ವಿಜಯಪುರ: ಕೋವಿಡ್ ರೂಪಾಂತರಿ ಜೆಎನ್-1 ಸೋಂಕು ಜಿಲ್ಲೆಯಲ್ಲಿ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾದಲ್ಲಿ ಅಗತ್ಯಬಿದ್ದಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ತಿಳಿಸಿದರು.
ಡಿ. 20ರ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಸಿದ್ಧತೆ ಕುರಿತು ಮಾಹಿತಿ ನೀಡಿದ ಅವರು, ಶನಿವಾರದಿಂದ ಜಿಲ್ಲೆಯಲ್ಲಿ ಗಂಟಲು ದ್ರವ ಪರೀಕ್ಷೆಗಾಗಿ ಆರ್.ಟಿ.ಪಿ.ಸಿ.ಆರ್. ಕೇಂದ್ರವನ್ನು ಸನ್ನದ್ಧಗೊಳಿಸಲಾಗುವುದು ಎಂದು ವಿವರಿಸಿದರು.
ಕೋವಿಡ್ ರೂಪಾಂತರಿ ತಳಿ ಸೋಂಕು ಹರಡದಂತೆ ಹಾಗೂ ಪರಿಸ್ಥಿತಿ ಎದುರಿಸುವ ಕುರಿತು ಸರ್ಕಾರ ಮಾರ್ಗಸೂಚಿ ಬಿಡುಗಡೆ. ಜಿಲ್ಲೆಯಲ್ಲಿ ಕೋವಿಡ್ ರೂಪಾಂತರಿ ಹಾವಳಿ ಇಲ್ಲ. ಆದರೂ ಸಂಭವನೀಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.
ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಹಿತ ಪ್ರತ್ಯೇಕ ಹಾಸಿಗೆಗಳ ವಾರ್ಡ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರು ತಿಂಗಳಿಗೆ ಸಾಕಾಗುವಷ್ಟು ಔಷಧಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಡಿ.ಎಚ್.ಒ. ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ವಲನ್ಸ್ ಅಧಿಕಾರಿ ಡಾ.ಕವಿತಾ ದೊಡಮನಿ ಉಪಸ್ಥಿತರಿದ್ದರು.