ಯಾದಗಿರಿ: ಜಿಂದಾಲ್ ಈಗಾಗಲೇ ಮತ್ತೂಂದು ಘಟಕ ಸ್ಥಾಪಿಸುವಷ್ಟು ಭೂಮಿ ಹೊಂದಿದೆ. ಹಾಗಾಗಿ, ಅದಕ್ಕೆ ಜಮೀನು ನೀಡುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್‌ಗೆ ಭೂಮಿ ನೀಡುವ ಮೂಲಕ ಇಡೀ ರಾಜ್ಯವನ್ನೇ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ. ಜಿಂದಾಲ್‌ಗೆ ಭೂಮಿ ನೀಡುವ ನಿರ್ಧಾರಕ್ಕೆ ರಾಜ್ಯಾದ್ಯಂತ ರೈತ ಸಮೂಹವೂ ವಿರೋಧ ವ್ಯಕ್ತಪಡಿಸುತ್ತಿದೆ.
ಸರ್ಕಾರ ರೈತರ ಹಿತ ಕಾಯಬೇಕು. ಬರಗಾಲ ವೀಕ್ಷಣೆಗಾಗಿ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದು, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಅ ಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದರು.
ಸಿಎಂ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಬಿಟ್ಟು ಸಂಕಷ್ಟಕ್ಕೀಡಾದ ಜನರ ಸಮಸ್ಯೆಗೆ ಸ್ಪಂದಿಸಲು ಮುಂದಾಗಬೇಕು. ಕಳೆದ ಒಂದು ವರ್ಷದಿಂದ ರೆಸಾರ್ಟ್‌ನಲ್ಲಿದ್ದ ಸಿಎಂ, ಅಲ್ಲಿ ಕೇವಲ ಉದ್ಯಮಿಗಳನ್ನು ಭೇಟಿ ಮಾಡಿ ಈಗ ಕಥೆ ಹೇಳಿಕೊಂಡು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ.
ನಮ್ಮ ತೀವ್ರ ಹೋರಾಟದಿಂದ ಸಿಎಂ ರೆಸಾರ್ಟ್‌ನಿಂದ ಹೊರಬಂದಿದ್ದಾರೆ. ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು. ಬರ ನಿರ್ವಹಣೆಗೆ ಪ್ರತಿ ತಾಲೂಕಿಗೆ ಮೂರು ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವರಾದ ಗೋವಿಂದ ಕಾರಜೋಳ, ಲಕ್ಷಣ ಸವದಿ, ಬಾಬುರಾವ ಚಿಂಚನಸೂರ, ಡಾ| ಎ.ಬಿ. ಮಾಲಕರೆಡ್ಡಿ, ರಾಯಚೂರು ಸಂಸದ ಅಮರೇಶ್ವರ ನಾಯಕ, ಶಾಸಕರಾದ ರಾಜುಗೌಡ, ವೆಂಕಟರೆಡ್ಡಿ ಮುದ್ನಾಳ ಇದ್ದರು.