ಸುರಪುರ: ಪದವಿ ನಂತರ ಮುಂದೇನು ಎಂಬ ಚಿಂತೆ ಕಾಡುವುದು ಸಹಜ. ಇದಕ್ಕೆ ಹೆದರುವ ಅಗತ್ಯವಿಲ್ಲ. ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಿಂದ ಪದವಿ ನಂತರ ಯುವಕ, ಯುವತಿಯರಿಗೆ ವಿಫುಲ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಧಾರವಾಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಧಾನೆ ರಾಜೇಂದ್ರ ಮಾಣಿಕರಾವ್ ಹೇಳಿದರು.
ನಗರದ ಜನನಿ ಮಹಿಳಾ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆ ಕೇವಲ ಕಾರ್ಮಿಕರಿಗೆ ಮಾತ್ರ ಸಿಮೀತವಾಗಿಲ್ಲ. ಗ್ರಾಮೀಣ ಭಾಗದ ಪದವೀಧರ ಯುವಕ, ಯುವತಿಯರಿಗೆ ಉದ್ಯೋಗದ ಅವಕಾಶಗಳಿವೆ. ನಮ್ಮ ತಪ್ಪು ತಿಳಿವಳಿಕೆ, ಮಾಹಿತಿ ಕೊರತೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಪದವೀಧರರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಪದವೀಧರರು ಹೆಚ್ಚಿನ ಮಾಹಿತಿ ಪಡೆದು ಉದ್ಯೋಗ ಅವಕಾಶ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಡಾ| ಆದಿಶೇಷ ನೀಲಗಾರ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯ ಅರಿಯಲು ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.
ಉಪನ್ಯಾಸಕ ತಿರುಪತಿ ಕೆಂಭಾವಿ, ಸುವರ್ಣಾ ಅಂಟೋಳಿ, ಮರೆಮ್ಮ ಕಟ್ಟಿಮನಿ, ನಂದಿನಿ, ಶ್ರೀದೇವಿ, ವೆಂಕಟೇಶ ಜಾಲಗಾರ, ಬೀರೇಶಕುಮಾರ, ಅಂಬ್ರೇಶ ಚಿಲ್ಲಾಳ, ಮಹೇಶ ಗಂಜಿ ಇದ್ದರು. ಅಯ್ಯಮ್ಮ ಪೂಜಾರಿ ನಿರೂಪಿಸಿದರು, ವೈಶಾಲಿ ಸ್ವಾಗತಿಸಿದರು. ದೇವಿಕಾ ವಂದಿಸಿದರು.