Advertisement
“ನರೇಗಾ’ ಯೋಜನೆಯಡಿ ತಾಲೂಕು ಎಂಐಎಸ್ ಸಂಯೋಜಕರು (2 ), ತಾಲೂಕು ಐಇಸಿ ಸಂಯೋಜಕರು(7), ತಾಲೂಕು ತಾಂತ್ರಿಕ ಸಂಯೋಜಕರು(2) ಮತ್ತು ಡಾಟಾ ಎಂಟ್ರಿ ಆಪರೇಟರ್(2) ಸೇರಿದಂತೆ ಒಟ್ಟು 13 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ನೇಮಕಾತಿ ಬಯಸಿ 900ಕ್ಕೂ ಅಧಿಕ ಮಂದಿ ಉದ್ಯೋಗಾಕಾಂಕ್ಷಿಗಳು ಆಗಮಿಸಿದರು. ಇದರಿಂದಾಗಿ ಜಿ.ಪಂ. ಆವರಣದಲ್ಲಿ ಜನಜಂಗುಳಿ ಉಂಟಾಗಿತ್ತು. ಒಂದು ಹಂತದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕೂಡ ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅನಂತರ ಜಿ.ಪಂ. ಮುಖ್ಯ ದ್ವಾರದಲ್ಲಿಯೇ ಅಭ್ಯರ್ಥಿ ಗಳನ್ನು ತಡೆದು ಥರ್ಮಲ್ ಸ್ಕ್ರೀನಿಂಗ್ ನಡೆಸಿದ ಬಳಿಕ ಒಬ್ಬೊಬ್ಬರನ್ನೇ ಸಭಾಂಗಣದೊಳಗೆ ಕಳುಹಿಸಿ ಕೊಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.
ಅರ್ಜಿ ಸಲ್ಲಿಕೆಗಾಗಿ ದ.ಕ ಜಿಲ್ಲೆ ಮಾತ್ರವಲ್ಲದೆ ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದಲೂ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಪೈಕಿ ಹಲವಾರು ಮಂದಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರಗಳಲ್ಲಿ ಉದ್ಯೋಗ ಕಳೆದುಕೊಂಡು ತಮ್ಮ ಊರಿಗೆ ವಾಪಸಾಗಿ ಉದ್ಯೋಗದ ಹುಡುಕಾಟ ನಡೆಸುತ್ತಿದ್ದವರು ಇದ್ದರು. ಈಗ ಉದ್ಯೋಗ ಅನಿವಾರ್ಯ
“ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದೆ. ಲಾಕ್‌ಡೌನ್ ಸಂದರ್ಭ ಊರಿಗೆ ಬಂದಿದ್ದೆ. ಅನಂತರ ಅಲ್ಲಿನ ಉದ್ಯೋಗ ಕಳೆದುಕೊಂಡೆ. ವೇತನ ಹೆಚ್ಚೋ ಕಡಿಮೆಯೋ ಎಂಬ ಲೆಕ್ಕಾಚಾರ ಮಾಡಿಲ್ಲ. ಸದ್ಯಕ್ಕೆ ಉದ್ಯೋಗ ಅನಿವಾರ್ಯವಾಗಿದೆ. ಹಾಗಾಗಿ ಬಂದಿದ್ದೇನೆ ಎಂದು ವಿಟ್ಲದಿಂದ ಬಂದಿದ್ದ ಉದ್ಯೋಗಾಕಾಂಕ್ಷಿಯೋರ್ವರು “ಉದಯವಾಣಿ’ಗೆ ತಿಳಿಸಿದರು.
Related Articles
ಖಾಸಗಿ ಸಂಸ್ಥೆ ಗುತ್ತಿಗೆ ಆಧಾರದಲ್ಲಿ ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಬಾರಿ 900ಕ್ಕೂ ಅಧಿಕ ಅರ್ಜಿಗಳು ಹಾಗೂ ಅದಕ್ಕೆ ಪೂರಕ ದಾಖಲೆ ಸಂಗ್ರಹಿಸಲಾಗಿದ್ದು ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್. ಪ್ರತಿಕ್ರಿಯಿಸಿದ್ದಾರೆ.
Advertisement