ಜಮ್ಮು: ಮಹತ್ವದ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಕಾಶ್ಮೀರಿ ಪಂಡಿತರಿಗೆ ತಮ್ಮ ಆಸ್ತಿಪಾಸ್ತಿಗಳನ್ನು ವಾಪಸ್ ಪಡೆಯಲು ನೆರವಾಗುವಂತೆ ಹೊಸ ಪೋರ್ಟಲ್‌ವೊಂದನ್ನು ಆರಂಭಿಸಿದೆ.
ಕಾಶ್ಮೀರಿ ಪಂಡಿತರಿಗಾಗಿ ಸ್ಥಿರಾಸ್ತಿ ಕಾಯ್ದೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವುದಾಗಿ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಘೋಷಿಸಿದ ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕೈಗೊಂಡ ಪ್ರಮುಖ ನಿರ್ಧಾರ ಇದಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿನ ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮೂಲಭೂತವಾದಿಗಳ ಅಟ್ಟಹಾಸಕ್ಕೆ ಸಿಲುಕಿ ಸಾವಿರಾರು ಕಾಶ್ಮೀರಿ ಪಂಡಿತರು ತಮ್ಮ ಆಸ್ತಿಪಾಸ್ತಿಗಳನ್ನು ಬಿಟ್ಟು ಅಲ್ಲಿಂದ ಓಡಿಹೋಗಿದ್ದರು. ಅನಂತರದಲ್ಲಿ ಆ ಆಸ್ತಿಗಳನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಈಗ ಇಲ್ಲಿನ ಆಡಳಿತವು ಕಾಶ್ಮೀರಿ ಪಂಡಿತರಿಗೆ ತಮ್ಮ ಹಳೆಯ ಆಸ್ತಿಯನ್ನು ವಾಪಸ್ ಪಡೆಯಲು ನೆರವಾಗಲೆಂದು ಹೊಸ ಪೋರ್ಟಲ್ ಆರಂಭಿಸಿದೆ. ಪಂಡಿತರ ಆಸ್ತಿಯನ್ನು ಯಾರೂ ಒತ್ತುವರಿ ಮಾಡುವಂತಿಲ್ಲ, ದೂರು ದಾಖಲಾಗದಿದ್ದರೂ ಒತ್ತುವರಿಗೆ ಅವಕಾಶ ನೀಡುವಂತಿಲ್ಲ ಎಂಬ ಆದೇಶವನ್ನೂ ಹೊರಡಿಸಲಾಗಿದೆ. ಪಂಡಿತರು ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು, ತಮ್ಮ ಆಸ್ತಿಯಿದ್ದ ಸ್ಥಳ, ತಾವು ಆ ಸ್ಥಳ ತೊರೆದ ವರ್ಷವನ್ನು ನಮೂದಿಸಬೇಕು. ಜತೆಗೆ ಆಸ್ತಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆಯೂ ಮಾಹಿತಿ ನೀಡಬೇಕು. ಅವುಗಳನ್ನು ಪರಿಶೀಲಿಸಿ, ಅವರ ಆಸ್ತಿ ಮರಳಿ ಸಿಗುವಂತೆ ಮಾಡಲಾಗುವುದು ಎಂದು ಆಡಳಿತ ತಿಳಿಸಿದೆ.