Advertisement

ಜಾಲ ವಿಸ್ತರಿಸಲು ಜೆಎಂಬಿ ಸಂಚು: ಬೆಂಗಳೂರಿನಲ್ಲಿ 22 ಅಡಗುದಾಣ ನಿರ್ಮಿಸಿರುವ ಉಗ್ರರು

10:30 AM Oct 16, 2019 | mahesh |

ಹೊಸದಿಲ್ಲಿ: “ಜಮಾತ್‌- ಉಲ್‌-ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಸಂಘಟನೆಯು ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದ್ದು, ಅದು ಭಾರತಾ ದ್ಯಂತ ತನ್ನ ಬೇರುಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ’ ಎಂಬ ಆಘಾತಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ.

Advertisement

ಹೊಸದಿಲ್ಲಿಯಲ್ಲಿ ನಡೆದ ಉಗ್ರ ನಿಗ್ರಹ ಪಡೆ(ಎಟಿಎಸ್‌)ಗಳ ಮುಖ್ಯಸ್ಥರ ಸಭೆಯಲ್ಲಿ ಮುಖ್ಯಸ್ಥ ವೈ.ಸಿ. ಮೋದಿ ಅವರು ಈ ವಿಚಾರ ಬಹಿರಂಗಪಡಿಸಿದ್ದು, ಜೆಎಂಬಿ ಉಗ್ರ ಸಂಘಟನೆಯ 125 ಮಂದಿ ಶಂಕಿತರ ಪಟ್ಟಿಯನ್ನು ವಿವಿಧ ರಾಜ್ಯಗಳೊಂದಿಗೆ ಈಗಾಗಲೇ ಹಂಚಿಕೊಂಡಿದ್ದೇವೆ ಎಂದೂ ಮಾಹಿತಿ ನೀಡಿದರು.

“ಕರ್ನಾಟಕ, ಝಾರ್ಖಂಡ್‌, ಬಿಹಾರ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಬಾಂಗ್ಲಾದೇಶಿ ವಲಸಿಗರ ರೂಪದಲ್ಲಿ ಜೆಎಂಬಿ ಉಗ್ರರು ತಮ್ಮ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಜೆಎಂಬಿ ನಾಯಕತ್ವದೊಂದಿಗೆ ನಂಟು ಹೊಂದಿರುವ 125 ಶಂಕಿತರ ಪಟ್ಟಿಯನ್ನು ನಾವು ತಯಾರಿಸಿ, ರಾಜ್ಯಗಳಿಗೆ ಹಂಚಿದ್ದೇವೆ’ ಎಂದು ಮೋದಿ ತಿಳಿಸಿದರು.

ಬೆಂಗಳೂರಿನಲ್ಲಿದೆ 22 ಅಡಗುದಾಣ
2014ರಿಂದ 2018ರ ವರೆಗೆ ಜೆಎಂಬಿ ಉಗ್ರರು ಬೆಂಗಳೂರಿನಲ್ಲಿ 20ರಿಂದ 22 ಅಡಗುದಾಣಗಳನ್ನು ರಚಿಸಿಕೊಂಡಿದ್ದಾರೆ. ಆ ಮೂಲಕ ದಕ್ಷಿಣ ಭಾರತದಲ್ಲಿ ಬೇರೂರಲು ಎಲ್ಲ ರೀತಿಯ ಸಿದ್ಧತೆ ನಡೆಸಿದ್ದಾರೆ. ಕರ್ನಾಟಕದ ಗಡಿ ಭಾಗದ ಕೃಷ್ಣಗಿರಿಯಲ್ಲಿ ಈಗಾಗಲೇ ಅವರು ರಾಕೆಟ್‌ ಲಾಂಚರ್‌ಗಳನ್ನು ಪ್ರಯೋಗಿಸಿಯೂ ನೋಡಿದ್ದಾರೆ ಎಂದು ಎನ್‌ಐಎ ಇನ್‌ಸ್ಪೆಕ್ಟರ್‌ ಜನರಲ್‌ ಆಲೋಕ್‌ ಮಿತ್ತಲ್‌ ತಿಳಿಸಿದ್ದಾರೆ.

ಬೌದ್ಧ ಮಂದಿರಗಳೇ ಟಾರ್ಗೆಟ್‌
ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ಸ್ಥಿತಿಗೆ ಪ್ರತೀಕಾರ ತೀರಿಸುವುದೇ ಜೆಎಂಬಿ ಉಗ್ರರ ಉದ್ದೇಶವಾಗಿದ್ದು, ಅದಕ್ಕಾಗಿ ಬೌದ್ಧ ಮಂದಿರಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಂಚು ರೂಪಿಸಿದ್ದಾರೆ. ಆರಂಭದಲ್ಲಿ ಅಂದರೆ 2007ರಲ್ಲಿ ಜೆಎಂಬಿ ಪಶ್ಚಿಮ ಬಂಗಾಲ ಮತ್ತು ಅಸ್ಸಾಂನಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು. ಅನಂತರ ಕ್ರಮೇಣ ದೇಶದ ಇತರೆಡೆಗಳಿಗೂ ವಿಸ್ತರಿಸಿಕೊಂಡಿತು. ತನಿಖೆಯ ವೇಳೆ 130ರಷ್ಟು ಸದಸ್ಯರು ಜೆಎಂಬಿ ನಾಯಕತ್ವದೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ತಿಳಿದುಬಂತು ಎಂದಿದ್ದಾರೆ ಆಲೋಕ್‌ ಮಿತ್ತಲ್‌.

