Advertisement

ಜಿಮಿಕ್ಕಿ ಕಮ್ಮಲ್ ಮಾಡ್ತದೆ ಕಮಾಲ್!

12:01 PM Oct 25, 2017 | |

ಸಾಂಪ್ರದಾಯಿಕವಾಗಿ ಬಳಕೆಯಲ್ಲಿದ್ದ ಕಿವಿಯೋಲೆ ಇದೀಗ ಹೊಸ ರೂಪು ಪಡೆದು ಜಿಮಿಕ್ಕಿ ಕಮ್ಮಲ್‌ ಆಗಿದೆ. ಕಡಿಮೆ ಬೆಲೆಯ ಇದನ್ನು ನಾವು ತಯಾರಿಸಬಹುದು! ಈಗ ಮಾರುಕಟ್ಟೆಯಲ್ಲಿರುವ ಜಿಮಿಕ್ಕಿ ಕಮ್ಮಲ್‌ನಲ್ಲಿ ತಾವರೆ, ಲಕ್ಷ್ಮಿ, ನವಿಲಿನ ಆಕೃತಿಗಳು ಕಾಣಿಸಿಕೊಂಡು ಈ ಮಾಡರ್ನ್ ಕಿವಿಯೋಲೆಗೆ ಹೊಸ ಮೆರುಗು ತುಂಬಿವೆ…

Advertisement

ಖ್ಯಾತ ಮಲಯಾಳಂ ನಟ ಮೋಹನ್‌ ಲಾಲ್ ಅವರ ಹೊಸ ಚಿತ್ರದ ‘ಜಿಮಿಕ್ಕಿ ಕಮ್ಮಲ್’ ಹಾಡು ಬಿಡುಗಡೆ ಆಗಿದ್ದೇ ತಡ, ಆ ಹಾಡಿಗೆ ಕುಣಿಯುವ ನಾರೀಮಣಿಯರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡತೊಡಗಿತು. ಇದರಿಂದ ಚಿತ್ರದ ಹಾಡು ಒಮ್ಮೆಲೇ ತುಂಬಾ ಪಾಪ್ಯುಲರ್‌ ಆಯಿತು. ಈ ಹಾಡಿನ ಮೇಲೆ ಹಲವಾರು ಪ್ಯಾರವಿಡೀ, ಅಂದರೆ ವಿಡಂಬನಾ ಕಾವ್ಯಗಳನ್ನೂ ಬರೆಯಲಾಯ್ತು. ಅಂತೂ ತಮಿಳು ಚಿತ್ರದ “ವೈ ದಿಸ್‌ ಕೊಲವೆರಿ ಡಿ?’ ಹಾಡಿನಂತೆ ಈ ಹಾಡು ಎಲ್ಲರ ಊಹೆಗೂ ಮೀರಿ ದೊಡ್ಡ ಸೆನ್ಸೇಷನ್‌ ಸೃಷ್ಟಿಸಿಬಿಟ್ಟಿತು.

ಆ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯರ ಸಂದರ್ಶನ ಕೂಡ ಮಾಡಲಾಯಿತು. ಹಲವಾರು ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡು ಇನ್ನೂ ಫೇಮಸ್‌ ಆದರು. ಮಲಯಾಳಂ ತಿಳಿಯದೆ ಇದ್ದವರೂ ಈ ಹಾಡನ್ನು ಕಲಿತು ಹಾಡತೊಡಗಿದರು. ಅಂತೆಯೇ, ಈ ಹಾಡಿನ ಸಾಲುಗಳಲ್ಲಿ ಬರುವ ಪದಗಳ ಅರ್ಥ ಏನು ಎಂದು ತಿಳಿಯಲೂ ಮುಂದಾದರು. ಆಗ ಗೊತ್ತಾಯಿತು, ಜಿಮಿಕ್ಕಿ  ಕಮ್ಮಲ್ ಎಂದರೆ ಕೇರಳದ ಮಹಿಳೆಯರು ತೊಡುವ ಸಾಂಪ್ರದಾಯಿಕ ಕಿವಿಯೋಲೆಗಳ ಒಂದು ಪ್ರಕಾರ ಎಂದು. 

ಅನಾದಿ ಕಾಲದಿಂದಲೂ ಹೆಣ್ಣು ಮಕ್ಕಳು ಕಿವಿಯೋಲೆ ತೊಡುತ್ತಿದ್ದಾರೆ. ಮಲಯಾಳೀ ವಧುಗಳು, ಮೋಹಿನಿಯಾಟ್ಟಂ ನೃತ್ಯಗಾರರು ಹಾಗೂ ಮಲಯಾಳಂ ಸಂಸ್ಕೃತಿಯನ್ನು ಬಿಂಬಿಸುವ ಎಲ್ಲ ತರಹದ ಉಡುಗೆಗಳಲ್ಲಿ ಮಹಿಳೆಯರು ಈ ಜಿಮಿಕ್ಕಿ  ಕಮ್ಮಲ್ ಅನ್ನು ತೊಡುತ್ತಾರೆ. ವಜ್ರ, ಚಿನ್ನ, ಬೆಳ್ಳಿ, ಮುತ್ತು, ಹವಳ, ರತ್ನಗಳಿಂದ ಇವನ್ನು ಮಾಡಲಾಗುತ್ತದೆ. ಹಾಗಾಗಿ ಅಮ್ಮ, ಅಜ್ಜಿ ತೊಡುತ್ತಿದ್ದ ಕಿವಿಯೋಲೆಗಳನ್ನು ಈಗಿನ ಮಲಯಾಳಿ ಹುಡುಗಿಯರೂ ತೊಡುತ್ತಾರೆ.

