ಯಡ್ರಾಮಿ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ “ಜಲ ಜೀವನ್ ಮಿಷನ್’ (ಜೆಜೆಎಂ) ಅಡಿಯಲ್ಲಿ ಅಗತ್ಯವಿರುವ ಗ್ರಾಮಗಳಿಗೆ, ಅಲ್ಲದೆ, ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀ. ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ. ಆ ಮೂಲಕ ನೇರವಾಗಿ ಮನೆಗಳಿಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡಿ ನೀರಿನ ಅಪವ್ಯಯ ತಪ್ಪಿಸುವುದೂ ಆಗಿದೆ.
ತಾಲೂಕಿನ ಮಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದಲೂ “ಜಲ ಜೀವನ್ ಮಿಷನ್’ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದರೂ ಗ್ರಾಮದಲ್ಲಿ ಯೋಜನೆ ಅನುಷ್ಠಾನದ ಬಗೆಗೆ ಯಾವ ಪೂರ್ವ ಯೋಜನೆ ಮಾಡದೇ ಕಾಮಗಾರಿ ಪ್ರಾರಂಭ ಮಾಡಿದ್ದೇ ಯೋಜನೆ ಹಳ್ಳ ಹಿಡಿಯಲು ಕಾರಣವಾಗಿದೆ. ಈ ಮೊದಲೇ, ಮಳ್ಳಿ ಗ್ರಾಮದಲ್ಲಿನ 5 ವಾರ್ಡ್‌ಗಳಲ್ಲಿನ ಮನೆಗಳಿಗೆ ಬಹುತೇಕ ಶುದ್ಧ ಕುಡಿಯುವ ನೀರಿನ ಸರಬರಾಜು ವ್ಯವಸ್ಥಿತವಾಗಿ ನಡೆಯುತ್ತಿತ್ತು. ಗ್ರಾಮ ಬಹು ಹಿಂದಿನಿಂದಲೂ ಅಪಾರವಾಗಿ ಕುಡಿಯುವ ನೀರಿನ ಸಂಪತ್ತು ಹೊಂದಿದ್ದಾಗಿದೆ. ಆದರೆ, ಈ ಜೆಜೆಎಂ ಕಾಮಗಾರಿ ನೆಪದಿಂದ ಉತ್ತಮ ಸಿಸಿ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡುವಂತಾಗಿದೆ. ಈ ಹಿಂದೆ ಸುವರ್ಣ ಗ್ರಾಮೋದಯದಡಿ ನಿರ್ಮಾಣವಾದ ಸಿಸಿ ರಸ್ತೆಗಳು ಹಾಳು ಮಾಡುತ್ತಿರುವುದರಿಂದ ಗ್ರಾಮಸ್ಥರು ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ.
ವೃದ್ಧರು, ಮಕ್ಕಳು, ಮಹಿಳೆಯರು, ಬೈಕ್ ಸವಾರರು ರಸ್ತೆಗಳಲ್ಲಿ ಓಡಾಡದಂತಾಗಿದೆ. ಈ ಯೋಜನೆ ತಮ್ಮೂರಿಗೆ ಅನಗತ್ಯವಾಗಿತ್ತು ಎಂದು ಗ್ರಾಮಸ್ಥರು ನಿತ್ಯವೂ ಅಸಮಾದಾನದ ಮಾತುಗಳನ್ನಾಡುತ್ತಿದ್ದಾರೆ. ಯೋಜನೆಯಡಿ ಕೊಳವೆ ಬಾವಿ ಕೊರೆಸಿದರೂ ಅದರ ನೀರನ್ನು ಪ್ರಯೋಗಾಲಯಕ್ಕೆ ಕಳಿಸಿ, ಕುಡಿಯಲು ಯೋಗ್ಯತೆ, ಗುಣಮಟ್ಟ ಪರೀಕ್ಷೆ ಮಾಡಿಸದೆ, ಕೆಲ ಮನೆಗಳಿಗೆ ಸರಬರಾಜು ಮಾಡುತ್ತಿರುವುದು ಜನತೆಯ ಜೀವದ ಜತೆಗೆ ಚಲ್ಲಾಟ ಆಡುವಂತಾಗಿದೆ.
ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಜೆಇ, ಎಇಇ ಗ್ರಾಮಸ್ಥರಿಗೆ ದೂರವಾಣಿ ಮೂಲಕ ಸಮಾಧಾನದ ಮಾತುಗಳನ್ನಾಡುತ್ತಾರೆ. ಅಂದಾಜು ಒಂದು ಕೋಟಿ ರೂ. ಮೊತ್ತದ ಯೋಜನೆ ಗ್ರಾಮದಲ್ಲಿ ಸರಿಯಾದ ಅನುಷ್ಠಾನದ ಕೊರತೆಯಿಂದ ಹಳ್ಳ ಹಿಡಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೊಳವೆ ಬಾವಿ ನೀರು ಪರೀಕ್ಷೆಗೆ ಕಳುಹಿಸುವಂತೆ ತಿಳಿಸುತ್ತೇನೆ. ಗ್ರಾಮದ ಪ್ರತಿ ಮನೆಗೂ ನಲ್ಲಿ ಅಳವಡಿಸಿ ಸಮರ್ಪಕ ನೀರು ಸರಬರಾಜು ಮಾಡುತ್ತೇವೆ. ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗದಂತೆ ಕಾಮಗಾರಿ ನಡೆಯಬೇಕೆಂದು ಗುತ್ತಿಗೆದಾರರಿಗೂ ಸೂಚಿಸಿದ್ದೇನೆ. ಗ್ರಾಮಸ್ಥರು ಸಹಕರಿಸಬೇಕು.
-ಮಲ್ಲಿನಾಥ ಕೆ., ನೀರು ಸರಬರಾಜು ಎಇಇ, ಜೇವರ್ಗಿ
-ಸಂತೋಷ ಬಿ.ನವಲಗುಂದ