Advertisement

ಹಾಸ್ಟೆಲ್ ಶುಲ್ಕ ಶೇ.300ರಷ್ಟು ಏರಿಕೆ; ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆ, ಘರ್ಷಣೆ

09:45 AM Nov 12, 2019 | Team Udayavani |

ನವದೆಹಲಿ: ಆಡಳಿತ ಮಂಡಳಿ ವಿದ್ಯಾರ್ಥಿಗಳ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನವದೆಹಲಿಯ ಜವಾಹರಲಾಲ್ ನೆಹರು ಯೂನಿರ್ವಸಿಟಿಯ ವಿದ್ಯಾರ್ಥಿಗಳು ಸೋಮವಾರ ನಡೆಸಿದ ಭಾರೀ ಪ್ರತಿಭಟನೆ ಪೊಲೀಸರ ನಡುವಿನ ಘರ್ಷಣೆಗೆ ಎಡೆಮಾಡಿಕೊಟ್ಟ ಘಟನೆ ನಡೆದಿದೆ.

Advertisement

ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ಸಿಕಲ್ ಎಜುಕೇಶನ್ (ಎಐಸಿಟಿಯು)ನ ಆಡಿಟೋರಿಯಂನಲ್ಲಿ ನಡೆದ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಎಐಸಿಟಿಯುವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದರು.

ಹಾಸ್ಟೆಲ್ ಶುಲ್ಕವನ್ನು ಏಕಾಏಕಿ ಶೇ.300ರಷ್ಟು ಏರಿಕೆ ಮಾಡಿರುವುದು ಜೆಎನ್ ಯು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಸ್ತುತ ಹಾಸ್ಟೆಲ್ ಶುಲ್ಕ 2,500 ರೂಪಾಯಿ ಇದ್ದಿದ್ದು, ಇದೀಗ 7,500 ರೂಪಾಯಿಗೆ ಏರಿಕೆ ಮಾಡಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದು ತಮಗೆ ದುಬಾರಿ ಶುಲ್ಕವಾಗಲಿದ್ದು, ಕೂಡಲೇ ಭಾರೀ ಪ್ರಮಾಣದ ಶುಲ್ಕ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಜೆಎನ್ ಯು ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ಜೆಎನ್ ಯುನಿಂದ ಎಐಸಿಟಿಯುವರೆಗೆ 3 ಕಿಲೋ ಮೀಟರ್ ಅಂತರವಿದ್ದು, ಪ್ರತಿಭಟನೆ ಎಚ್ಚರಿಕೆ ಹಿನ್ನೆಲೆಯಲ್ಲಿ ಎಐಸಿಟಿಯು ಆವರಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಆದರೆ ಎಲ್ಲಾ ಬ್ಯಾರಿಕೇಡ್ ಗಳನ್ನು ಮುರಿದು ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ಮುಂದುವರಿದಿತ್ತು. ದಿಲಿ ಪೊಲೀಸ್ ಗೋ ಬ್ಯಾಕ್, ಉಪಕುಲಪತಿ ಜಗದೀಶ್ ಕುಮಾರ್ ಕ…ಎಂಬ ಘೋಷಣೆ ಕೂಗುತ್ತಿದ್ದರು.

Advertisement

ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಚಪ್ಪಲಿ, ಶೂಗಳನ್ನು ಎಸೆದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಲಾಠಿಚಾರ್ಜ್ ಹಾಗೂ ಜಲಫಿರಂಗಿ ಬಳಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಕೊನೆಗೆ ಶುಲ್ಕ ಏರಿಕೆ ಕುರಿತು ಶೀಘ್ರವೇ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮಾನವ ಸಂಪನ್ಮೂಲ ಸಚಿವಾಲಯ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next