ಹೊಸದಿಲ್ಲಿ : ಗುಜರಾತ್ ನೂತನ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ಪಾಲ್ಗೊಳ್ಳಲಿದ್ದ ಇಂದು ಮಂಗಳವಾರದ ರ‍್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿರುವ ಕಾರಣ ರಾಲಿಯನ್ನು ರದ್ದುಪಡಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವ ಸಲುವಾಗಿ ದಿಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಮೇವಾನಿ ಅವರ “ಯುವ ಹೂಂಕಾರ್ ರ‍್ಯಾಲಿ’ಯನ್ನು ರದ್ದುಪಡಿಸಲಾದುದಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಯಿತು.
ಎಎನ್‌ಐ ವರದಿಯ ಪ್ರಕಾರ ಗುಜರಾತ್ ದಲಿತ ನಾಯಕನ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿ ಪ್ರಬಲ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಇದೇ ವೇಳೆ ಮೇವಾನಿಯನ್ನು ಟೀಕಿಸಿ ಹಲವಾರು ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯಲ್ಲಿ ಕಂಡು ಬಂದಿವೆ. ಈ ಪೋಸ್ಟರ್‌ಗಳಲ್ಲಿ ಮೇವಾನಿಯನ್ನು “ಭಗೋಡಾ’ (ತಲೆಮರೆಸಿಕೊಂಡವನು) ಎಂದು ಆರೋಪಿಸಲಾಗಿದೆಯಲ್ಲದೆ ಜಾತಿ ನೆಲೆಯಲ್ಲಿ ಸಮಾಜವನ್ನು ಒಡೆಯುವ ಪ್ರಚೋದನಕಾರಿ ಭಾಷಣ ಮಾಡುವವನೆಂದೂ ಖಂಡಿಸಲಾಗಿದೆ. ಮೇಲಾಗಿ ಮೇವಾನಿಗೆ ನಕ್ಸಲರ ನಂಟು ಕೂಡ ಇದೆ ಎಂದು ಆರೋಪಿಸಲಾಗಿದೆ.
ದಿಲ್ಲಿ ಪೋಲಿಸರು ಸೆ.144ರಡಿ ಮೇವಾನಿ ರ‍್ಯಾಲಿಗೆ ಅನುಮತಿ ನಿರಾಕರಿಸಿದ್ದರು. ದಿಲ್ಲಿಯು ಗಣರಾಜ್ಯೋತ್ಸವ ದಿನಕ್ಕೆ ಸಜ್ಜಾಗುತ್ತಿರುವ ಕಾರಣವನ್ನೂ ಪೊಲೀಸರು ಮುಂದಿಟ್ಟಿದ್ದರು.