ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರ(Jammu and Kashmir)ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತ ಚಲಾಯಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಗುರುವಾರ (ಸೆ.19) ಅಭಿನಂದನೆ ಸಲ್ಲಿಸಿದ್ದು, ಜಮ್ಮು-ಕಾಶ್ಮೀರದ ಜನರು ಭದ್ರತಾ ಸಿಬಂದಿಗಳ ಮೇಲೆ ಕಲ್ಲುತೂರಾಟ ನಡೆಸಿ ಕುಖ್ಯಾತಿಯಾಗಿದ್ದರು..ಆದರೆ ಈಗ ಜನರು ತಮ್ಮ ಕೈಯಲ್ಲಿ ಪುಸ್ತಕ ಮತ್ತು ಪೆನ್ನುಗಳನ್ನು ಹಿಡಿದು ತಿರುಗಾಡುತ್ತಿದ್ದಾರೆ ಎಂದು ಹೇಳಿದರು.
ಕಾಶ್ಮೀರದ ಅಸ್ಮಿತೆಯನ್ನು ಮುನ್ನಡೆಸುವಲ್ಲಿ ಕಾಶ್ಮೀರಿ ಪಂಡಿತರ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರು, ಕಾಶ್ಮೀರಿ ಸಮುದಾಯ ಮತ್ತು ಪ್ರದೇಶದ ನಡುವಿನ ಆಳವಾದ ಪರಂಪರೆಯ ಬಗ್ಗೆ ವಿಶ್ಲೇಷಿಸಿದರು.
ಜಮ್ಮು-ಕಾಶ್ಮೀರದಲ್ಲಿ ಸ್ವ ಲಾಭಕ್ಕಾಗಿ ರಾಜಕೀಯ ಮಾಡುವ ಮೂರು ಪ್ರಮುಖ ವಂಶಗಳಿವೆ, ಅವು ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಕಾಂಗ್ರೆಸ್ ಎಂದು ಪ್ರಧಾನಿ ಮೋದಿ ಉದಾಹರಣೆ ನೀಡಿದರು. ವಂಶಾಡಳಿತದ ಪರಿಣಾಮ ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳು ತಮ್ಮ ಮನೆಯಿಂದ ಸ್ಥಳಾಂತರಗೊಳ್ಳಲು ಕಾರಣವಾಯ್ತು ಎಂದು ಪ್ರಧಾನಿ ಹೇಳಿದರು.
ಕಾಶ್ಮೀರದಲ್ಲಿ ಸಿಖ್ ಕುಟುಂಬಗಳು ಎದುರಿಸಿದ ಕಠಿನ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಗಮನಸೆಳೆದಿದ್ದು, ಸಿಖ್ ಜನರು ಹಿಂಸಾಚಾರ, ಕಿರುಕುಳದಿಂದ ನಲುಗಿ ಹೋಗಿದ್ದರು. ಈ ಮೂರು ಕುಟುಂಬಗಳು ಕಾಶ್ಮೀರಿ ಪಂಡಿತರು ಮತ್ತು ಸಿಖ್ ಸಮುದಾಯದ ವಿರುದ್ಧ ಅನ್ಯಾಯ ಎಸಗಿರುವುದಾಗಿ ಪ್ರಧಾನಿ ಮೋದಿ ಆರೋಪಿಸಿದರು.
ಒಂದು ಸಮಯದಲ್ಲಿ ಶ್ರೀನಗರದ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಅಪಾಯದ ಸಂಕೇತದ ಸ್ಥಳ ಎಂದೇ ಬಿಂಬಿತವಾಗಿತ್ತು. ಆದರೆ ಈಗ ಅವೆಲ್ಲವೂ ಬದಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.