ಹೊಸದಿಲ್ಲಿ : ‘ತಮ್ಮ ಮಗಳ ಮದುವೆಗೆ 700 ಕೋಟಿ ರೂ. ಖರ್ಚು ಮಾಡುವ ಭಾರತದ ಶ್ರೀಮಂತರು ಕೊಳೆತ ಬಟಾಟೆಗಳು’ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೇಳಿದ್ದಾರೆ.
‘ತನ್ನ ಮಗಳ ಮದುವೆಗೆ 700 ಕೋಟಿ ರೂ. ಖರ್ಚು ಮಾಡಿದ ಭಾರತದ ಶ್ರೀಮಂತ ವ್ಯಕ್ತಿಯೋರ್ವನನ್ನು ಪತ್ರಕರ್ತನೊಬ್ಬ ಕೇಳಿದ್ದ : ನೀವು ದಾನಧರ್ಮ ಮಾಡುವುದುಂಟಾ ? ಅದಕ್ಕೆ ಆ ಶ್ರೀಮಂತ ಹೇಳಿದ್ದ : ಇಲ್ಲ, ನಾನು ದಾನಧರ್ಮ ಮಾಡುವುದಿಲ್ಲ’ – ಈ ಪ್ರಕರಣವನ್ನು ಉದಾಹರಿಸಿ “ಮಗಳ ಮದುವೆಗೆ 700 ಕೋಟಿ ರೂ. ಖರ್ಚು ಮಾಡುವ ಭಾರತೀಯ ಸಿರಿವಂತರು ಕೊಳೆತ ಬಟಾಟೆಗಳು’ ಎಂದು ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೇಳಿದರು.
ಚಳಿಗಾಲದ ರಾಜಧಾನಿಯಾಗಿರುವ ಜಮ್ಮು ವಿನಲ್ಲಿ ರಾಜ್ಯದ ಸೈನಕ್ ವೆಲ್ ಫೇರ್ ಸೊಸೈಟಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ರಾಜ್ಯಪಾಲ ಸತ್ಯಪಾಲ್ ಮಲಿಕ್, ‘ಭಾರತದ ಸಿರಿವಂತರ ಒಂದು ವರ್ಗ ಸಮಾಜದ ಬಗ್ಗೆ ಸೂಕ್ಷ್ಮತೆಯೇ ಇಲ್ಲದವರಾಗಿದ್ದಾರೆ; ಬಡಜನರ ಕಷ್ಟಗಳಿಗೆ ಸ್ಪಂದಿಸದವರಾಗಿದ್ದಾರೆ’ ಎಂದು ಹೇಳಿದರು.
‘ಕೆಲವು ಭಾರತೀಯ ಸಿರಿವಂತರು ಒಂದೇ ಒಂದು ರೂಪಾಯಿಯ ದಾನಧರ್ಮ ಮಾಡುವುದಿಲ್ಲ. ಮೇಲ್ವರ್ಗದವರಲ್ಲೂ ಈ ರೀತಿಯವರಿದ್ದಾರೆ. ನಾನು ಅವರನ್ನು ಕೊಳೆತ ಬಟಾಟೆಗಳು ಎಂದು ಪರಿಗಣಿಸುತ್ತೇನೆ; ಆದರೆ ಇದನ್ನು ಬೇರೆಯೇ ರೀತಿಯಲ್ಲಿ ಗ್ರಹಿಸಬೇಡಿ’ ಎಂದು ಸತ್ಯಪಾಲ್ ಮಲಿಕ್ ಹೇಳಿದರು.
ಭಾರತೀಯ ಸಿರಿವಂತರನ್ನು “ನೀವೇಕೆ ದಾನಧರ್ಮ ಮಾಡುವುದಿಲ್ಲ’ ಎಂದು ಕೇಳಿದರೆ, ‘ನಾವು ಮಗಳ ಮದುವೆಗೆ 700 ಕೋಟಿ ರೂ. ಖರ್ಚು ಮಾಡುವ ಮೂಲಕ ದೇಶದ ಸಂಪತ್ತನ್ನು ಹೆಚ್ಚಿಸುತ್ತೇವೆ’ ಎಂದು ಉತ್ತರಿಸುತ್ತಾರೆ. ಯುರೋಪ್ ಮತ್ತಿತರ ದೇಶಗಳಲ್ಲಿ ಸಿರಿವಂತರು ದಾನ ಮಾಡುತ್ತಾರೆ. ಮೈಕ್ರೋಸಾಫ್ಟ್ ಮಾಲಕರು ತಮ್ಮ ಸಂಪಾದನೆಯ ಶೇ.99ರಷ್ಟು ದಾನ ಮಾಡಿದ್ದಾರೆ’ ಎಂದು ಸತ್ಯಪಾಲ್ ಹೇಳಿದರು.
‘ಮಗಳ ಮದುವೆಗೆ ನೀವು ಸಿರಿವಂತರು ಖರ್ಚು ಮಾಡುವ 700 ಕೋಟಿ ರೂ. ಗಳಲ್ಲಿ ನಿಮ್ಮ ರಾಜ್ಯದಲ್ಲಿ 700 ದೊಡ್ಡ ಶಾಲೆಗಳನ್ನು ಕಟ್ಟಬಹುದು; ಯೋಧ-ಪತಿಯನ್ನು ಕಳೆದುಕೊಂಡ 7,000 ವಿಧವೆಯವರಿಗೆ ತಮ್ಮ ಮಕ್ಕಳನ್ನು ಬೆಳೆಸಲು, ಯೋಗ್ಯ ಶಿಕ್ಷಣ ನೀಡಲು, ನೆರವಾಗಬಹುದು ಎಂದು ಮಲಿಕ್ ಹೇಳಿದರು.