Advertisement
ಹರ್ಯಾಣ ರಾಜ್ಯದಲ್ಲಿ ಜಿಂದ್ ಎಂಬುದೊಂದು ಜಿಲ್ಲೆ. ಆ ಜಿಲ್ಲಾ ಕೇಂದ್ರದಿಂದ 30 ಕಿ.ಮೀ.ದೂರದಲ್ಲಿ ಚಟ್ಟಾರ್ ಎಂಬುದೊಂದು ಹಳ್ಳಿ. ಅಲ್ಲೊಬ್ಬ ಯುವ ಕೃಷಿಕ. ಅವನ ಹೆಸರು ಜಿತೇಂದರ್. ಇದಿಷ್ಟು ಪೀಠಿಕೆ. ಉಳಿದ ಕಥೆಯನ್ನೆಲ್ಲ ಜಿತೇಂದರ್ ಅವರ ಮಾತುಗಳಲ್ಲೇ ಓದಿಕೊಳ್ಳೋಣ…
Related Articles
Advertisement
ಆಕೆ ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿ, ಉಪಚರಿಸಿದಳು. ನಂತರ ಕಣ್ತುಂಬಿಕೊಂಡು ಹೇಳಿದಳು: “ನಾನು ದುರಾದೃಷ್ಟವಂತೆ. ವರ್ಷದ ಹಿಂದೆ, ಎಂಟು ಮಂದಿ ನೀಚರು ನನ್ನ ಮೇಲೆ ರೇಪ್ ಮಾಡಿಬಿಟ್ಟರು. ಆನಂತರದಲ್ಲೂ ಅವರು ನನ್ನನ್ನು ಬ್ಲಾಕ್‌ವೆುàಲ್ ಮಾಡಿದ್ದಾರೆ. ಮೇಲಿಂದ ಮೇಲೆ ಬಳಸಿಕೊಂಡಿದ್ದಾರೆ. ಈ ವಿಷಯವನ್ನು ಮುಚ್ಚಿಟ್ಟು ಮದುವೆಯಾಗಲು ನನಗೆ ಮನಸ್ಸು ಬರುತ್ತಿಲ್ಲ. ಹಾಗಾಗಿ, ನಡೆದಿರುವುದನ್ನು ನಿಮ್ಮೊಂದಿಗೆ ಮುಕ್ತವಾಗಿ ಹೇಳಿಕೊಂಡಿದ್ದೇನೆ. ಮಗಳು ಎಲ್ಲಾದರೂ ನೆಲೆ ಕಂಡುಕೊಳ್ಳಲಿ, ಅವಳ ಜೀವನ ಹಾಳಾಗದಿರಲಿ ಎಂದು ಯೋಚಿಸಿ ನನ್ನ ಹೆತ್ತವರು ನಿಮಗೆ ವಿಷಯ ತಿಳಿಸಿಲ್ಲ. ಅದಕ್ಕಾಗಿ ಕ್ಷಮೆಯಿರಲಿ’ ಎಂದಳು. ನಂತರ ನನ್ನೆದುರು ನಿಂತು- “ನಿಮ್ಮ ಹೆಂಡತಿ ಅನ್ನಿಸಿಕೊಳ್ಳಲಿಕ್ಕೆ, ನಿಮ್ಮ ಮನೆಯ ಸೊಸೆ ಆಗಲಿಕ್ಕೆ ನನಗೆ ಯೋಗ್ಯತೆಯಿಲ್ಲ. ನಾನು ಪರಿಶುದ್ಧಳಲ್ಲ. ದಯವಿಟ್ಟು ನನ್ನನ್ನು ಮದುವೆ ಆಗಬೇಡಿ. ಛೀ, ರೇಪ್ ಆದವಳನ್ನು ಮದುವೆಯಾದ ಎಂದು ಸಮಾಜ ಹಂಗಿಸುತ್ತೆ. ಅಂಥದ್ದೊಂದು ಕೆಟ್ಟ ಮಾತು ಕೇಳುವ ಅಥವಾ ಕೆಟ್ಟವಳ ಕೈ ಹಿಡಿದೆ ಎಂಬ ಫೀಲ್ ನಿಮ್ಮನ್ನು ಕಾಡುವುದು ಬೇಡ’ ಎಂದಳು.
