ನವದೆಹಲಿ: ಜವಾಹರಲಾಲ್ ನೆಹರು ಯೂನಿರ್ವಸಿಟಿಯಲ್ಲಿ ಗುರುವಾರ (ಫೆ.29) ತಡರಾತ್ರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡ ಪಕ್ಷ ಬೆಂಬಲಿತ ಗುಂಪುಗಳ ಸದಸ್ಯರ ನಡುವೆ ಮಾರಾಮಾರಿ ನಡೆದಿದ್ದು, ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:Vijayapura; ದಯಾ ಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಪೊಲೀಸರು
ಮುಂಬರುವ ವಿದ್ಯಾರ್ಥಿ ಒಕ್ಕೂಟದ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಯೂನಿರ್ವಸಿಟಿ ಕ್ಯಾಂಪಸ್ ಒಳಗಡೆ ವಿದ್ಯಾರ್ಥಿ ಸಂಘಟನೆಯ ಗುಂಪುಗಳು ಹೊಡೆದಾಡಿಕೊಂಡಿರುವ ದೃಶ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿವೆ.
ಚುನಾವಣಾ ಸಮಿತಿಯ ಸದಸ್ಯರ ನೇಮಕಾತಿ ವಿಚಾರದಲ್ಲಿ ವಿದ್ಯಾರ್ಥಿ ಸಂಘಟನೆಯ ಗುಂಪುಗಳ ನಡುವೆ ವಾಗ್ವಾದ ನಡೆದು ನಂತರ ಮಾರಾಮಾರಿ ನಡೆದಿರುವುದಾಗಿ ವರದಿ ತಿಳಿಸಿದೆ.
ಒಂದು ವಿಡಿಯೋದಲ್ಲಿ, ವಿದ್ಯಾರ್ಥಿಯೊಬ್ಬನ ತಲೆಯಿಂದ ರಕ್ತ ಸುರಿಯುತ್ತಿದ್ದು, ಮತ್ತೊಬ್ಬ ವಿದ್ಯಾರ್ಥಿ ಸೈಕಲ್ ಅನ್ನು ಎತ್ತಿ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ. ಗಾಯಗೊಂಡ ಕೆಲವು ವಿದ್ಯಾರ್ಥಿಗಳನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಯೂನಿರ್ವಸಿಟಿ ಆಡಳಿತ ಮಂಡಳಿ ಇನ್ನಷ್ಟೇ ಪ್ರಕಟನೆ ನೀಡಬೇಕಾಗಿದೆ. ಆದರೆ ವಿದ್ಯಾರ್ಥಿ ಸಂಘಟನೆಗಳು ಪ್ರಕರಣದ ಬಗ್ಗೆ ಒಬ್ಬರಿಗೊಬ್ಬರು ಆರೋಪ ಹೊರಿಸುತ್ತಿರುವುದಾಗಿ ವರದಿ ತಿಳಿಸಿದೆ.