ನವದೆಹಲಿ: ಇತ್ತೀಚೆಗೆ ಕಾಶ್ಮೀರದ ಗಡಿ ನಿಯಂತ್ರಣ (ಎಲ್ ಒಸಿ) ರೇಖೆ ಸಮೀಪ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯನ್ನು ಮತ್ತು ಉಗ್ರರ ನುಸುಳುವಿಕೆಯನ್ನು ತಡೆದು ಹಿಮ್ಮೆಟ್ಟಿಸಲಾಗಿದೆ. ಮತ್ತೊಂದೆಡೆ ಭಾರತೀಯ ಸೈನಿಕರ ಸಂಭ್ರಮ, ಸಂದೇಶವನ್ನು ಹರಡುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಗಡಿ ನಿಯಂತ್ರಣ ರೇಖೆ ಸಮೀಪ ಸುಮಾರು 50-60 ಭಾರತೀಯ ಸೈನಿಕರು ಪ್ರೀತಿಯನ್ನು ಸಾರುವ ಕ್ರಿಸ್ಮಸ್ ಕ್ಯಾರೋಲ್ಸ್, ಜಿಂಗಲ್ ಬೆಲ್ಸ್ ಹಾಡುವ ಮೂಲಕ ಸಂಭ್ರಮಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ರಕ್ತ ಹೆಪ್ಪುಗಟ್ಟಿಸುವ ಹಿಮಪಾತ, ಶೂನ್ಯ ಉಷ್ಣಾಂಶದ ಅತೀ ಎತ್ತರದ ಗಡಿ ನಿಯಂತ್ರಣ ರೇಖೆಯ ಪ್ರದೇಶದಲ್ಲಿ ಸೈನಿಕರು ಕ್ರಿಸ್ಮಸ್ ಸಂಭ್ರಮವನ್ನಾಚರಿಸುವುದು ಸುಲಭದ ಕೆಲಸವಲ್ಲ ಎಂದು ವರದಿ ತಿಳಿಸಿದೆ. ಪ್ರತಿಭಾನ್ವಿತ ಸೈನಿಕರ ಗಾಯಕರ ತಂಡ ಚಪ್ಪಾಳೆ ತಟ್ಟುತ್ತಾ, ಜತೆಗೆ ಸಾಂತಾ ಕ್ಲಾಸ್ ಕೂಡಾ ಹೆಜ್ಜೆ ಹಾಕುತ್ತಿರುವುದು ವಿಡಿಯೋದಲ್ಲಿದೆ.
130 ಸೆಕೆಂಡುಗಳ ವಿಡಿಯೋದಲ್ಲಿ ಅಸ್ಸಾಂ ರೆಜಿಮೆಂಟ್ ಸೈನಿಕರು ಹಿಮಪಾತದದ ನಡುವೆಯೇ ಕ್ರಿಸ್ಮಸ್ ಸಂಭ್ರಮದಲ್ಲಿ ತೊಡಗಿದ್ದು, ಅಸ್ಸಾಂ ರೆಜಿಮೆಂಟ್ ನ ಸಂಕೇತವಾದ ಖಡ್ಗಮೃಗದ ಸಂಕೇತವನ್ನು ಹಿಮದಲ್ಲಿಯೇ ರಚಿಸಿ ಅದರ ಸುತ್ತ ಹಾಡುತ್ತಿರುವುದು ದೃಶ್ಯದಲ್ಲಿದೆ.