ಆಕೆ, ತುಂಬಾ ಪ್ರಾಮಾಣಿಕವಾಗಿ ತನ್ನ ಅನಿಸಿಕೆ ಹೇಳಿದ್ದಳು. ಅವಳ ಮಾತನ್ನೇ ಮತ್ತೆ ಮತ್ತೆ ಮೆಲುಕು ಹಾಕಿದೆ. ಈ ಹುಡುಗಿ ಪರಿಶುದ್ಧ ಮನಸ್ಸಿನವಳು ಅನ್ನಿಸಿತು. ಅವಳ ಮನಸ್ಸಿಗೆ ಎಂದೂ ಮರೆಯಲಾ ಗದಂಥ ನೋವಾಗಿದೆ. ಗಾಯವಾಗಿದೆ. ಇಂಥ ಸಂದರ್ಭದಲ್ಲಿ ಆಕೆಯ ಜೊತೆಗಿರದೇ ಹೋದರೆ, ದೇವರು ನನ್ನನ್ನು ಕ್ಷಮಿಸಲಾರ ಅನ್ನಿಸಿತು. ಒಂದೆರಡು ನಿಮಿಷ ಸುಮ್ಮನಿದ್ದು, ನಂತರ ಮೇಲೆದ್ದವನೇ, ಅವಳ ಕೈಹಿಡಿದು ಸ್ಪಷ್ಟವಾಗಿ ಹೇಳಿದೆ ಆಗಿರೋದನ್ನೆಲ್ಲ ಮರೆತುಬಿಡು. ನಾನು ನಿನ್ನನ್ನೇ ಮದುವೆ ಯಾಗ್ತೀನೆ. ಅಷ್ಟೇ ಅಲ್ಲ; ನಿನ್ನ ಮೇಲೆ ರೇಪ್ ಮಾಡಿದ್ದಾರಲ್ಲ; ಆ ನೀಚರಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತೇನೆ……
ಈ ನಡುವೆಯೇ ಎದೆಯೊಡೆದು ಹೋಗುವಂಥ ಮಾಹಿತಿಯೂ ನನಗೆ ಗೊತ್ತಾಗಿತ್ತು. ಏನೆಂದರೆ, ರೇಪ್ ಮಾಡುವ ಮೊದಲು ನನ್ನ ಭಾವಿ ಪತ್ನಿಯನ್ನು ಬೆತ್ತಲೆ ಮಾಡಿ, ಆ ನೀಚರು ಫೋಟೊ ತೆಗೆದಿದ್ದರು. ರೇಪ್ ಮಾಡುವ ಸಂದರ್ಭವನ್ನೂ ವಿಡಿಯೋ ಮಾಡಿಟ್ಟುಕೊಂಡು, ನಾವು ಹೇಳಿದಂತೆ ಕೇಳದಿದ್ದರೆ ಇದನ್ನು ಎಲ್ಲರಿಗೂ ತೋರಿಸಿಬಿಡುತ್ತೇವೆ ಎಂದು ಹೆದರಿಸಿದ್ದರು. ಪಾಪ.., ಮರ್ಯಾದೆಗೆ ಹೆದರಿದ್ದ ಈ ಹುಡುಗಿ, ಅವರು ಹೇಳಿ ದಂತೆಯೇ ಕೇಳುತ್ತಾ ಎಲ್ಲಾ ದೌರ್ಜನ್ಯವನ್ನು ಸಹಿಸಿಕೊಂಡಿದ್ದಳು.
