ಮುಂಬಯಿ: ಉದ್ಯಮಿ ಮುಕೇಶ್ ಅಂಬಾನಿ ಮಾಲಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹೊಸ ಸಾಹಸಕ್ಕೆ ಮುಂದಾಗಿದೆ. ಹೊಸ ವರ್ಷದಲ್ಲಿ ಅದು ಶುರುವಾಗುವ ಸಾಧ್ಯತೆ ಇದೆ. “ಭಾರತದ ಹೊಸ ಅಂಗಡಿ’ (ಇಂಡಿಯಾ ಕಿ ನಯೀ ದೂಕಾನ್) ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಅದು ಕಾರ್ಯ ನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಮನೆಗಳಿಗೆ ಬೇಕಾಗಿರುವ ಅಕ್ಕಿ, ಬೇಳೆ ಮತ್ತು ದಿನಸಿ ಸಾಮಗ್ರಿಗಳನ್ನು ಆನ್‌ಲೈನ್‌ನಲ್ಲಿ ಮಾರುವ ವ್ಯವಸ್ಥೆ ಅಭಿವೃದ್ಧಿಪಡಿಸಲಿದೆ. ಅದಕ್ಕಾಗಿ ಜಿಯೋ ಮಾರ್ಟ್ ಎಂಬ ಪೋರ್ಟಲ್ ಅನ್ನು ಶುರು ಮಾಡಲಿದೆ. ಸ್ಥಳೀಯ ಮಾರಾಟಗಾರರ ಜತೆಗೆ ಕೈಜೋಡಿಸಿ ಹೊಸ ವ್ಯವಸ್ಥೆ ಇರಲಿದೆ. ಸದ್ಯ ಥಾಣೆ, ಕಲ್ಯಾಣ್ ಮತ್ತು ನವೀ ಮುಂಬಯಿಗಳಲ್ಲಿ ರಿಲಯನ್ಸ್ ಮಾರ್ಟ್ ಕಾರ್ಯವೆಸಗುತ್ತಿದೆ. ಸುಮಾರು 50 ಸಾವಿರ ದಿನಸಿ ವಸ್ತುಗಳು ಅದರಲ್ಲಿ ಲಭ್ಯವಾಗಲಿದೆ. ಈಗಾಗಲೇ ನೋಂದಣಿ, ಮನೆಗೆ ಉಚಿತವಾಗಿ ತಲುಪಿಸಲು ಬುಕಿಂಗ್ ಶುರುವಾಗಿದೆ. ಇದರಿಂದಾಗಿ, ಆನ್‌ಲೈನ್ ಆಹಾರ ವಹಿವಾಟು ಕ್ಷೇತ್ರಗಳ ಫ್ಲಿಪ್‌ಕಾರ್ಟ್, ಅಮೆಜಾನ್, ಬಿಗ್‌ಬಾಸ್ಕೆಟ್‌ನಂಥ ಕಂಪೆನಿಗಳಿಗೆ ಈ ಬೆಳವಣಿಗೆ ಸವಾಲಾಗಿ ಪರಿಣಮಿಸಲಿದೆ.