ಜಮ್ಮು ಕಾಶ್ಮೀರ: ಭದ್ರತಾ ಪಡೆಗಳ ಎನ್ ಕೌಂಟರ್ ಗೆ ಮೂವರು ಉಗ್ರರು ಬಲಿಯಾದ ಘಟನೆ ಇಂದು (21-6-2020) ನಡೆದಿದೆ. ಜದಿಬಾಲ್ ಪ್ರದೇಶದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಈ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಶ್ಮೀರ ಐಜಿ ವಿಜಯ್ ಕುಮಾರ್ ಈ ಕುರಿತು ಮಾತನಾಡಿ, ಎನ್ ಕೌಂಟರ್ ಆದ ಉಗ್ರರು ಮೇ 20 ರಂದು ಪಾಂಡಚ್ ಚೌಕ್ ನಲ್ಲಿ ಬಿಎಸ್ ಎಫ್ ಯೋಧರಿಬ್ಬರನ್ನು ಹತ್ಯೆ ಮಾಡಿದ್ದರು ಎಂದು ತಿಳಿಸಿದ್ದಾರೆ.
ಸಿಆರ್ ಪಿ ಎಫ್ ಮತ್ತು ಭಾರತೀಯ ಸೇನೆ ಇಂದು ಮುಂಜಾನೆಯಿಂದಲೇ ಜದಿಬಾಲ್ ಪ್ರದೇಶದಲ್ಲಿ ಜಂಟಿ ಕಾರ್ಯಚರಣೆ ಕೈಗೊಂಡಿತ್ತು. ಈ ವೇಳೆ ಮೂವರು ಉಗ್ರರು ಮನೆಯೊಂದಕ್ಕೆ ನುಸುಳಿದ್ದರಿಂದ ಎನ್ ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ. ಈ ವೇಳೆ ಉಗ್ರರು ಬಳಸುತ್ತಿದ್ದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಇದೀಗ ಶ್ರೀನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂಟರ್ ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದ್ದು, ಮಾಧ್ಯಮಗಳಿಗೆ ಯಾವುದೇ ಸಮರ್ಪಕ ಮಾಹಿತಿ ಲಭ್ಯವಾಗಿಲ್ಲ.