Advertisement

ಬ್ಯಾಂಕಿಂಗ್‌ ಕ್ಷೇತ್ರದಲ್ಲೂ ಉದ್ಯೋಗ ವಂಚಿತರು

11:25 PM Oct 30, 2019 | Lakshmi GovindaRaju |

ಬೆಂಗಳೂರು: ದೇಶಕ್ಕೆ ಅತಿ ಹೆಚ್ಚು ಬ್ಯಾಂಕ್‌ಗಳನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಕರ್ನಾಟಕದ್ದು. ಆ ಮೂಲಕ ಅತ್ಯಧಿಕ ಉದ್ಯೋಗ ಸೃಷ್ಟಿಯಾಗುತ್ತಿರುವುದೂ ಇದೇ ರಾಜ್ಯದಲ್ಲಿ. ಆದರೆ, ಅತಿ ಹೆಚ್ಚು ಉದ್ಯೋಗ ವಂಚಿತರಾಗುತ್ತಿರುವವರು ಮಾತ್ರ ಕನ್ನಡಿಗರು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಿಧಾನವಾಗಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಉತ್ತರ ಭಾರತ ಮತ್ತು ಆಂಧ್ರಪ್ರದೇಶದ ಪ್ರಾಬಲ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಮತ್ತು ಐಟಿ ಕ್ಷೇತ್ರದಲ್ಲಿ ಕನ್ನಡಿಗರ ಅಸ್ತಿತ್ವಕ್ಕಾಗಿ ದಶಕದ ಹಿಂದೆ ನಡೆದ ಹೋರಾಟ ಮರುಕಳಿಸುವ ಅನಿವಾರ್ಯತೆ ಎದುರಾಗಿದೆ.

Advertisement

ಕ್ಲರ್ಕ್‌ ಹುದ್ದೆಯಿಂದ ಹಿಡಿದು ಉನ್ನತ ಅಧಿಕಾರಿ ಹಂತದ ಬಹುತೇಕ ಹುದ್ದೆಗಳು ಉತ್ತರ ಭಾರತದ ಪಾಲಾಗುತ್ತಿವೆ. ಉದಾಹರಣೆಗೆ, ಐಬಿಪಿಎಸ್‌ (ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪಸೋನೆಲ್‌ ಸೆಲೆಕ್ಷನ್‌) ಪ್ರಕಾರ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಕಳೆದ ಐದು ವರ್ಷ (2012-13 ರಿಂದ 2016-17)ಗಳಲ್ಲಿ 1,470 ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು, 950 ಕನ್ನಡಿಗರ ಪಾಲಾಗಿವೆ. ಅದೇ ರೀತಿ, ಆರ್‌ಆರ್‌ಬಿ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು)ಯು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ 2015-16 ರಿಂದ 2017-18ರ ಅವಧಿಯಲ್ಲಿ ಸ್ಕೇಲ್‌ -1ರಲ್ಲಿ ಒಟ್ಟಾರೆ 937ಹುದ್ದೆಗಳನ್ನು ಆಹ್ವಾನಿಸಲಾಗಿದ್ದು, ಕೇವಲ 135 ಕನ್ನಡಿಗರ ಪಾಲಾಗಿವೆ. ಉಳಿದವುಗಳನ್ನು ಅನ್ಯಭಾಷಿಕರು ಗಿಟ್ಟಿಸಿಕೊಂಡಿದ್ದಾರೆ.

ಅಲ್ಲದೆ, ಆಫೀಸ್‌ ಅಸಿಸ್ಟೆಂಟ್‌ಗೆ ಸಂಬಂಧಿಸಿದ 805 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಭರ್ತಿ ಮಾಡಿಕೊಂಡಿದ್ದರಲ್ಲಿ 50 ಮಾತ್ರ ಕನ್ನಡಿಗರಿದ್ದಾರೆ. ಇಷ್ಟೇ ಯಾಕೆ, ಕಾರ್ಪೋರೇಶನ್‌ ಬ್ಯಾಂಕ್‌ನಲ್ಲಿ 298 ಪ್ರೊಬೇಷನರಿ ಆಫಿಸರ್‌ ಹುದ್ದೆಗಳಿಗೆ ಆಹ್ವಾನಿಸಲಾಗಿತ್ತು. ಇದರಲ್ಲಿ 263 ಕನ್ನಡೇತರರು ಬಾಚಿಕೊಂಡಿದ್ದಾರೆ. ಇದು ಸ್ವತಃ ಮಾಹಿತಿ ಹಕ್ಕು ಕಾಯ್ದೆ ಅಡಿ ನೀಡಿದ ಮಾಹಿತಿ ಆಗಿದೆ. ಇವು ಕೆಲವು ಸ್ಯಾಂಪಲಗಳಷ್ಟೇ. ರಾಜ್ಯದಲ್ಲಿ 17 ಬ್ಯಾಂಕ್‌ಗಳಿದ್ದು (ವಿಲೀನಗೊಂಡ ನಂತರ ಕಡಿಮೆ ಆಗಿವೆ), ಅವುಗಳಲ್ಲಿ ಬಹುತೇಕ ಎಲ್ಲ ನೇಮಕಾತಿಗಳಲ್ಲಿ ಕನ್ನಡಿಗರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಉದ್ಯೋಗಾಕಾಂಕ್ಷಿ ಲೋಕೇಶ್‌ ಸ್ಪಷ್ಟಪಡಿಸುತ್ತಾರೆ.

