Advertisement

ನಿಜಲಿಂಗಪ್ಪಗೆ ಸಡ್ಡು ಹೊಡೆದು ಜಟ್ಟಿ ಮಾಡಿದ ಜಗಜ್ಜೀವನದಾಸ್‌ ಶೆಟ್ಟಿ

07:00 AM Apr 08, 2018 | Team Udayavani |

ಬ್ರಹ್ಮಾವರ: ರಾಜಕೀಯ ರಂಗ ಪ್ರವೇಶಿಸಿದ ಮೇಲೆ ಸಂಪತ್ತು ಹಲವು ಪಟ್ಟು ಏರಿಕೆಯಾಗುವುದು ಸಹಜ. ಕೆಲವರು ಕಳೆದುಕೊಂಡಿದ್ದೇವೆ ಎಂದೂ ಹೇಳುತ್ತಾರೆ. ಆದರೆ ನಿಜವಾಗಿ ರಾಜಕೀಯದಿಂದ ಇದ್ದ ಸಂಪತ್ತು ಕಳೆದುಕೊಂಡ ಬೆರಳೆಣಿಕೆ ಮಂದಿಯಲ್ಲಿ ಬ್ರಹ್ಮಾವರದ ಜಗಜ್ಜೀವನದಾಸ್‌ ಶೆಟ್ಟಿ ಓರ್ವರು. “ಜಗ ಶೆಟ್ಟರು’ ಎಂದೇ ಜನಪ್ರಿಯರಾಗಿದ್ದ ಇವರು 1957ರಿಂದ 62ರ ವರೆಗೆ ಬ್ರಹ್ಮಾವರದ ಶಾಸಕರಾಗಿದ್ದರು.ತನ್ನ ಅಜ್ಜ ಜಗಜ್ಜೀವನದಾಸ್‌ ಶೆಟ್ಟಿ ಅವರ ರಾಜಕೀಯ ಬದುಕಿನ ಕಥಾನಕವನ್ನು ಮೊಮ್ಮಗ ಜೀವನದಾಸ್‌ ಶೆಟ್ಟಿ ಹೀಗೆ ಮುಂದಿಟ್ಟಿದ್ದಾರೆ…

Advertisement

ಮುಂಬಯಿಯ ಪ್ರಸಿದ್ಧ ಕಾಲೇಜಿನಲ್ಲಿ 1922ರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಊರಿನಲ್ಲಿ ನೆಲೆಸಿ ಕುಟುಂಬದ ಆಸ್ತಿ ನಿರ್ವಹಿಸುತ್ತಿದ್ದರು. ಟೈಲ್ಸ್‌ ಫ್ಯಾಕ್ಟರಿ, ಅಕ್ಕಿ ಮಿಲ್‌ ನಿರ್ವಹಿಸುತ್ತಿದ್ದರು. ಕನ್‌ಸ್ಟ್ರಕ್ಷನ್‌ ಕಂಪೆನಿ ಮುನ್ನಡೆಸಿದರು. ಸ್ವಾತಂತ್ರ್ಯ 
ಹೋರಾಟದಲ್ಲೂ ಪಾಲ್ಗೊಂಡಿದ್ದ ಶೆಟ್ಟಿ ಅವರು 1952ರ ಪ್ರಥಮ ಚುನಾವಣೆ ಯಲ್ಲಿ ಬ್ರಹ್ಮಾವರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಮದ್ರಾಸ್‌ ರಾಜ್ಯಕ್ಕೆ ಒಳಪಟ್ಟಿತ್ತು. ಅಂದು ಶೆಟ್ಟಿ ಅವರು ಪರಾಭವಗೊಂಡು ಎಸ್‌.ಎಸ್‌. ಕೊಳ್ಕೆಬೈಲ್‌ ಪ್ರಥಮ ಶಾಸಕರಾದರು.

1957ರಲ್ಲಿ ಮತ್ತೆ ಸ್ಪರ್ಧಿಸಿ ಪ್ರಜಾ ಸೋಶಲಿಸ್ಟ್‌ ಪಾರ್ಟಿ (ಪಿಎಸ್‌ಪಿ) ಅಭ್ಯರ್ಥಿ ಕೊಂಬ ಯಾನೆ ಶೀನಪ್ಪ ಶೆಟ್ಟಿ ಅವರನ್ನು ಮಣಿಸಿದರು. ಜೋಡು ಎತ್ತು ಕಾಂಗ್ರೆಸ್‌ ಪಕ್ಷದ ಚಿಹ್ನೆಯಾಗಿತ್ತು. ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಕರಾವಳಿ ಭಾಗದ ಶಾಸಕರ ಬಗ್ಗೆ ತಾತ್ಸಾರ ಹೊಂದಿದ್ದ ಪರಿಣಾಮ ಜಗಜ್ಜೀವನ ದಾಸ್‌ ಶೆಟ್ಟಿ ಅವರ ನೇತೃತ್ವದಲ್ಲಿ ಹಲವು ಶಾಸಕರು ಬಂಡಾಯ ಎದ್ದು ಬಿ.ಡಿ. ಜತ್ತಿ ಅವರ ಹೆಸರನ್ನು ಸೂಚಿಸಿದರು. ಜತ್ತಿ ಅವರು 1958ರಲ್ಲಿ ಮುಖ್ಯಮಂತ್ರಿಯಾದರು. ಜತ್ತಿ ಅವರ ಆಪ್ತರಾದ ಶೆಟ್ಟಿ ಅವರು ಕರಾವಳಿ ಭಾಗಕ್ಕೆ ಹಲವು ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾದರು. ವಾರಂಬಳ್ಳಿ ತೋಟಗಾರಿಕಾ ಕ್ಷೇತ್ರ ಅವರ ಅವಧಿಯಲ್ಲಿ ಪ್ರಾರಂಭಗೊಂಡಿತು.

