ನಾಯಕಿ ನಟಿಯರು ಒಂದಷ್ಟು ವರ್ಷ ಹೀರೋಗಳ ಸಿನಿಮಾಗಳಲ್ಲಿ ನಟಿಸಿದ ನಂತರ ನಿಧಾನವಾಗಿ ನಾಯಕಿ ಪ್ರಧಾನ ಸಿನಿಮಾಗಳತ್ತ ಮುಖ ಮಾಡುತ್ತಾರೆ. ಈಗಾಗಲೇ ಬಾಲಿವುಡ್ ಸೇರಿದಂತೆ ಬೇರೆ ಬೇರೆ ಚಿತ್ರರಂಗದಲ್ಲಿ ಈ ತರಹದ ಬೆಳವಣಿಗೆಗಳು ನಡೆಯುತ್ತಿವೆ. ಇದರಿಂದ ಕನ್ನಡ ಚಿತ್ರ ಕೂಡಾ ಹೊರತಾಗಿಲ್ಲ. ಕನ್ನಡದ, ಕನ್ನಡ ಮೂಲದ ಅನೇಕ ನಟಿಯರು ಕೂಡಾ ಈ ತರಹದ ಒಂದು ಪ್ರಯತ್ನ ಮಾಡುತ್ತಿದ್ದಾರೆ. ಈಗ ಲಕ್ಷ್ಮೀ ರೈ ಕೂಡಾ ನಾಯಕಿ ಪ್ರಧಾನ ಚಿತ್ರದತ್ತ ಮುಖ ಮಾಡಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಬಿಝಿಯಾಗಿರುವ ಲಕ್ಷ್ಮೀ ರೈ ಇತ್ತೀಚಿನ ನಾಲ್ಕು ವರ್ಷಗಳಿಂದ ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿರಲಿಲ್ಲ. ಈಗ “ಝಾನ್ಸಿ’ ಮೂಲಕ ಕನ್ನಡಕ್ಕೆ ವಾಪಾಸ್ ಬಂದಿದ್ದಾರೆ. ಇದು ಲಕ್ಷ್ಮೀ ರೈ ನಟಿಸುತ್ತಿರುವ ನಾಯಕಿ ಪ್ರಧಾನ ಚಿತ್ರ. ಈ ಚಿತ್ರವನ್ನು ಪಿ.ವಿ.ಎಸ್.ಗುರುಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮುಹೂರ್ತ ಈ ತಿಂಗಳಲ್ಲೇ ನಡೆಯಲಿದೆ. ಚಿತ್ರದ ಅನೌನ್ಸ್‌ಮೆಂಟ್‌ಗಾಗಿ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು.
ಗುರುಪ್ರಸಾದ್ ಅವರು ಕಥೆ ಮಾಡಿಕೊಂಡು ಈ ಕಥೆಗೆ ಯಾರು ಸೂಕ್ತ ಎಂದು ಯೋಚಿಸುತ್ತಿದ್ದಾಗ ಲಕ್ಷ್ಮೀರೈಯವರ ಹೆಸರು ಬಂತಂತೆ. ಗೆಳೆಯರೊಬ್ಬರ ಮೂಲಕ ಲಕ್ಷ್ಮೀ ರೈಯವರನ್ನು ಸಂಪರ್ಕಿಸಿ, ಅವರಿಗೆ ಕಥೆ ಹೇಳಿದಾಗ ಖುಷಿಯಿಂದ ಒಪ್ಪಿಕೊಂಡರಂತೆ. “ಇದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ. ಈ ಪಾತ್ರಕ್ಕೆ ಲಕ್ಷ್ಮೀ ಅವರು ತುಂಬಾ ಚೆನ್ನಾಗಿ ಹೊಂದುತ್ತಾರೆ. ಕಥೆ ಕೇಳಿ ಖುಷಿಯಿಂದ ಒಪ್ಪಿಕೊಂಡು ಸಂಪೂರ್ಣ ಸಹಕರಿ ಸುತ್ತಿದ್ದಾರೆ. ನಮ್ಮ ನಿರ್ಮಾಪಕರು ಕೂಡಾ ಒಂದೇ ಹಂತದಲ್ಲಿ ಶೂಟಿಂಗ್ ಮಾಡುವ ಉತ್ಸಾಹದಲ್ಲಿದ್ದಾರೆ’ ಎಂದು ಸಿನಿಮಾ ಬಗ್ಗೆ ಹೇಳಿಕೊಂಡರು. ಇಲ್ಲಿ ಲಕ್ಷ್ಮೀ ರೈ ಅನ್ಯಾಯದ ವಿರುದ್ಧ ಹೋರಾಡುವ ಹೆಣ್ಣಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಬಗ್ಗೆ ಲಕ್ಷ್ಮೀ ರೈ ಕೂಡಾ ಖುಷಿಯಿಂದ ಮಾತನಾಡುತ್ತಾರೆ. “ಇದು ನನ್ನ ಮೊದಲ ಆ್ಯಕ್ಷನ್ ಚಿತ್ರ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಆ್ಯಕ್ಷನ್ ಮಾಡಿದ್ದೆ. ಆದರೆ, “ಝಾನ್ಸಿ’ ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ. ಈ ಹಿಂದೆಯೇ ನನಗೆ ಆ್ಯಕ್ಷನ್ ಸಿನಿಮಾಗಳ ಅವಕಾಶಗಳು ಬಂದಿದ್ದವು. ಆದರೆ, ಆಗ ನಾನು ರೆಡಿಯಾಗಿರಲಿಲ್ಲ. ಆ್ಯಕ್ಷನ್ ಸಿನಿಮಾದಲ್ಲಿ ನಟಿಸಬಹುದೆಂಬ ವಿಶ್ವಾಸ ಬಂದಿರಲಿಲ್ಲ. ವಿಶ್ವಾಸವಿಲ್ಲದೇ ಸುಮ್ಮನೆ ಒಪ್ಪಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಈಗ ರೆಡಿಯಾಗಿದ್ದೇನೆ. ಹಾಗಂತ ಒಂದಷ್ಟು ಪೂರ್ವತಯಾರಿಯ ಅಗತ್ಯವಿದೆ. ಅದೇ ಕಾರಣದಿಂದ ನಿರ್ದೇಶಕರಲ್ಲಿ ಸಮಯ ಕೇಳಿದ್ದೇನೆ. ಮಾರ್ಷಲ್ ಆರ್ಟ್ಸ್ನ ಬೇಸಿಕ್ ಅಂಶಗಳನ್ನು ಕಲಿಯಬೇಕೆಂದಿದ್ದೇನೆ. ಇಲ್ಲಿ ನನ್ನ ಪಾತ್ರ ಕೂಡಾ ನಾಲ್ಕು ಶೇಡ್‌ಗಳೊಂದಿಗೆ ಸಾಗುತ್ತದೆ. ಆ್ಯಕ್ಷನ್ ಕೂಡಾ ವಿಭಿನ್ನವಾಗಿದೆ’ ಎನ್ನುತ್ತಾರೆ ಲಕ್ಷ್ಮೀ ರೈ. ಈ ಚಿತ್ರವನ್ನು ಮುಂಬೈ ಮೂಲದ ರಾಜೇಶ್ ಕುಮಾರ್ ನಿರ್ಮಿಸುತ್ತಿದ್ದಾರೆ.
ಚಿತ್ರಕ್ಕೆ ಕೃಪಾಕರ್ ಸಂಗೀತ, ವೀರೇಶ್ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನವಿದೆ. ಪ್ರತಿಯೊಬ್ಬರು “ಝಾನ್ಸಿ’ಯ ಬಗ್ಗೆ ಖುಷಿಯಿಂದ ಮಾತನಾಡಿದರು. ಅಂದಹಾಗೆ, ಈ ತಿಂಗಳಾಂತ್ಯದಿಂದ ಚಿತ್ರೀಕರಣ ಆರಂಭವಾಗಲಿದೆ.
ರವಿಪ್ರಕಾಶ್ ರೈ