Advertisement

ಇಂಟರ್ನೆಟ್‌ನಲ್ಲಿ ಜಿಯೋ ಸ್ಪರ್ಧೆ

12:39 PM Jul 06, 2018 | |

ರಿಲಯನ್ಸ್‌ನಿಂದ ಜಿಯೋಗಿಗಾ ಫೈಬರ್‌ ಸೇವೆಗಳ ಅಧಿಕೃತ ಘೋಷಣೆ
ರಿಲಯನ್ಸ್‌  ಮಹಾಸಭೆಯಲ್ಲಿ ಸಂಸ್ಥೆಯ ಮಾಲೀಕ ಮುಕೇಶ್‌ ಪ್ರಕಟಣೆ
ಕಡಿಮೆ ಶುಲ್ಕದಲ್ಲಿ ಸಂಪೂರ್ಣ ಗೃಹ ಮನರಂಜನೆ ಅಸ್ತ್ರದೊಂದಿಗೆ ಲಗ್ಗೆ 

Advertisement

ಮುಂಬಯಿ: ಎರಡು ವರ್ಷಗಳ ಹಿಂದೆ ಜಿಯೊ ಮೊಬೈಲ್‌ ಸೇವೆ ಆರಂಭಿಸುವ ಮೂಲಕ ದೇಶೀಯ ದೂರವಾಣಿ ಕ್ಷೇತ್ರದಲ್ಲಿ ಹೊಸಕ್ರಾಂತಿ ಮಾಡಿದ್ದ ಜಿಯೋ ಸಂಸ್ಥೆ, ಇದೀಗ, ತನ್ನ ಬಹು ನಿರೀಕ್ಷಿತ “ಜಿಯೋ ಗಿಗಾ ಫೈಬರ್‌’ ಮೂಲಕ ಬ್ರಾಡ್‌ ಬ್ಯಾಂಡ್‌ ಸೇವೆಗಳನ್ನು ಸದ್ಯದಲ್ಲೇ ಆರಂಭಿಸುವುದಾಗಿ ಘೋಷಿಸಿದೆ. ಮುಂಬಯಿಯಲ್ಲಿ ಗುರುವಾರ ನಡೆದ ರಿಲಯನ್ಸ್‌ ಮಹಾ ಸಮ್ಮೇಳನದಲ್ಲಿ ( ಆರ್‌ ಐ ಎಲ್‌ ಎಜಿ ಎಂ) ಸಂಸ್ಥೆಯ ಮಾಲೀಕ ಮುಕೇಶ್‌ ಅಂಬಾನಿ ಈ ಘೋಷಣೆ ಮಾಡಿದ್ದು, ಸದ್ಯದಲ್ಲೇ ದೇಶದ 1,100 ನಗರಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದೆ ಎಂದಿದ್ದಾರೆ. 

ಜಿಯೋ ಫೈಬರ್‌ ನೆಟ್‌ ವಿಶೇಷ
“ಸಂಪೂರ್ಣ ಗೃಹ ಮನೋರಂಜನಾ ವ್ಯವಸ್ಥೆ’ಯ ಪರಿಕಲ್ಪನೆಯೊಂದಿಗೆ ವಿನ್ಯಾಸ . 
ವೈ-ಫೈ ರೂಟರ್‌ ಹಾಗೂ ಡಿಟಿಎಚ್‌ನ ಸೆಟ್‌ ಬಾಕ್ಸ್‌ಗಳ ಸಮ್ಮಿಶ್ರಣ ತಂತ್ರಜ್ಞಾನ. 
ಶರವೇಗದ ಅಂತರ್ಜಾಲ ಸೌಲಭ್ಯ, ಆ ಮೂಲಕ ಪ್ಯಾನಲ್‌ ಮಾದರಿ ಟಿವಿಗಳನ್ನು ಸ್ಮಾರ್ಟ್‌ ಟಿವಿಗಳಾಗಿ 
ಪರಿವರ್ತಿಸುವ ಅವಕಾಶ. 
ಯುಎಚ್‌ಡಿ (ಅಲ್ಟ್ರಾ ಹೈಡೆಫಿನಿಷನ್‌) ಉತ್ಕೃಷ್ಟ ದರ್ಜೆಯ ವೀಡಿಯೋ ವೀಕ್ಷಣೆ ಸಾಧ್ಯ.  
ಮಲ್ಟಿ ಪಾರ್ಟಿ ವಿಡಿಯೋ ಕಾನ್ಫರೆನ್ಸಿಂಗ್‌, ಧ್ವನಿ ಆಧಾರಿತ ವರ್ಚುವಲ್‌ ಅಸಿಸ್ಟೆನ್ಸ್‌ ವರ್ಚುವಲ್‌ ರಿಯಾಲಿಟಿ ಗೇಮಿಂಗ್‌, ಡಿಜಿಟಲ್‌ ಶಾಪಿಂಗ್‌, ಸ್ಮಾರ್ಟ್‌ ಹೋಮ್‌ ಸಲ್ಯೂಷನ್ಸ್‌ .