ವ್ಯವಹಾರ ನೆಲಕಚ್ಚಿತು…!
ಪಕ್ಷದ ಪದಾಧಿಕಾರಿಯಾಗಿ, ಶಾಸಕರಾಗಿ ಸಕ್ರಿಯರಾದ ಪರಿಣಾಮ ವ್ಯವಹಾರ ನೆಲಕಚ್ಚಿತು. ದಾನ, ಧರ್ಮ ಮಿತಿ ಮೀರಿತು, ಸಂಘ -ಸಂಸ್ಥೆಗಳಿಗೆ ಆಶ್ರಯದಾತರಾಗಿದ್ದರು. ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದರು. ಒಟ್ಟಿನಲ್ಲಿ ರಾಜ ಕೀಯಕ್ಕೆ ಬಂದು ಅಜ್ಜ ಕಳೆದುಕೊಂಡದ್ದೇ ಹೆಚ್ಚು ಎನ್ನುತ್ತಾರೆ ಮೊಮ್ಮಗ ಜೀವನದಾಸ್‌ ಶೆಟ್ಟಿ ಅವರು.

ಶಾಸಕ ಸ್ಥಾನದಿಂದ ನಿವೃತ್ತರಾದ ಬಳಿಕ 1963ರಲ್ಲಿ 63ರ ಪ್ರಾಯದಲ್ಲಿ ಅಂಬಾಗಿಲಿನಲ್ಲಿ ಟೈಲ್ಸ್‌ ಫ್ಯಾಕ್ಟರಿ ಪ್ರಾರಂಭಿಸಿ ಇದನ್ನು ಯಶೋಗಾಥೆಯತ್ತ ಮುನ್ನಡೆಸಿದರು.

Advertisement

ಆರ್ಥಿಕ ಹಿನ್ನಡೆಯಿಂದ ಸ್ಪರ್ಧಾ ರಾಜಕೀಯದಿಂದ ಹಿಂದೆ ಸರಿದರು. ಜಗಜ್ಜೀವನದಾಸ್‌ ಶೆಟ್ಟಿ ಅವರು 1985ರಲ್ಲಿ ನಿಧನ ಹೊಂದಿದರು. ಅವರ ಸಹೋದರ ಡಾ| ಬಿ.ಬಿ. ಶೆಟ್ಟಿ ಅವರು 1983ರಲ್ಲಿ ಬ್ರಹ್ಮಾವರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಜಗಜ್ಜೀವನದಾಸ್‌ ಶೆಟ್ಟಿಯವರ ಮಗನ ಹೆಸರೂ ಜಗಜ್ಜೀವನದಾಸ್‌ ಶೆಟ್ಟಿ. ತಂದೆಯಂತೆ ದಾನಶೂರ ಕರ್ಣನಾಗಿ ಬಾಳಿದರು, ಒಂದು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದವರು. ಇವರ ಹೆಸರು ಇಂದಿಗೂ ಬ್ರಹ್ಮಾವರ ಪರಿಸರದಲ್ಲಿ ಸ್ಮರಣೆಯಲ್ಲಿದೆ.

ಗೆದ್ದವ ಸೋತ, ಸೋತವ ಸತ್ತ!
“ಗೆದ್ದವ ಸೋತ, ಸೋತವ ಸತ್ತ’ ಎಂಬುದು ಕೋರ್ಟ್‌ ವ್ಯಾಜ್ಯಕ್ಕೆ ಸಂಬಂಧಿಸಿದ ಗಾದೆ. ಶೆಟ್ಟರ ಬದುಕಲ್ಲೂ ಇದೇ ಅನುಭವ ಆಯಿತು.1952ರ ಪ್ರಥಮ ಚುನಾವಣೆಯಲ್ಲಿ ಸೋತಾಗ ಅವರು ಚಿಹ್ನೆ ಬದಲಿಸಲಾಗಿದೆ, ಮತ ದಾರರ ದಾರಿ ತಪ್ಪಿಸಲಾಗಿದೆ ಎಂದು ಕೋರ್ಟ್‌ಗೆ ಹೋದರು. ಶಾಸಕ ಸ್ಥಾನದ 5 ವರ್ಷ ಮುಗಿದರೂ ನ್ಯಾಯ ಸಿಗಲಿಲ್ಲ. ಚುನಾವಣೆ ಖರ್ಚಿನ ಎರಡು ಪಟ್ಟು ವ್ಯಯ ಆಗಿತ್ತು!

ಗಾಂಧೀಜಿಗೆ ಚಿನ್ನದ ನಾಣ್ಯದ ಚೀಲ!
ಸ್ವಾತಂತ್ರ್ಯಹೋರಾಟದ ಸಂದರ್ಭ ಮಹಾತ್ಮಾ ಗಾಂಧೀಜಿಯವರನ್ನು ಉಪ್ಪಿನಕೋಟೆಯ ಗ್ರಾಮ ಚಾವಡಿಗೆ ಬರಮಾಡಿ ಕೊಳ್ಳಲಾಯಿತು. ಆಗ ಹೋರಾಟದ ಖರ್ಚಿಗಾಗಿ ಜಗಜ್ಜೀವನದಾಸ್‌ ಶೆಟ್ಟಿ ಅವರು ಕೈಚೀಲದಲ್ಲಿ ಚಿನ್ನದ ನಾಣ್ಯ ನೀಡಿದ್ದರು.

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next