Advertisement

ಶೂಟಿಂಗ್‌ಗೆ ಜಿಂದಾಲ್‌ 9 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇಕೆ?

12:30 AM Dec 29, 2018 | Team Udayavani |

ಬೆಂಗಳೂರು: ಭವಿಷ್ಯದ 2 ಒಲಿಂಪಿಕ್ಸ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಶೂಟರ್‌ಗಳನ್ನು ಗುರಿಯಾಗಿರಿಸಿಕೊಂಡು ಜಿಂದಾಲ್‌ (ಜೆಎಸ್‌ಡಬ್ಲೂ) ಬರೋಬ್ಬರಿ 9 ಸಾವಿರ ಕೋಟಿ ರೂ. ಹಣ ವಿನಿಯೋಗಿಸಲು ಸಜ್ಜಾಗಿದೆ. ಅಷ್ಟೊಂದು ಹಣ ಶೂಟಿಂಗ್‌ ಕ್ಷೇತ್ರದಲ್ಲಿ ಹೂಡಿದ್ದು ಏಕೆ?, ಜಿಂದಾಲ್‌ಗೆ ಇದರಿಂದ ಏನು ಲಾಭ?, ಏನಿದು ಒಟ್ಟಾರೆ ಯೋಜನೆ?, ಎಷ್ಟು ಕ್ರೀಡಾಪಟುಗಳಿಗೆ ಇದರಿಂದ ಪ್ರಯೋಜನವಾಗಲಿದೆ?, ನಿರೀಕ್ಷೆ ಮಾಡುವ ಒಟ್ಟು ಪದಕಗಳೆಷ್ಟು? ಸೇರಿದಂತೆ ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಜಿಂದಾಲ್‌ ಸಿಇಒ (ಮುಖ್ಯ ಕಾರ್ಯ ನಿರ್ವಹಣಾಧಿಕಾರಿ) ಮುಸ್ತಫಾ ಗೌಸ್‌ ಪ್ರತಿಕ್ರಿಯಿಸಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

Advertisement

– ಏನಿದು ಒಟ್ಟಾರೆ ಯೋಜನೆ? 9 ಸಾವಿರ ಕೋಟಿ ರೂ. ಹಣ ಹೇಗೆ ವಿನಿಯೋಗಿಸುತ್ತೀರಿ?
2020 ಟೋಕಿಯೋ ಹಾಗೂ 2024 ಪ್ಯಾರಿಸ್‌ ಒಲಿಂಪಿಕ್ಸ್‌ ಗುರಿಯಾಗಿರಿಸಿಕೊಂಡು ಯೋಜನೆ ರೂಪಿಸಲಾಗಿದೆ. ಎನ್‌ಆರ್‌ಐ (ಭಾರತೀಯ ರೈಫ‌ಲ್‌ ಸಂಸ್ಥೆ) ಸಹಭಾಗಿತ್ವದಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ಅತ್ಯಾಧುನಿಕ ಸೌಲಭ್ಯವುಳ್ಳ ಒಲಿಂಪಿಕ್ಸ್‌ ತರಬೇತಿ ಕೇಂದ್ರಗಳಿಗೆ ಹಣ ಹಂತ-ಹಂತವಾಗಿ ಬಿಡುಗಡೆ ಮಾಡುತ್ತೇವೆ. ಅಲ್ಲಿನ ಅವಶ್ಯಕತೆ ತಿಳಿದುಕೊಳ್ಳುತ್ತೇವೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಹಣ ಬಿಡುಗಡೆ ಮಾಡಲಾಗುತ್ತದೆ. ಯೋಜನೆ ಯಶಸ್ವಿಯಾಗುವಂತೆ ನೋಡಿಕೊಳ್ಳುತ್ತೇವೆ.

–  ಇಷ್ಟು ದೊಡ್ಡ ಯೋಜನೆ ರೂಪಿಸಲು ಕಾರಣ?
ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ಶೂಟರ್‌ಗಳು ಈ ಯೋಜನೆ ಸದುಪಯೋಗ ಪಡೆಯುವಂತೆ ಮಾಡುವುದು ನಮ್ಮ ಉದ್ದೇಶ. ಈಗಾಗಲೇ ಅಥ್ಲೆಟಿಕ್ಸ್‌ ಸೇರಿದಂತೆ ದೇಶದ ವಿವಿಧ ಕ್ರೀಡೆಗಳಲ್ಲಿರುವ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡುತ್ತಿದ್ದೇವೆ. ಜತೆಗೆ ಎನ್‌ಆರ್‌ಐ ನಮ್ಮ ಯೋಜನೆ ಒಪ್ಪಿಕೊಂಡಿದ್ದರಿಂದ ಮಹತ್ವದ ಯೋಜನೆಗೆ ಅಡ್ಡಿ ಆತಂಕಗಳಿಲ್ಲದೆ ಚಾಲನೆ ಸಿಕ್ಕಿದೆ.

