Advertisement

ಜ್ಞಾನಪೀಠ ಪುರಸ್ಕೃತರು ಕಲಿತ ಶಾಲೆಗಳಿಗೆ ಇನ್ನೂ ಕೈಗೂಡದ ಅಭಿವೃದ್ಧಿ ಭಾಗ್ಯ

12:31 AM Dec 26, 2021 | Team Udayavani |

ಕೋಟ: ರಾಜ್ಯದ ಎಂಟು ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಶಿಕ್ಷಣ ಪಡೆದ 11 ಸರಕಾರಿ ಶಾಲೆಗಳನ್ನು 16.88 ಕೋಟಿ ರೂ.ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಯೋಜನೆಯನ್ನು ರಾಜ್ಯ ಸರಕಾರ ಘೋಷಿಸಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Advertisement

ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ 2021ರ ಮಾರ್ಚ್‌ನಲ್ಲಿ ಬಜೆಟ್‌ ಮಂಡನೆ ವೇಳೆ ಈ ಯೋಜನೆಯನ್ನು ಘೋಷಿಸಿದ್ದರು. ಬಳಿಕ ಸರಕಾರವು ಅನುದಾನ ಮೀಸಲಿರಿಸಿ 2021-22ನೇ ಸಾಲಿನ ಅರ್ಥಿಕ ವರ್ಷ ಕೊನೆಗೊಳ್ಳುವುದರೊಳಗೆ ಅನುಷ್ಠಾನಗೊಳಿಸುವಂತೆ 2021ರ ಜು. 17ರಂದು ಮರು ಆದೇಶ ನೀಡಿತ್ತು. ಅದಾಗಿ 3 ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಆರ್ಥಿಕ ವರ್ಷ ಅಂತ್ಯಗೊಳ್ಳಲು 3 ತಿಂಗಳಷ್ಟೇ ಬಾಕಿ ಇದ್ದು ಅಷ್ಟರೊಳಗೆ ಕಾಮಗಾರಿ ಅನುಷ್ಠಾನವಾಗದಿದ್ದರೆ ಬಹು ನಿರೀಕ್ಷಿತ ಯೋಜನೆಯೊಂದು ಹಳ್ಳ ಹಿಡಿಯುವ ಆತಂಕವಿದೆ.

ಈ ಶಾಲೆಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ, ಸ್ಮಾರ್ಟ್‌ ತರಗತಿ, ಪೀಠೊಪಕರಣ, ನೀರು, ಕ್ರೀಡಾ ಸಾಮಗ್ರಿ ಸೇರಿದಂತೆ ಸಮಗ್ರ ಅಭಿವೃದ್ಧಿ ಹಾಗೂ ಜ್ಞಾನಪೀಠ ಪುರಸ್ಕೃತರ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಲಾಗಿತ್ತು. ಇದಕ್ಕಾಗಿ ಜಿ.ಪಂ. ಇಸಿಒ, ಡಿಡಿಪಿಇ, ಜಿ.ಪಂ. ಉಪಕಾರ್ಯದರ್ಶಿ ಸೇರಿದಂತೆ ಆರು ಸದಸ್ಯ ರನ್ನೊಳಗೊಂಡ ಸಮಿತಿ ಕೂಡ ರಚನೆಯಾಗಿದೆ.

ಯೋಜನೆ ಅಂತಿಮ; ಕಾಮಗಾರಿ ವಿಳಂಬ :

ಕಾಮಗಾರಿಯ ಅಂದಾಜು ವೆಚ್ಚದ ಯೋಜನೆ ಪಟ್ಟಿ ಯನ್ನು ಎಲ್ಲ ಶಾಲೆಗಳಿಂದ ಇಲಾಖೆಗೆ ತಲುಪಿಸಲಾಗಿದೆ. ಈ ಹಿಂದೆ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದ ಕಾಮಗಾರಿಯನ್ನು ಇದೀಗ ಬೇರೊಂದು ಸಂಸ್ಥೆಗೆ ನೀಡಲಾಗಿದೆ. 2021-22

Advertisement

ವರ್ಷ ಕೊನೆಗೊಳ್ಳುವ ಮೊದಲೇ ಅನುಷ್ಠಾನಿಸುವುದು ಅಗತ್ಯ ಎನ್ನುತ್ತಾರೆ ಶಿಕ್ಷಣಪ್ರೇಮಿಗಳು.

ಯಾವೆಲ್ಲ ಶಾಲೆಗಳು ಆಯ್ಕೆ ? :

1.ಕುವೆಂಪು ಕಲಿತ ತೀರ್ಥಹಳ್ಳಿ  ಮಾದರಿ ಹಿ.ಪ್ರಾ. ಶಾಲೆ

2.ದ.ರಾ. ಬೇಂದ್ರೆ ಕಲಿತ ಧಾರವಾಡದ  ಗಾಂಧೀ ಚೌಕ ಹಿ.ಪ್ರಾ. ಶಾಲೆ

3.ಡಾ| ಶಿವರಾಮ ಕಾರಂತ ಓದಿದ  ಕೋಟ ಸ.ಹಿ.ಪ್ರಾ. ಶಾಲೆ

4.ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅಭ್ಯಾಸ ಮಾಡಿದ ಶಿವಾರಪಟ್ಟಣ ಸ.ಹಿ.ಪ್ರಾ. ಶಾಲೆ

5.ವಿ.ಕೆ. ಗೋಕಾಕ್‌ ಕಲಿತ ಸವಣೂರು ಸ.ಹಿ.ಪ್ರಾ. ಶಾಲೆ ಮತ್ತು ಸವಣೂರು ಪ್ರೌಢಶಾಲೆ

6.ಯು.ಆರ್‌. ಆನಂತಮೂರ್ತಿ ಓದಿದ ತೀರ್ಥಹಳ್ಳಿಯ ದೂರ್ವಾಸಪುರಂ ಹಿ.ಪ್ರಾ. ಶಾಲೆ, ಕೋಣಂದೂರು ಪಬ್ಲಿಕ್‌ ಶಾಲೆ

7.ಗಿರೀಶ್‌ ಕಾರ್ನಾಡ್‌ ಕಲಿತ ಶಿರಸಿಯ ರಾಯಪ್ಪ ಹುಲೇಕಲ್‌ ಹಿ.ಪ್ರಾ.ಶಾಲೆ,  ಶಿರಸಿ ಮಾರಿಕಾಂಬಾ ಪ್ರೌಢಶಾಲೆ

8.ಚಂದ್ರಶೇಖರ ಕಂಬಾರ ಓದಿದ ಹುಕ್ಕೇರಿಯ ಘೋಡಗೇರಿ ಹಿ.ಪ್ರಾ. ಶಾಲೆ

ಚುನಾವಣ ನೀತಿಸಂಹಿತೆ ಮುಂತಾದ ಕಾರಣಗಳಿಂದಾಗಿ ಯೋಜನೆ ಅನುಷ್ಠಾನ ವಿಳಂಬವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರ ಕಾಮಗಾರಿ ಆರಂಭಿಸು ವಂತೆ ನಿರ್ದೇಶನ ನೀಡಲಾಗುವುದು. ಅಗತ್ಯವಿದ್ದರೆ ಹೆಚ್ಚುವರಿ ಸಮಯಾವ ಕಾಶ ನೀಡುವ ಕುರಿತು ಪರಿಶೀಲಿಸಲಾಗುವುದು.  –ಡಾ| ವಿಶಾಲ್‌ ಆರ್‌.,  ಆಯುಕ್ತರು, ರಾಜ್ಯ ಶಿಕ್ಷಣ ಇಲಾಖೆ 

 

-  ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next