ಸಂಪರ್ಕ ಪಡೆಯುವುದು ಹೇಗೆ? 
ಜಿಯೊ ಬ್ರಾಡ್‌ ಬ್ಯಾಂಡ್‌ನ‌ ಗ್ರಾಹಕರಿಗಾಗಿ “ಜಿಯೋ ಗಿಗಾ’ ಹೆಸರಿನಲ್ಲೇ ಹೊಸ ವೆಬ್‌ಸೈಟ್‌ ಶುರುವಾಗಲಿದ್ದು, ಫೈಬರ್‌ ಸೇವೆಗಳನ್ನು ಪಡೆಯಲಿಚ್ಛಿಸುವವರು ಆ.15ರ ನಂತರ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು ದಾಖಲಿಸಬಹುದು. ಸೆಪ್ಟೆಂಬರ್‌ ಮಧ್ಯಭಾಗದ ನಂತರ ಸೇವೆ ಸಿಗಲಿವೆ. 

ಏರ್‌ಟೆಲ್‌ ಹೊಸ ಯೋಜನೆ ಘೋಷಣೆ
ಅತ್ತ, ರಿಲಯನ್ಸ್‌ ಜಿಯೋ ಗಿಗಾ ಫೈಬರ್‌ ಸೇವೆ  ಘೋಷಿಸುತ್ತಿದ್ದಂತೆ, ಇತ್ತ ದೇಶೀಯ ಡೇಟಾ ಸೇವಾ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಸಿದೆ. ರಿಲಯನ್ಸ್‌ ಘೋಷಣೆ ಬೆನ್ನಲ್ಲೇ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ತನ್ನ ಗ್ರಾಹಕರಿಗಾಗಿ ಯಾವುದೇ ಶುಲ್ಕವಿಲ್ಲದೆ ಹೆಚ್ಚುವರಿ 100 ಜಿಬಿ ಡೇಟಾ ಪ್ರಯೋಜನ ಘೋಷಿಸಿದೆ. 

Advertisement

ಜಿಯೋ ಫೋನ್‌ 2 ಘೋಷಣೆ
ಸಭೆಯಲ್ಲಿ ಜಿಯೋ ಫೋನ್‌ 2 ಎಂಬ ಫೀಚರ್‌ ಫೋನ್‌ಗಳನ್ನು ಅಧಿಕೃತವಾಗಿ ಘೋಷಿಸಲಾಯಿತು. ಇದೊಂದು ಸ್ಮಾರ್ಟ್‌ ಫೋನ್‌ ಹಾಗೂ ಹಳೆಯ ಫೀಚರ್‌ ಫೋನ್‌ಗಳ ಸಮ್ಮಿಶ್ರಣ ಸ್ವರೂಪ. 2.4 ಇಂಚು ಎಲ್‌ಸಿಡಿ ಪರದೆ ಹೊಂದಿರುವ ಈ ಫೋನಿನಲ್ಲಿ ವ್ಯಾಟ್ಸ್‌  ಆ್ಯಪ್‌, ಫೇಸ್‌ ಬುಕ್‌, ಯೂಟ್ಯೂಬ್‌ ನೋಡಲು ಅವಕಾಶವಿದೆ. ಸ್ಕ್ರೀನ್‌ ರೊಟೇಶನ್‌ ಇರಲಿದ್ದು, ಆ.15ರಿಂದ  ಲಭ್ಯವಾಗಲಿವೆ. 