ಇಲ್ಲಿ ನಿಮಗೊಂದು ವಿಚಾರ ಹೇಳಿಬಿಡಬೇಕು. ಹರಿಯ ತಾಣ ಎಂಬುದರ ವಿಸ್ತೃತ ರೂಪವೇ ಹರ್ಯಾಣ! ಅಂದರೆ, ದೇವರ ನಾಡು ಎಂಬುದು ಹರ್ಯಾಣಕ್ಕೆ ಇರುವ ಇನ್ನೊಂದು ಹೆಸರು. ವಿಪರ್ಯಾಸ ವೇನು ಗೊತ್ತೆ? ಹರಿಯ ತಾಣದಲ್ಲಿ ಹರಿಣಿಯರಿಗೆ ನೆಮ್ಮದಿಯಿಲ್ಲ. ರಕ್ಷಣೆಯೂ ಇಲ್ಲ. ಹೆಣ್ಣು ಮಕ್ಕಳ ಮೇಲೆ ರೇಪ್ ಆಗುವುದು, ದೌರ್ಜನ್ಯ ನಡೆಯುವುದು ಇಲ್ಲಿ ತೀರಾ ಮಾಮೂಲು ಎಂಬಂಥ ಸುದ್ದಿ. ಅದರಲ್ಲೂ ಶಾಲೆ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳ ಮೇಲಂತೂ ಎಗ್ಗಿಲ್ಲದೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಮನೆಗೆ ಬಂದ ಹೆಣ್ಣು ಮಕ್ಕಳು-ಇವತ್ತು ಇಂಥವರಿಂದ ದೌರ್ಜನ್ಯ ನಡೆಯಿತು ಎಂದೇನಾದರೂ ದೂರು ನೀಡಿದರೆ, ಪೋಷಕರು ನ್ಯಾಯ ಕೇಳಲು, ದುಷ್ಟರ ವಿರುದ್ಧ ಸಮರ ಸಾರಲು ಮುಂದಾಗು ವುದಿಲ್ಲ. ಬದಲಿಗೆ, “ದುಷ್ಟರ ವಿರುದ್ಧ ಹೋರಾಡುವ ಶಕ್ತಿ ನಮಗಿಲ್ಲ. ನೀನು ಓದಿದ್ದು ಸಾಕು. ಸುಮ್ಮನೆ ಮನೇಲಿ ಇದ್ದುಬಿಡು. ಯಾವುದಾದ್ರೂ ಸಂಬಂಧ ನೋಡಿ ಮದುವೆ ಮಾಡ್ತೇವೆ ‘ ಎಂದು ಬಿಡುತ್ತಾರೆ. ಹಾಗಾಗಿ, ಹರ್ಯಾಣದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳು ದಾಖಲಾಗುವುದೇ ಇಲ್ಲ.
ಅಸಹಾಯಕ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯು ವುದನ್ನು ನಾನು ಬಾಲ್ಯದಿಂದಲೂ ನೋಡಿಕೊಂಡೇ ಬೆಳೆದೆ. ನನ್ನೂರು ಚಟ್ಟಾರ್‌ನಿಂದ ಜಿಲ್ಲಾ ಕೇಂದ್ರವಾದ ಜಿಂದ್‌ಗೆ ಶಾಲೆ-ಕಾಲೇಜಿಗೆಂದು ಬಸ್ ಹತ್ತುತ್ತಿದ್ದ ಹೆಣ್ಣು ಮಕ್ಕಳನ್ನು ಕಾಮುಕರು ಬಗೆಬಗೆಯಲ್ಲಿ ಪೀಡಿಸುತ್ತಿದ್ದರು. ಬಸ್‌ಗಳಲ್ಲಿ, ಹೆಣ್ಣು ಮಕ್ಕಳ ಪಕ್ಕದಲ್ಲೇ ನಿಂತು ಹಿಂಸೆ ಕೊಡುತ್ತಿದ್ದರು. ಇದನ್ನೆಲ್ಲ ಕಂಡು ರೋಸಿಹೋಗಿ 2004ರಲ್ಲಿ, ಅಂದಿನ ಜಿಲ್ಲಾಧಿಕಾರಿಗೆ ಒಂದು ವಿವರವಾದ ಪತ್ರ ಬರೆದಿದ್ದೆ. ಹೆಣ್ಣು ಮಕ್ಕಳಿಗೆಂದೇ ಪ್ರತ್ಯೇಕ ಬಸ್ಸೊಂದನ್ನು ಬಿಟ್ಟರೆ, ಈ ಕೇಡಿಗಳಿಂದ ಪಾರಾಗಲು ಸಾಧ್ಯವಿದೆ ಎಂದೂ ಅದರಲ್ಲಿ ವಿವರಿಸಿದ್ದೆ. ಈ ಪತ್ರಕ್ಕೆ ಜಿಲ್ಲಾಧಿಕಾರಿಗಳು ಬಹುಬೇಗ ಸ್ಪಂದಿಸಿದರು. ವಿದ್ಯಾರ್ಥಿನಿಯರಿ ಗೆಂದೇ ವಿಶೇಷ ಬಸ್ ಓಡಿಸುವ ವ್ಯವಸ್ಥೆ ಮಾಡಿದರು.