– ಒಲಿಂಪಿಕ್ಸ್‌ನಿಂದ ನೀವು ನಿರೀಕ್ಷಿಸುವ ಪದಕಗಳೆಷ್ಟು?
ಕೇವಲ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಉದ್ದೇಶ ಇಟ್ಟುಕೊಂಡು ಯೋಜನೆ ರೂಪಿಸಿಲ್ಲ. ಪದಕ ಗೆಲ್ಲಲು ಸ್ಪರ್ಧಿಗಳಿಗೆ ಗುರಿ ನೀಡಲಾಗುತ್ತದೆಯೇ ಹೊರತು ಒತ್ತಡ ಹೇರಲಾಗುವುದಿಲ್ಲ. ಒಟ್ಟಾರೆ ಭಾರತೀಯ ಶೂಟಿಂಗ್‌ ಕ್ಷೇತ್ರ ಬಲವರ್ಧನೆ ಮಾಡುವುದಷ್ಟೇ ನಮ್ಮ ಉದ್ದೇಶವಾಗಿದೆ.

– ಎಷ್ಟು ಶೂಟರ್ಗೆ ಇದರಿಂದ  ಪ್ರಯೋಜನ ದೊರೆಯಲಿದೆ?
ಶೂಟಿಂಗ್‌ಗೆ ಬೇಕಾಗುವ ಪರಿಕರ, ಕೋಚಿಂಗ್‌ ಸಿಬ್ಬಂದಿ ನೇಮಕ, ತರಬೇತಿ ಸೇರಿದಂತೆ ಹಲವಾರು ರೀತಿಯಲ್ಲಿ ಹಣ ಬಳಕೆಯಾಗಲಿದೆ. ಶೂಟರ್ ಅನ್ನು ಹುಟ್ಟು ಹಾಕುವ ಜತೆಗೆ ಗುಣಮಟ್ಟವುಳ್ಳ ತರಬೇತುದಾರರನ್ನೂ ನೇಮಕ ಮಾಡಿಕೊಳ್ಳಬೇಕಿದೆ. ಈ ಮೂಲಕ ಯುವ ಶೂಟರ್‌ಗಳಿಗೆ ತರಬೇತಿ ಸಿಗುವಂತೆ ಮಾಡಲಾಗುತ್ತದೆ.

Advertisement

– ಕ್ರೀಡೆ, ಕ್ರೀಡಾಪಟುಗಳ ಬಗ್ಗೆ ಜಿಂದಾಲ್‌ ಸಂಸ್ಥೆಗೆ ಏಕೆ ಇಷ್ಟೊಂದು ಕಾಳಜಿ?
ನಮ್ಮ ದೇಶದಲ್ಲಿ ಕ್ರೀಡೆಯನ್ನು ಒಂದು ಸಂಸ್ಕೃತಿಯಾಗಿ ಬಿಂಭಿಸುವುದು, ಕ್ರೀಡಾಪಟುಗಳ ಸಂಖ್ಯೆಯನ್ನು ಹೆಚ್ಚಿಸುವುದು ನಮ್ಮ ಧ್ಯೇಯ, ಕುಸ್ತಿ, ಜ್ಯೂಡೊ, ಅಥ್ಲೆಟಿಕ್ಸ್‌ ಹಾಗೂ ಈಜು ಕೇತ್ರದಲ್ಲಿರುವ ಸ್ಪರ್ಧಿಗಳ ಅಭಿವೃದ್ದಿಗೆ ನಾವು ಪಣ ತೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಆಯೋಜನೆಗೊಳ್ಳಲಿರುವ ಕ್ರೀಡಾಕೂಟದ ಬಳಿಕ ಇದರ ಸ್ಪಷ್ಟ ಫ‌ಲಿತಾಂಶವನ್ನು ನಾವೆಲ್ಲ ಕಾಣಲಿದ್ದೇವೆ.

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next