ಭಾರತ್‌ ಜೋಡೋ ಹಾಗೂ ತೈಲೋತ್ಪನ್ನ
ಭಾರತ್‌ ಪೆಟ್ರೋಲಿಯಂ ಜತೆಗೆ ಕೈ ಹಾಕಿರುವ ಯೋಜನೆಯನು ಸಾರ, ಕೆ.ಜಿ-ಡಿ6 ಬ್ಲಾಕ್‌ಗಳಿಂದ 2022ರ ಹೊತ್ತಿಗೆ ದಿನವೊಂದಕ್ಕೆ 3 ಕೋಟಿಯಿಂದ 3.50 ಕೋಟಿ ಕ್ಯೂಬಿಕ್‌ ಮೀಟರ್‌ಗಳಷ್ಟು ನೈಸರ್ಗಿಕ ಅನಿಲಗಳ ಉತ್ಪಾದನೆ ಏರಿಸಲಾಗುವುದು. ಇದೇ ವರ್ಷ ಬ್ಯುಟೈಲ್‌ ರಬ್ಬರ್‌ ಯೋಜನೆ  ಆರಂಭಿಸಲಾಗಿದೆ ಎಂದಿದ್ದಾರೆ ಅಂಬಾನಿ. 

ಭಾರತ್‌- ಇಂಡಿಯಾ ಜೋಡೊ
ದೇಶೀಯ ಇ-ಮಾರುಕಟ್ಟೆಯಲ್ಲೂ ಮಿಂಚಿನ ಸಂಚಲನ ಸೃಷ್ಟಿಸಲು ರಿಲಯನ್ಸ್‌ ಸಂಸ್ಥೆ ಮುಂದಾಗಿದೆ. ಈ ಕ್ಷೇತ್ರ ದ ಮುಂಚೂಣಿಯಲ್ಲಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ನ ಪ್ರಾಬಲ್ಯ ಮುರಿಯಲು ಹೊಸ ತಂತ್ರ ರೂಪಿಸಲಾಗಿದ್ದು, ದೇಶದ ಹಲವಾರು ನಗರಗಳಲ್ಲಿರುವ, ಆನ್‌ಲೈನ್‌ ಮಾರಾಟ ಕ್ಷೇತ್ರಕ್ಕೆ ಕಾಲಿಡದ ಡಿ ಮಾರ್ಟ್‌, ಅವೆನ್ಯೂ ಸೂಪರ್‌ ಮಾರ್ಕೆಟ್ಸ್‌ ಮುಂತಾದ ಸೂಪರ್‌ ಮಾರ್ಕೆಟ್‌ಗಳು, ಬಟ್ಟೆ ತಯಾರಕರು, ಕಿರಾಣಿ ಅಂಗಡಿಗಳು ಸೇರಿದಂತೆ  ವಂಶ ಪಾರಂಪರ್ಯವಾಗಿ ಬೆಳೆದು ಬಂದಿರುವ ಉದ್ದಿಮೆಗಳ ಒಕ್ಕೂಟವೊಂದನ್ನು ರಚಿಸಿ ಹೊಸ ಆನ್‌ ಲೈನ್‌ ಮಾರಾಟ ಜಾಲತಾಣ ಆರಂಭಿಸುವ ಉದ್ದೇಶ ಹೊಂದಿದೆ.  ಅದಕ್ಕೆ “ಭಾರತ್‌-ಇಂಡಿಯಾ ಜೋಡೋ’ ಎಂದು ಹೆಸರಿಡಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next