ಗುರುಮಠಕಲ್: ಪ್ರತಿ ಮನೆಗೂ ನೀರು ತಲುಪಿಸುವ ಅಂದಾಜು 159 ಲಕ್ಷ ರೂ. ವೆಚ್ಚದ ಕೇಂದ್ರ ಸರ್ಕಾರದ ಮಹತ್ವದ ಜಲ ಜೀವನ್ ಮಿಷನ್ ಯೋಜನೆ ಗಡಿ ತಾಲೂಕಿನ ಚಂಡರಕಿಯಲ್ಲಿ ಹಳ್ಳ ಹಿಡಿದಿದೆ. ಗ್ರಾಮದಲ್ಲಿ ಮುಂದಿನ 30 ವರ್ಷಗಳವರೆಗೆ ಮನೆ ಮನೆಗೆ ನೀರು ಪೂರೈಸುವ ದೂರದೃಷ್ಟಿಯ ಯೋಜನೆ ಕಾಮಗಾರಿಯನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕಿತ್ತು ಆದರೆ ಸಂಬಂಧಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಲಕ್ಷ ವಹಿಸಿಲ್ಲ.
ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ಪೈಪ್‌ಲೈನ್ ಹಾಕಲು ಸುಮಾರು 6387 ಮೀಟರ್ ಸಿಸಿ ರಸ್ತೆ ಅಗೆಯಲಾಗಿದೆ. ಆದರೆ ಪೈಪ್‌ಲೈನ್ ಅಳವಡಿಕೆಗೆ ಎರಡು ಅಡಿ ಸಹ ಆಳ ತೋಡದೇ ಪೈಪ್ ಹಾಕಲಾಗಿದ್ದು, ವಾಹನಗಳ ಸಂಚಾರದಿಂದ ಪೈಪ್ ಒಡೆಯುವ ಆತಂಕ ಎದುರಾಗಿದೆ. ಇನ್ನು ಕೆಲವು ಕಡೆ ಚರಂಡಿಗಳ ಮೂಲಕವೇ ಮನೆಗಳಿಗೆ ನಳದ ಸಂಪರ್ಕ ನೀಡಲಾಗಿದೆ. ತಾಲೂಕಿನ ಅನಪುರದಲ್ಲಿ ಕಲುಷಿತ ನೀರು ಸೇವನೆಯಿಂದ 3 ಜನರು ಮೃತಪಟ್ಟು, 60 ಜನರು ಅಸ್ವಸ್ಥಗೊಂಡ ಕಹಿ ಘಟನೆ ಕಣ್ಣೆದುರು ಇರುವಾಗಲೇ ಇಲ್ಲೊಂದು ಅಚಾತುರ್ಯಕ್ಕೆ ಅಧಿಕಾರಿಗಳು ಎಡೆ ಮಾಡಿದಂತಾಗಿದೆ.
ಗ್ರಾಮದಲ್ಲಿ 4 ಸಾವಿರದಷ್ಟು ಜನಸಂಖ್ಯೆಯಿದ್ದು, ಒಟ್ಟು 895 ನಳ ಸಂಪರ್ಕಗಳನ್ನು ನೀಡುವ ಉದ್ದೇಶವಿದೆ. ಈಗಾಗಲೇ ಗ್ರಾಮ ಪಂಚಾಯಿತಿ 423 ಮನೆಗಳಿಗೆ ನಳ ಸಂಪರ್ಕ ನೀಡಿದೆ. ಉಳಿದ 472 ಮನೆಗಳಿಗೆ ನೀರಿನ ನಳ ಜೋಡಣೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಬಹುತೇಕ ನಳಗಳ ಜೋಡಣೆಯೇನೋ ಆಗಿದೆ. ನಳಗಳಿಗೆ ಟ್ಯಾಪ್‌ಗಳನ್ನು ಅಳವಡಿಸದೇ ಹಾಗೆ ಬಿಡಲಾಗಿದೆ. ಇನ್ನೂ ಕೆಲವು ಕಡೆ ನಳ ಸಂಪರ್ಕವೇ ನೀಡದೇ ಕೇವಲ ಮೀಟರ್ ಮಾತ್ರ ಕೂಡ್ರಿಸಿರುವುದು ಕಂಡು ಬರುತ್ತಿದೆ. ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ ಎನ್ನುವ ಮಾಹಿತಿ ತಿಳಿದು ಬಂದಿದ್ದು, ಅಪೂರ್ಣವಾಗಿರುವ ಕಾಮಗಾರಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಗ್ರಾಮ ಪಂಚಾಯಿತಿ ತನ್ನ ಸುಪರ್ದಿಗೆ ಪಡೆಯುವುದು ಅಗತ್ಯವಿದೆ.
ನನ್ನ ಗಮನಕ್ಕೆ ಬಂದಿಲ್ಲ. ಆಯಾ ಸ್ಥಳೀಯ ಆಡಳಿತಕ್ಕೆ ದೂರು ನೀಡಿದಲ್ಲಿ ಕಾಮಗಾರಿ ಬಿಲ್ ತಡೆ ಹಿಡಿಯಲಾಗುವುದು ಹಾಗೂ ಜನರಿಗೆ ನೀರು ಒದಗಿಸುವ ಪ್ರಯತ್ನ ಪಡುತ್ತೇನೆ.
~ನಾಗನಗೌಡ ಕಂದಕೂರು, ಶಾಸಕ
ನಮ್ಮ ಮನೆಗೆ ನಳ ಹಾಕಿ ಎರಡು ತಿಂಗಳು ಆಯ್ತು. ಒಂದು ಹನಿ ನೀರೂ ಬಂದಿಲ್ಲ. ನೀರಿಗಾಗಿ ಪರದಾಡುವಂತಾಗಿದೆ. ಅಧಿಕಾರಿಗಳು ಜೆಜೆಎಂ ಕೆಲಸ ಮಾಡಿಯೂ ಮಾಡಿಲ್ಲದಂತಾಗಿದೆ. ನಮಗೆ ಉಪಯೋಗ ಆಗುವಂತೆ ಮಾಡಬೇಕಾಗಿದೆ.
~ ವೆಂಕಟೇಶ, ಸ್ಥಳೀಯ
~ಚೆನ್ನಕೇಶವುಲು ಗೌಡ