ಕಾರಣಗಳಿವು: ಬ್ಯಾಂಕಿಂಗ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಜಾಹಿರಾತುಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ. ಇಲ್ಲಿ ಶಾಖೆಗಳು ಹೆಚ್ಚಿರುವುದರಿಂದ, ಉತ್ತರ ಭಾರತದ ಲ್ಲಿಗಿಂತ ದುಪ್ಪಟ್ಟು ಹುದ್ದೆಗಳು ಇಲ್ಲಿರುತ್ತವೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಅಷ್ಟೇ ಅಲ್ಲ, ಹಿಂದಿಗೆ 40 ಅಂಕಗಳಿರುತ್ತವೆ. ಇದೆಲ್ಲ ಕಾರಣಗಳಿಂದ ಉತ್ತರ ಭಾರತದ ಅಭ್ಯರ್ಥಿ ಗಳು ಅನಾಯಾಸವಾಗಿ ಪಾಸಾಗಿ ಬಿಡುತ್ತಾರೆ.

ಆಂಧ್ರದ ಪ್ರಾದೇಶಿಕ ಪ್ರೀತಿ: ಈ ಎಲ್ಲ ಸವಾಲುಗಳನ್ನು ದಾಟಿ ಬಂದರೂ, ಸಂದರ್ಶನದಲ್ಲಿ ಮತ್ತೊಂದು ಸಮಸ್ಯೆ ಇದೆ. ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಬ್ಯಾಂಕಿಂಗ್‌ ಕೋಚಿಂಗ್‌ ಸೆಂಟರ್‌ಗಳಿದ್ದು, ಇವುಗಳನ್ನು ನಡೆಸುವವರಲ್ಲಿ ಕೆಲವರು ಸಂದರ್ಶನ ಸಮಿತಿಯಲ್ಲೂ ಇರುತ್ತಾರೆ. ಸಹಜವಾಗಿ ಪ್ರಾದೇಶಿಕ ಪ್ರೀತಿ ಮೆರೆಯುತ್ತಾರೆ. ಇಲ್ಲಿಯೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎನ್ನುತ್ತಾರೆ ಮತ್ತೂಬ್ಬ ಉದ್ಯೋಗಾಕಾಂಕ್ಷಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಬಾಬುರೆಡ್ಡಿ. ಹಿಂದಿ ಮಾತನಾಡುವ ರಾಜ್ಯಗಳಿಗೆ ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಹಿಂದಿಗೆ 40 ಅಂಕಗಳಿರುತ್ತವೆ. ಹಾಗಾಗಿ, ಆ ರಾಜ್ಯದ ಅಭ್ಯರ್ಥಿಗಳಿಗೆ ಸುಲಭವಾಗಿ ಅಂಕಗಳು ದೊರೆಯುತ್ತವೆ. ಆದರೆ, ಹಿಂದಿಯೇತರ ರಾಜ್ಯಗಳಲ್ಲಿ ಇದು ಕಷ್ಟವಾಗುತ್ತದೆ ಎಂದು ಕನ್ನಡಪರ ಹೋರಾಟಗಾರರು ಆರೋಪಿಸುತ್ತಾರೆ.