ನನ್ನ ಭಾವಿ ಪತ್ನಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಡಬೇಕು ಅಂದುಕೊಂಡಾಗ ಇದೆಲ್ಲಾ ನೆನಪಿಗೆ ಬಂತು. “ಯಾರ ಬೆದರಿಕೆಗೂ ಹೆದರಬಾರದು. ಈ ಹೋರಾಟದಲ್ಲಿ ಅಕಸ್ಮಾತ್ ಸೋಲಾದರೂ ಕೊರಗಬಾರದು. ಆದರೆ, ಕಾಮುಕರಿಗೆ ಶಿಕ್ಷೆ ಕೊಡಿಸಲು ಶತಾಯಗತಾಯ ಪ್ರಯತ್ನಿಸಬೇಕು’ ಎಂದು ನನಗೆ ನಾನೇ ಹೇಳಿಕೊಂಡೆ. “ಆಕೆ ಆಸಹಾಯಕ ಹೆಣ್ಣುಮಗಳು. ಎಂಟು ಜನ ಕೇಡಿಗರು ಒಮ್ಮೆಲೇ ಆಕ್ರಮಣ ಮಾಡಿದ್ದರಿಂದ ಆಕೆ ತತ್ತರಿಸಿಹೋಗಿದ್ದಾಳೆ. ತಪ್ಪಿಸಿಕೊಂಡು ಬರಲು ಆಕೆಗೆ ಅವಕಾಶವೇ ಸಿಕ್ಕಿಲ್ಲ. ಹಾಗಾಗಿ, ಅವಳದ್ದೇನೂ ತಪ್ಪಿಲ್ಲ. ಒಂದು ಕ್ಷಣ, ಅವಳು ನಮ್ಮ ಸೊಸೆ ಎಂಬುದನ್ನು ಮರೆತು. ಈ ಹುಡುಗಿ ನಮ್ಮ ಮಗಳು ಎಂದುಕೊಂಡು ಯೋಚನೆ ಮಾಡಿ’ ಎಂದು ನನ್ನ ಹೆತ್ತವರಿಗೂ ಹೇಳಿದೆ. ಅವರು- “ನೀನು ಹೇಳ್ತಿರೋದು ಸರಿಯಾಗಿದೆ. ನಾವು ನ್ಯಾಯಕ್ಕಾಗಿ ಹೋರಾಡುವಾ’ ಎಂದರು.
