ಹುಣಸೂರು: ಕೋವಿಡ್ 19 ಸೋಂಕಿತು ನಗರದ ಹಲವೆಡೆ ಅಡ್ಡಾಡಿರುವ ಪರಿಣಾಮ ತಾಲೂಕು ಆಡಳಿತ ಜೆಎಲ್‌ಬಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದೆ. ಜೆಎಲ್‌ಬಿ ರಸ್ತೆಯಲ್ಲಿರುವ ಉದ್ಯಮಿಯೊಬ್ಬರ ತಾಯಿಯ ವಾರ್ಷಿಕ ತಿಥಿ ಕಾರ್ಯದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಸಂಬಂಧಿಕರಲ್ಲಿ ಒಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು.
ಇದೀಗ ಸೋಮವಾರ ಬೆಂಗಳೂರಿನಲ್ಲಿ ಅದೇ ಕುಟುಂಬದ 6 ಮಂದಿಗೂ ಸೋಂಕು ದೃಢ ಪಟ್ಟಿದೆ. ತಿಥಿ ಕಾರ್ಯದಲ್ಲಿ ಭಾಗವಹಿಸಿದ್ದ ಹುಣಸೂ ರಿನ 19 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಸಂಪರ್ಕಿತರು ಒಡಾಡಿದ್ದ ರಸ್ತೆ, ಮತ್ತಿತರ ಸ್ಥಳಗಳನ್ನು ಬಂದ್ ಮಾಡಲಾಗಿದೆ.
ಕೊಡಗಿನ ನಂಟು: ಕೊಡಗಿನ ಶನಿವಾರಸಂತೆಯ ಹಣ್ಣಿನ ವ್ಯಾಪಾರಿಯೊಬ್ಬ ಜೂ.11ರಿಂದ 14ರವರೆಗೆ ಹುಣಸೂರಿನ ರೆಹಮತ್ ಮೊಹಲ್ಲಾದ ಅತ್ತಿಗೆ ಮನೆಯಲ್ಲಿ ಉಳಿದುಕೊಂಡಿದ್ದ. ಈತನಿಗೆ ಕೊಡಗಿನಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈತ ಇಲ್ಲಿದ್ದ ವೇಳೆ ನಗರದ ಹಲವೆಡೆ ಅಡ್ಡಾಡಿದ್ದಾನೆ. ಅಲ್ಲದೇ ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಮನೆಯವರು ಹೋಟೆಲ್, ಅಂಗಡಿ ಮತ್ತಿತರೆಡೆ ಓಡಾಡಿದ್ದು, ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.
ಅಧಿಕಾರಿಗಳ ಸಭೆ: ಶಾಸಕ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಟಾಸ್ಕ್ ಫೋರ್ì ಸಮಿತಿ ಸಭೆಯಲ್ಲಿ ತಹಶೀಲ್ದಾರ್ ಬಸವರಾಜ್ ಮಾತನಾಡಿ, ಎಲ್ಲ ದಿನಸಿ, ಬೇಕರಿ, ಹೋಟೆಲ್, ತರಕಾರಿ ಅಂಗಡಿಗಳಲ್ಲಿಯೂ ಮಾಸ್ಕ್, ಸ್ಯಾನಿಟೈಸರ್ ಇಟ್ಟಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಸಭೆಯಲ್ಲಿ ಜಿಪಂ ಸದಸ್ಯ ಸುರೇಂದ್ರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಸನ್ನಕುಮಾರ್, ಇಒ ಗಿರೀಶ್, ಪೌರಾಯುಕ್ತ ಮಂಜುನಾಥ್ ಇದ್ದರು.