Advertisement

ಇತರ ಕ್ಷೇತ್ರದಲ್ಲೂ ಅನ್ಯಾಯ: ಬ್ಯಾಂಕಿಂಗ್‌ ಕ್ಷೇತ್ರ ಮಾತ್ರವಲ್ಲ; ರೈಲ್ವೆ, ಸಿಆರ್‌ಪಿಎಫ್‌, ಯುಪಿಎಸ್ಸಿ, ಎಸ್‌ಎಸ್ಸಿ ವಿಚಾರದಲ್ಲೂ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಇದರಲ್ಲಿ ಅಂತರರಾಜ್ಯ ವರ್ಗಾವಣೆಗೆ ಅವಕಾಶ ಇಲ್ಲದ ಹುದ್ದೆಗಳೇ ಹೆಚ್ಚಿವೆ. ಅವು ಕನ್ನಡೇತರರ ಪಾಲಾಗುತ್ತಿದ್ದು, ಕಾಯಂ ಆಗಿ ಅವರು ಇಲ್ಲಿಯೇ ಉಳಿಯುತ್ತಾರೆ. ಅವರೆಲ್ಲಾ ಕನ್ನಡ ಕಲಿಯುವ ಗೋಜಿಗೆ ಹೋಗುವುದಿಲ್ಲ. ಇಲ್ಲಿ ಒಂದೆಡೆ ಕನ್ನಡಿಗರು ಅವಕಾಶವಂಚಿತರಾಗುತ್ತಾರೆ. ಮತ್ತೂಂದೆಡೆ, ಸೇವೆಯೂ ಸರಿಯಾಗಿ ಸಿಗುವುದಿಲ್ಲ ಎಂದು ಬನವಾಸಿ ಬಳಗದ ಸದಸ್ಯ ಅರುಣ್‌ ಜಾವಗಲ್‌ ಬೇಸರ ವ್ಯಕ್ತಪಡಿಸುತ್ತಾರೆ.

ಇಂಗ್ಲಿಷ್‌ ಪರ್ಯಾಯ ಆಯ್ಕೆ: ಆಡಳಿತ ಭಾಷೆ ಹಿನ್ನೆಲೆಯಲ್ಲಿ ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಹಿಂದಿ ಕೂಡ ಐದು ವಿಷಯಗಳಲ್ಲಿ ಒಂದಾಗಿದೆ. ಒಟ್ಟಾರೆ 200 ಅಂಕಗಳಲ್ಲಿ 40 ಅಂಕಗಳನ್ನು ಇದಕ್ಕೆ ಮೀಸಲಿಡಲಾಗಿದೆ. ಇದರಿಂದ ಹಿಂದಿ ಮಾತನಾಡುವ ರಾಜ್ಯಗಳ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ. ಸಹಜವಾಗಿ ಹೆಚ್ಚು ಅಂಕ ಗಳಿಕೆಗೆ ಪೂರಕವಾಗಿದೆ. ಆದರೆ, ಹಿಂದಿಯೇತರ ರಾಜ್ಯಗಳಿಗೆ ಇದು ಕಷ್ಟವಾಗುತ್ತದೆ. ಪರ್ಯಾಯ ಆಯ್ಕೆ ಇರುವುದು ಇಂಗ್ಲಿಷ್‌.

90 ಸಾವಿರ ಹುದ್ದೆ: ಖಾಸಗಿ ಕ್ಷೇತ್ರದಲ್ಲೂ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಆಗುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ನೌಕರಿ ಡಾಟ್‌ ಕಾಮನಲ್ಲೇ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದರೆ, ಸುಮಾರು 90 ಸಾವಿರ ಹುದ್ದೆಗಳಿರುವುದನ್ನು ಕಾಣಬಹುದು.

ಆಂಧ್ರದಲ್ಲಿ ಅತಿ ಹೆಚ್ಚು ಬ್ಯಾಂಕಿಂಗ್‌ ಕೋಚಿಂಗ್‌ ಸೆಂಟರ್‌ಗಳಿದ್ದು, ಇವುಗಳನ್ನು ನಡೆಸುವವರಲ್ಲಿ ಕೆಲವರು ಸಂದರ್ಶನ ಸಮಿತಿಯಲ್ಲೂ ಇರುತ್ತಾರೆ. ಸಹಜವಾಗಿ ಪ್ರಾದೇಶಿಕ ಪ್ರೀತಿ ಮೆರೆಯುತ್ತಾರೆ. ಇಲ್ಲಿಯೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ.
-ಬಾಬುರೆಡ್ಡಿ, ಮಾಹಿತಿ ಹಕ್ಕು ಕಾರ್ಯಕರ್ತ

ಬ್ಯಾಂಕಿಂಗ್‌ ಕ್ಷೇತ್ರ ಮಾತ್ರವಲ್ಲ; ರೈಲ್ವೆ, ಸಿಆರ್‌ಪಿಎಫ್‌, ಯುಪಿಎಸ್ಸಿ, ಎಸ್‌ಎಸ್ಸಿ ವಿಚಾರದಲ್ಲೂ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಇಲ್ಲಿ ಒಂದೆಡೆ ಕನ್ನಡಿಗರು ಅವಕಾಶ ವಂಚಿತರಾಗುತ್ತಾರೆ. ಮತ್ತೂಂದೆಡೆ, ಸೇವೆಯೂ ಸರಿಯಾಗಿ ಸಿಗುವುದಿಲ್ಲ.
-ಅರುಣ್‌ ಜಾವಗಲ್‌, ಬನವಾಸಿ ಬಳಗದ ಸದಸ್ಯ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next