ಆಮೇಲೆ ನಾನು ತಡ ಮಾಡಲಿಲ್ಲ. ರೇಪ್ ಮಾಡಿದವರ ವಿರುದ್ಧ ದೂರು ದಾಖಲಿಸಿದೆ. ಈ ಸಂದರ್ಭದಲ್ಲಿ ಊರ ಜನರೆಲ್ಲಾ ನಮ್ಮನ್ನು ಬೆಂಬಲಿಸಿದರು. ಆನಂತರವೇ, ಅಂದರೆ 2015ರ ಡಿಸೆಂಬರ್‌ನಲ್ಲಿ ನಮ್ಮ ಮದುವೆಯಾಯಿತು. ತಮ್ಮ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದಾಕ್ಷಣ ಕೇಡಿಗರು ಉರಿದುಬಿದ್ದರು. ಅವರೆಲ್ಲಾ ಶ್ರೀಮಂತರು ಮಾತ್ರವಲ್ಲ. ರಾಜಕೀಯ ನಾಯಕರ ಬೆಂಬಲ ಹೊಂದಿದವರೂ ಆಗಿದ್ದರು. ಮೊದಲು ನನಗೇ ಫೋನ್ ಮಾಡಿ- “ಒಳ್ಳೇ ಮಾತಲ್ಲಿ ಹೇಳ್ತಾ ಇದೀವಿ. ದೂರು ವಾಪಸ್ ತಗೋ. ನಮ್ಮನ್ನು ಎದುರು ಹಾಕ್ಕೊಂಡ್ರೆ ನಿನಗೆ ಒಳ್ಳೆದಾಗಲ್ಲ’ ಎಂದರು. ಈ ಮಾತಿಗೆ ನಾನು ಬಗ್ಗದಿದ್ದಾಗ, ಎಷ್ಟು ದುಡ್ಡು ಬೇಕಾದ್ರೂ ಕೊಡ್ತೇವೆ. ಕೇಸ್ ವಾಪಸ್ ತಗೋ ಎಂದರು. ಆಗಲೂ ನಾನು ರಿಯಾಕ್ಟ್ ಮಾಡಲಿಲ್ಲ. ಆಗ ಆ ಕೇಡಿಗರು ಏನು ಮಾಡಿದರು ಗೊತ್ತೇ? ಸುಪಾರಿ ಕೊಟ್ಟು, ಬಾಡಿಗೆ ಕೊಲೆಗಾರರನ್ನು ನನ್ನ ಹಿಂದೆ ಬಿಟ್ಟರು. ನಮ್ಮ ಕುಟುಂಬದ, ಹೆಂಡತಿಯ ಕುರಿತು ಇಲ್ಲಸಲ್ಲದ ಸುದ್ದಿ ಹಬ್ಬಿಸಿದರು. ನನ್ನ ಹೆತ್ತವರು, ನನ್ನ ಹೆಂಡತಿಯ ಪೋಷಕರು ಮತ್ತು ಊರ ಜನ ಬಂಡೆಯಂತೆ ನಮ್ಮ ಬೆನ್ನಿಗೆ ನಿಂತಿದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ.
ಲಾಯರ್‌ಗಳ ಮಾತಿನ ಸಾಮರ್ಥ್ಯದ ಮೇಲೇ ನ್ಯಾಯ ನಿರ್ಣಯ ಆಗುವಂಥ ಕಾಲ ಇದು. ಜಿಲ್ಲಾ ನ್ಯಾಯಾಲಯದಲ್ಲಿ ಅತ್ಯಾಚಾರಿಗಳ ಪರವಾಗಿಯೇ ತೀರ್ಪು ಬಂತು. ನನ್ನ ಪರವಾಗಿ ಕೇಸ್ ನಡೆಸಿದ ವಕೀಲರು, ನಮ್ಮ ಬಿಲ್ 14 ಲಕ್ಷ ರುಪಾಯಿಗಳು ಅಂದರು. ಸಾಮಾನ್ಯ ಕೃಷಿಕನಾದ ನಾನು 14 ಲಕ್ಷ ರೂ.ಗಳನ್ನು ಕೇಳಿದ ತಕ್ಷಣ ಎಲ್ಲಿಂದ ತರಲಿ? ಅದಕ್ಕಾಗಿ, ಪಿತ್ರಾರ್ಜಿತವಾಗಿ ನನ್ನ ಪಾಲಿಗೆ ಬಂದಿದ್ದ ಜಮೀನು ಮಾರಿದೆ. ಆಗ ದೊರೆತ ಹಣದಿಂದ ಲಾಯರ್ ಫೀ ಕಟ್ಟಿದೆ. ಕೇಡಿಗರ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಬೇರೆ ಲಾಯರ್‌ಗಳನ್ನು ನಂಬುವ ಬದಲು ಎಲ್‌ಎಲ್‌ಬಿ ಓದಿಕೊಂಡರೆ, ನಾನೇ ವಾದ ಮಾಡಬಹುದಲ್ಲವಾ ಅನ್ನಿಸಿತು, ತಡಮಾಡದೇ ಕೋರ್ಸ್‌ಗೆ ಸೇರಿಕೊಂಡೆ.
