ಖಾರ್ಜಂಡ್ : ವೈದ್ಯರಿಲ್ಲದ ಕಾರಣ ಬಾಣಂತಿ ತಾಯಿ ಹಾಗೂ ನವಜಾತ ಶಿಶುವೊಂದು ಸರ್ಕಾರಿ ಆಸ್ಪತ್ರೆಯ ಎದುರೇ ಸಾವನ್ನಪ್ಪಿದ ಘಟನೆ ಗಿರಿಡಿಹ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬರ್ದೌನಿ ಗ್ರಾಮದ ಲಕ್ಷ್ಮಿಬಥನ್ ಕಾಲೋನಿ ನಿವಾಸಿ ಸುರ್ಜಾ ಮರಂಡಿ ಹಾಗೂ ಆಕೆಯ ಮೂರು ದಿನದ ಹಸುಗೂಸು ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.
ಗುರುವಾರ ಈಕೆಗೆ ಹೆರಿಗೆಯಾಗಿತ್ತು. ಮಗುವಿನ ಹೊಕ್ಕಳ ಬಳ್ಳಿ ಕತ್ತರಿಸದ ಕಾರಣ ನಿರಂತರ ರಕ್ತಸ್ರಾವ ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬದವರು ಮುಂದಾದರು. ಆದರೆ, ಮೂಲಸೌಲಭ್ಯಗಳಿಂದ ವಂಚಿತವಾದ ಬರ್ದೌನಿ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇರಲಿಲ್ಲ. ಈ ಹಿನ್ನೆಲೆ ಮನೆಯವರು ಮಂಚದ(ಪಲ್ಲಂಗ) ಸಹಾಯದಿಂದ ತಾಯಿ,ಮಗುವನ್ನು 7 ಕಿ.ಮೀ ಹೊತ್ತು ಗುಹಾನ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ, ಈ ವೇಳೆ ವೈದ್ಯರಿಲ್ಲದ ಕಾರಣ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಕೊನೆಯುಸಿರೆಳೆದಿದ್ದಾರೆ.
ಇನ್ನು ಗುಹಾನ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳೆದ ವರ್ಷ 6 ವೈದ್ಯರನ್ನು ನೇಮಕ ಮಾಡಿತ್ತು. ಆದರೆ, ಅದರಲ್ಲಿ ನಾಲ್ಕು ಜನರು ಇದುವರೆಗು ಕರ್ತವ್ಯಕ್ಕೆ ಹಾಜರಾಗಿಲ್ಲ. ಇನ್ನುಳಿದ ಇಬ್ಬರ ಪೈಕಿ ಒಬ್ಬರು ರಜೆಯಲ್ಲಿದ್ದರು. ಬಾಣಂತಿ ಹಾಗೂ ಮಗು ಆಸ್ಪತ್ರೆಗೆ ಕರೆತಂದ ವೇಳೆ ಕೇವಲ ಒಬ್ಬರೇ ವೈದ್ಯರಿದ್ದು, ಅವರೂ ಕೂಡ ಊಟ ಮಾಡಲು ತೆರಳಿದ್ದರು ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.