Advertisement

ಆರ್‌ಎಸ್‌ಎಸ್‌ ನಾಯಕರು ಟಾರ್ಗೆಟ್‌
ಜೆಎಂಬಿ ನಾಯಕರು ಕರ್ನಾಟಕದಲ್ಲಿರುವ ಪ್ರಮುಖ ಆರ್‌ಎಸ್‌ಎಸ್‌ ನಾಯಕರನ್ನು ಗುರಿಯಾಗಿಸಿದ್ದಾರೆ ಎಂಬ ಅಂಶವನ್ನು ಎನ್‌ಐಎ ಮುಖ್ಯಸ್ಥ ವೈ.ಸಿ. ಮೋದಿ ಹೇಳಿದ್ದಾರೆ.
ಇದರ ಜತೆಗೆ ಖಲಿಸ್ಥಾನ ಉಗ್ರರೂ ಆರ್‌ಎಸ್‌ಎಸ್‌ ನಾಯಕರನ್ನು ಟಾರ್ಗೆಟ್‌ ಮಾಡಿದ್ದಾರೆ ಎಂಬ ಮತ್ತೂಂದು ಆಘಾತಕಾರಿ ಅಂಶ ಬಯಲಾಗಿದೆ. ಗಡಿಯಾಚೆಯಿಂದ ಖಲಿಸ್ಥಾನ ಚಳವಳಿ ಮತ್ತೆ ಶುರು ಮಾಡಲು ಕುಮ್ಮಕ್ಕು, ಪಂಜಾಬ್‌ನಲ್ಲಿ ಖಲಿಸ್ಥಾನ ಲಿಬರೇಶನ್‌ ಫೋರ್ಸ್‌ನ ಚಟುವಟಿಕೆಗಳನ್ನು ಶುರು ಮಾಡಲು ಯು.ಕೆ., ಇಟಲಿ, ಆಸ್ಟ್ರೇಲಿಯಗಳಿಂದ ಈ ಬಗ್ಗೆ ವಿತ್ತೀಯ ನೆರವು ನೀಡುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎನ್‌ಐಎ ಐ.ಜಿ. ಆಲೋಕ್‌ ಮಿತ್ತಲ್‌ ಹೇಳಿದ್ದಾರೆ.

ಐಸಿಸ್‌ ಜತೆ ನಂಟಿರುವ 127 ಮಂದಿ ಬಂಧನ
ಇತರ ಜೆಹಾದ್‌ ಚಟುವಟಿಕೆಗಳ ಕುರಿತು ಪ್ರಸ್ತಾವಿಸಿದ ಮಿತ್ತಲ್‌, ಮಧ್ಯಪ್ರಾಚ್ಯದ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ (ಇಸ್ಲಾಮಿಕ್‌ ಸ್ಟೇಟ್‌) ಜತೆಗೆ ನಂಟು ಹೊಂದಿರುವ ಆರೋಪದಲ್ಲಿ ಈವರೆಗೆ 127 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಬಹುತೇಕರು ತಾವು ಇಸ್ಲಾಮಿಕ್‌ ವಿದ್ವಾಂಸ ಝಾಕೀರ್‌ ನಾಯ್ಕ ಭಾಷಣದಿಂದ ಹಾಗೂ ಶ್ರೀಲಂಕಾದ ಈಸ್ಟರ್‌ ಬಾಂಬಿಂಗ್‌ನ ಮಾಸ್ಟರ್‌ಮೈಂಡ್ ಮೌಲ್ವಿ ಝೆಹ್ರಾನ್‌ ಹಶ್ಮಿಯಿಂದ ಪ್ರಚೋದನೆಗೊಳಗಾಗಿರುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ. ಕಾಶ್ಮೀರದಲ್ಲಿ ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವ ಪ್ರಕರಣದಲ್ಲಿ, ಜಮ್ಮು-ಕಾಶ್ಮೀರ ಬ್ಯಾಂಕ್‌ನಲ್ಲೇ ವ್ಯವಸ್ಥಿತ ಲೋಪಗಳಿರುವುದು ಕಂಡುಬಂದಿದೆ. ಆ ಬ್ಯಾಂಕ್‌ ಸಮರ್ಪಕವಾಗಿ ಕೆವೈಸಿ ನಿಯಮಗಳನ್ನು ಅನುಸರಿಸದೆ, ಯಾವುದೇ ವ್ಯವಸ್ಥಿತ ದತ್ತಾಂಶಗಳಿಲ್ಲದೆ, ಅಸುರಕ್ಷಿತ ಸಾಲಗಳನ್ನು ನೀಡುತ್ತಾ ಬಂದಿದೆ. ಈ ದೌರ್ಬಲ್ಯವನ್ನೇ ಉಗ್ರರು ಮತ್ತು ಅವರ ಪರ ಮೃದುಧೋರಣೆ ಹೊಂದಿರು ವವರು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂದೂ ಮಿತ್ತಲ್‌ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next