ಇದುವರೆಗೂ ಕೃಷಿಕನಾಗಿದ್ದುದು ನಿಜ. ಆದರೆ, ನನ್ನ ಹೆಂಡತಿಯ ಮೇಲೆ ದೌರ್ಜನ್ಯ ಎಸಗಿದವರಿಗೆ ಶಿಕ್ಷೆ ಕೊಡಿಸಲೇಬೇಕು ಎಂಬ ಹಠದಿಂದಲೇ ಲಾಯರ್ ಆಗಲು ನಿರ್ಧರಿಸಿದ್ದೇನೆ. ಅಕಸ್ಮಾತ್ ನಾಳೆ ಕೇಡಿಗಳ ಕೈ ಮೇಲಾಗಬಹುದು. ನನಗೇ ಏನಾದರೂ ತೊಂದರೆ ಯಾಗಬಹುದು. ಹಾಗೇನಾದರೂ ಆಗಿಬಿಟ್ಟರೆ. ಯಾವುದೇ ಕಾರಣಕ್ಕೂ ಎದೆಗುಂದಬೇಡ. ಧೈರ್ಯವಾಗಿ ಹೋರಾಟ ಮುಂದು ವರಿಸು ಎಂದೇ ನನ್ನ ಪತ್ನಿಗೆ ಹೇಳಿದ್ದೇನೆ. ಅವಳನ್ನೂ ಕಾನೂನು ಪದವಿ ಓದಿಸುತ್ತಿದ್ದೇನೆ. ಮುಂದೆ, ನಾವಿಬ್ಬರೂ ಲಾಯರ್‌ಗಳಾಗಿ ಹೆಣ್ಣುಮಕ್ಕಳ ಪರವಾಗಿ ಹೋರಾಡಬೇಕೆಂಬ ಆಸೆಯಿದೆ. ಸ್ವಲ್ಪ ತಡವಾಗಬಹುದು. ಆದರೆ ಕಡೆಗೂ ನಮಗೆ ನ್ಯಾಯ ಸಿಗುತ್ತದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುತ್ತದೆ. ಇದೇ ಕಾರಣದಿಂದಾಗಿ, ಹರ್ಯಾಣದಲ್ಲಿ ಇನ್ನು ಮುಂದೆ ಹೆಣ್ಣುಮಕ್ಕಳ ಮೇಲೆ ಆಗುವ ದೌರ್ಜನ್ಯದ ಪ್ರಮಾಣ ತಗ್ಗುತ್ತದೆ ಎಂಬ ಸದಾಶಯ ನನ್ನದು’ ಎನ್ನುತ್ತಾನೆ ಜಿತೇಂದರ್ ಚಟ್ಟಾರ್.
ಗ್ಯಾಂಗ್‌ರೇಪ್ ಆಗಿದೆ ಎಂದು ತಿಳಿದ ನಂತರವೂ ಅದೇ ಹುಡುಗಿಯನ್ನು ಮದುವೆಯಾಗಿರುವ, ಅತ್ಯಾಚಾರಿಗಳಿಗೆ ಶಿಕ್ಷೆ ಕೊಡಿಸಿಯೇ ಸಿದ್ಧ ಎಂದು ಪ್ರತಿಜ್ಞೆ ಮಾಡಿರುವ, ಜಿತೇಂದರ್‌ನಂಥ ಧೀರನಿಗೆ ಜೈ ಹೋ…(ಹಿಂದೂಸ್ಥಾನ್ ಟೈಮ್ಸ್‌ನಲ್ಲಿ ಪ್ರಕಟವಾದ ಬರಹದ ಭಾವಾನುವಾದ) ಎ.ಆರ್. ಮಣಿಕಾಂತ್