಾರ ಎರಡು ಕೋಮುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ನಂತರ ಮಂಗಳವಾರ ಹಲವಾರು ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆಸುವ ಮೂಲಕ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು. ಬಳಿಕ ಭಾರೀ ಪ್ರಮಾಣದಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿರುವುದಾಗಿ ವರದಿ ವಿವರಿಸಿದೆ.
ಮುಂಜಾಗ್ರತಾ ಕ್ರಮವಾಗಿ ಉದಯ್ ಮಂದಿರ್, ನಾಗೋರಿ ಗೇಟ್, ಖಾಂಡಾ ಫಾಲ್ಸಾ, ಪ್ರತಾಪ್ ನಗರ್, ದೇವ್ ನಗರ್, ಸೂರ್ ನಗರ್ ಮತ್ತು ಸರ್ದಾರ್ ಪುರ್ ಪ್ರದೇಶದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಳೆ ಮಧ್ಯರಾತ್ರಿವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜೋಧ್ ಪುರದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅಷ್ಟೇ ಅಲ್ಲ ಪೊಲೀಸರ ಭದ್ರತೆಯಲ್ಲಿ ಈದ್ ವೇಳೆ ನಮಾಜ್ ಮಾಡಲು ಅವಕಾಶ ನೀಡಲಾಗಿತ್ತು ಎಂದು ವರದಿ ಹೇಳಿದೆ.
ರಾಜ್ಯದಲ್ಲಿ ಜನರು ಶಾಂತಿಯನ್ನು ಕಾಪಾಡಬೇಕು ಎಂದು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದು, ಪರಿಸ್ಥಿತಿಯ ಕುರಿತು ಚರ್ಚಿಸಿದ್ದರು. ಬಳಿಕ ಹಿರಿಯ ಅಧಿಕಾರಿಗಳನ್ನು ಹೆಲಿಕಾಪ್ಟರ್ ಮೂಲಕ ಜೋಧ್ ಪುರಕ್ಕೆ ಕಳುಹಿಸಿಕೊಡಲಾಗಿತ್ತು ಎಂದು ವರದಿ ತಿಳಿಸಿದೆ.