ಚಿತ್ರದ ಹಾಡಿಗೆ ಖ್ಯಾತಿ ಬಂದ ಕೂಡಲೇ ಮಲಯಾಳೀ ಹುಡುಗಿಯರಷ್ಟೇ ಅಲ್ಲ, ಭಾರತದ ಇತರ ರಾಜ್ಯಗಳ ಹೆಣ್ಣು ಮಕ್ಕಳೂ ಇವನ್ನು ತೊಡಲು ಶುರು ಮಾಡಿದ್ದಾರೆ! ಈ ಫ್ಯಾಷನ್‌ ನ ಪ್ರಭಾವ ಮದುವೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಎಥಿ°ಕ್‌ ಡೇಯಂಥ ಸಮಾರಂಭ, ಹಬ್ಬ ಮತ್ತು ಪೂಜೆಗಳಿಗೆ ಬರುವ ಮಹಿಳೆಯರಲ್ಲಿ ಕಾಣಿಸುತ್ತಿದೆ. ಸಾಂಪ್ರದಾಯಿಕ ಕಿವಿಯೋಲೆ ಹೊಸ ರೂಪ ಪಡೆದು ಇದೀಗ ಜಿಮಿಕ್ಕಿ ಕಮ್ಮಲ್ನಲ್ಲಿ ಪುಟ್ಟ ಗಣಪತಿ, ತಾವರೆ, ಲಕ್ಷಿ, ನವಿಲು, ಮುಂತಾದ ಆಕೃತಿಗಳು ಕಾಣಿಸಿಕೊಂಡಿವೆ.

Advertisement

ಅವುಗಳ ಕೆಳಬದಿಯಲ್ಲಿ ಗುಂಬಜ್‌ನಂಥ ಹ್ಯಾಂಗಿಂಗ್‌ ಇರುತ್ತದೆ. ಅದರಲ್ಲಿ ಗೆಜ್ಜೆ ಅಥವಾ ಮಣಿಯನ್ನೂ ಅಳವಡಿಸಲಾಗುತ್ತದೆ. ಇವುಗಳು ಜೀನ್ಸ್, ಶಾರ್ಟ್ಸ್, ಸೂಟ್‌ ಅಥವಾ ಇತರ ವೆಸ್ಟರ್ನ್ (ಪಾಶ್ಚಾತ್ಯ) ಉಡುಗೆಗಳ ಜೊತೆ ಅಷ್ಟೊಂದು ಚೆನ್ನಾಗಿ ಕಾಣಿಸುವುದಿಲ್ಲ. ಹಾಗಾಗಿ ಇವುಗಳನ್ನು ಸಲ್ವಾರ್‌ ಕಮೀಜ್‌, ಚೂಡಿದಾರ, ಲಂಗ ದಾವಣಿ, ಸೀರೆ, ಘಾಗ್ರಾ ಚೋಲಿ, ಉದ್ದ ಲಂಗ, ಅನಾರ್ಕಲಿ, ಪಟಿಯಾಲ ಸೂಟ್‌ ಮತ್ತು ಕುರ್ತಾದಂಥ ಇಂಡಿಯನ್‌ (ಭಾರತೀಯ) ಉಡುಗೆಗಳ ಜೊತೆ ತೊಟ್ಟರೆ ಒಳ್ಳೆಯದು. 

ಇವುಗಳು ಚಿನ್ನ ಅಥವಾ ಬೆಳ್ಳಿಯದ್ದೇ ಆಗಿರಬೇಕೆಂದಿಲ್ಲ. ಇವುಗಳನ್ನು ಜಂಕ್‌ ಜೂಲರಿಗೆ ಬಳಸಲಾಗುವ ಲೋಹದಿಂದ, ಪ್ಲಾಸ್ಟಿಕ್‌, ಗಾಜು ಮತ್ತು ಮರದ ತುಂಡಿನಿಂದಲೂ ತಯಾರಿಸಬಹುದು. ಇಂಥ ದುಬಾರಿಯಲ್ಲದ ಜಿಮಿಕ್ಕಿ ಕಮ್ಮಲ್ ಮಾರುಕಟ್ಟೆಯಲ್ಲಿ ಲಭ್ಯ ಕೂಡ. ಇವುಗಳನ್ನು ನೀವೇ ಸ್ವತಃ ಮಾಡುವುದು ಹೇಗೆ ಎಂಬ ಅನೇಕ ವಿಡಿಯೋಗಳು ಯು ಟ್ಯೂಬ್ ನಲ್ಲಿ ಇವೆ. ಈ ಹಬ್ಬಕ್ಕೆ ನೀವು ಹೊಸ ಬಟ್ಟೆ ಕೊಂಡುಕೊಳ್ಳದಿದ್ದರೂ ಪರವಾಗಿಲ್ಲ. ಜಿಮಿಕ್ಕಿ ಕಮ್ಮಲ್ ತೊಟ್ಟು ನೋಡಿ. ಎಲ್ಲರ ಕಣ್ಣು ನಿಮ್ಮತ್ತ ತಿರುಗಿ ನೋಡುವಂತೆ ಮಾಡಿ!

* ಅದಿತಿಮಾನಸ ಟಿ. ಎಸ್‌

Advertisement

Udayavani is now on Telegram. Click here to join our channel and stay updated with the latest news.

Next