Advertisement

ನಿರಾಣಿ ಉದ್ಯಮ ಸಂಸೆಯಿಂದ ಉದ್ಯೋಗ ಸೃಷ್ಟಿ

05:53 PM Feb 09, 2021 | Nagendra Trasi |

ವಿಜಯಪುರ: ನಿರಾಣಿ ಉದ್ಯಮ ಸಮೂಹ ಸಂಸ್ಥೆ ಈ ಭಾಗದ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಅವಳಿ ಜಿಲ್ಲೆಗಳ ನಿರುದ್ಯೋಗಿ ಯುವ ಸಮುದಾಯದ ಪಾಲಿಗೆ ವರವಾಗಿದೆ. ಸಾಹಸಿ ಹಾಗೂ ಯಶಸ್ವಿ ಉದ್ಯಮಿಯಾಗಿರುವ ಮುರುಗೇಶ ನಿರಾಣಿ, ಸಕ್ಕರೆ ಕಾರ್ಖಾನೆಗಳನ್ನು ಕಟ್ಟುವ ಮೂಲಕ ರೈತರ ಬೆಳೆಗೆ ಸದೃಢ ಮಾರುಕಟ್ಟೆ ಕಲ್ಪಿಸಿದ್ದಾರೆ ಎಂದು ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.

Advertisement

ಸೋಮವಾರ ಬಬಲೇಶ್ವರ ಪಟ್ಟಣದಲ್ಲಿ ವಿಜಯ ಸೌಹಾರ್ದ ಕ್ರೆಡಿಟ್‌ ಸಹಕಾರಿಯ 54ನೇ ಶಾಖೆಗೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ದೈನಂದಿನ ವ್ಯವಹಾರಗಳಿಗೆ ವಿಜಯ ಸಹಕಾರಿಯು ಸಹಕಾರಿಯಾಗಲಿದೆ ಎಂದರು. ಇಡಿ ಜಗತ್ತು ಕೊರೊನಾದಿಂದ ತತ್ತರಿಸಿ ಮನೆಯಲ್ಲಿ ಕುಳಿತಿದ್ದ ವೇಳೆಯಲ್ಲಿ ಮುರುಗೇಶ ನಿರಾಣಿ ಸ್ಥಗಿತಗೊಂಡ ಕೈಗಾರಿಕೆಗಳಿಗೆ ಮರು ಜೀವ ನೀಡಿ ಹೊಸ ಉದ್ಯೋಗಳನ್ನು ಸೃಷ್ಟಿಸಿದ್ದಾರೆ.

ಬಬಲೇಶ್ವರ ಭಾಗದಲ್ಲಿಯೂ ಒಂದು ಸಕ್ಕರೆ ಕಾರ್ಖಾನೆ ಸ್ಥಾಪಿಸಿದರೆ ಈ ಭಾಗದ ರೈತರಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಆಸರೆಯಾಗುತ್ತದೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಮುರುಗೇಶ ನಿರಾಣಿಯವರ ಸ್ವಭಾವ ಹಾಗೂ ಗುಣಕ್ಕೆ ಯಶಸ್ಸು ಸಿದ್ಧಿಸಿದೆ. ಶ್ರೀಮಂತಿಕೆ, ಪದವಿಯನ್ನು ಮೀರಿದ ಸರಳತೆ ಅವರಲ್ಲಿದೆ. ಹೀಗಾಗಿ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಅವರ ಸಂಸ್ಥೆಯಿಂದ ರೈತರಿಗೆ ಈ ನಾಡಿಗೆ ಮತ್ತಷ್ಟು ಒಳ್ಳೆದಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಬಬಲೇಶ್ವರ ಜನತೆಯೊಂದಿಗೆ ನನ್ನದು ವಿಶೇಷ ಬಾಂಧವ್ಯವಿದೆ. ಈ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ. ನಿರಾಣಿ ಸಮೂಹದಿಂದ ಮೂಲಕ ಸಕ್ಕರೆ, ವಿದ್ಯುತ್‌, ಇಥೇನಾಲ್‌, ಸಿಒ2, ಸಿಎನ್‌ಜಿ, ಶಿಕ್ಷಣ, ಬ್ಯಾಂಕಿಂಗ್‌, ಸೂಪರ್‌ ಮಾರ್ಕೆಟ್‌, ಸಮಾಜ ಸೇವೆ ಎಲ್ಲ ವಿಭಾಗಗಳಲ್ಲಿಯೂ ಸೇವೆ ದೊರೆಯುತ್ತಿದೆ. ಲಕ್ಷಾಂತರ ರೈತ ಕುಟುಂಬಗಳು ಹಾಗೂ ನೌಕರ ಕುಟುಂಬಗಳು ಜೊತೆಯಲ್ಲಿ ನಾಡಿನ ಏಳ್ಗೆಗೆ ದುಡಿಯುತ್ತಿದ್ದೇವೆ ಎಂಬ ಆತ್ಮತೃಪ್ತಿ ನಮ್ಮ ಸಂಸ್ಥೆಗಿದೆ ಎಂದು ಹೇಳಿದರು.

ರೈತರ ಮಕ್ಕಳು ಉದ್ಯಮಿಗಳಾಗಬೇಕು. ಸ್ಥಳೀಯ ಮಟ್ಟದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಬೇಕು. ಕೃಷಿ, ನೀರಾವರಿ, ಶಿಕ್ಷಣ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು. ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಮುರುಗೇಶ ನಿರಾಣಿ ಅವರನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು ಸಚಿವ ಮುರುಗೇಶ ನಿರಾಣಿ ಅವರನ್ನು ಸನ್ಮಾನಿಸಿದರು.

Advertisement

ಎಂ.ಎಚ್‌. ಪತ್ತೆನ್ನವರ ಪ್ರಾಸ್ತಾವಿಕ ಮಾತನಾಡಿದರು. ಗುರುಪಾದೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯ ಸಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಮೇಶ ಕೋಳಕೂರ, ಸುರೇಶ ಬಿರಾದರ, ದೇವಾನಂದ ಆಲಗೊಂಡ, ಶೇಖಪ್ಪ ಕೊಪ್ಪದ, ಬೋರಮ್ಮ ಬೂದಿಹಾಳ, ಬಸವರಾಜ ಶಿರಮಗೊಂಡ, ಮಲ್ಲಪ್ಪ ಕೋಟಿಹಾಳ, ಮನೋಹರ ಜಂಗಮಶೆಟ್ಟಿ, ಸಂಗಪ್ಪ ತಿಮ್ಮಶೆಟ್ಟಿ, ಮೊಹನ ಜಾಧವ, ಜಗದೀಶ ಶಿರಾಳಶೆಟ್ಟಿ, ಅರ್ಜುನ ದೇವಕ್ಕಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next