Advertisement
ಹೊರ ರಾಜ್ಯಗಳಿಂದ ತಂದಿರುವ ರೋಗಬಾಧಿತ ಜೇನು ಕುಟುಂಬಗಳಿಂದ ಈ ಭಾಗದಲ್ಲಿ ರೋಗ ಹರಡಿದೆ ಎನ್ನುವುದು ಕೃಷಿಕರ ಆರೋಪ.
1991ರಲ್ಲಿ ಜೇನು ಕುಟುಂಬಗಳಿಗೆ ಥಾಯಿಶ್ಯಾಕ್ ಬ್ರೂಡ್ ವೈರಸ್ ಕಾಯಿಲೆ ತಗುಲಿತ್ತು. ಕೊಡಗು, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಸಾವಿರಾರು ಜೇನು ಕುಟುಂಬಗಳು ಬಲಿಯಾಗಿದ್ದವು. ಈಗ ಮತ್ತೆ ರೋಗ ಭೀತಿ.
ಇದು ವೈರಲ್ ರೋಗ ಆಗಿದ್ದು, ರೋಗ ಬಾಧಿತ ಜೇನುನೊಣಗಳಿಂದ ಹರಡುತ್ತದೆ. ಜೇನುನೊಣ ತೀವ್ರವಾಗಿ ಸಿಟ್ಟಿಗೇಳುವುದು, ಒಂದೇ ಮರದ ಕೊಂಬೆಗಳಲ್ಲಿ ಅಲ್ಲಲ್ಲಿ ಹಿಂಡುಗಟ್ಟಿ ಕೂರುವುದು, ಚಟುವಟಿಕೆ ಕುಂಠಿತಗೊಳ್ಳುವುದು ವೈರಸ್ ತಗಲಿದ ಲಕ್ಷಣ. ಸುಳ್ಯ, ಪುತ್ತೂರು ತಾಲೂಕಿನ ಅಲ್ಲಲ್ಲಿ ಪತ್ತೆಯಾಗಿದೆ. ಸ್ಥಳಾಂತರ ಕಾರಣ!
ಎರಡು ವರ್ಷಗಳಿಂದ ಕೇರಳ, ತಮಿಳುನಾಡು ರೈತರು ಜೇನು ಕುಟುಂಬಗಳನ್ನು ಸುಳ್ಯ, ಪುತ್ತೂರು ಭಾಗಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಈ ವರ್ಷ 25ರಿಂದ 30 ಸಾವಿರ ಜೇನು ಕುಟುಂಬಗಳು ಹೀಗೆ ಬಂದಿವೆ. ಆ ರಾಜ್ಯಗಳಲ್ಲಿ ರೋಗ ಹೆಚ್ಚಾಗಿದ್ದು, ಇಲ್ಲಿಗೂ ಹಬ್ಬಿದೆ ಅನ್ನುತ್ತಾರೆ ದ.ಕ. ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರು.
Related Articles
Advertisement
ಸಕ್ಕರೆ ಪಾಕ ಬಳಕೆ?ಇಲ್ಲಿನ ಜೆೇನು ಕೃಷಿಕರು ಪ್ರಕೃತಿಸಹಜವಾಗಿ ಜೇನು ಉತ್ಪಾದಿಸುತ್ತಾರೆ. ಪೆಟ್ಟಿಗೆಯ ಎರಿಗಳಲ್ಲಿ ಜೇನುತುಪ್ಪ ಸೀಲ್ ಆದ ಮೇಲೆ ತೆಗೆಯುವುದು ಪದ್ಧತಿ. ಒಂದು ಪೆಟ್ಟಿಗೆಯಿಂದ 8ರಿಂದ 10 ಕಿಲೋ ಜೇನು ಸಿಗುತ್ತದೆ. ಆದರೆ ಕೇರಳ, ತಮಿಳುನಾಡಿನಿಂದ ಈ ಭಾಗಕ್ಕೆ ತಂದ ಜೇನು ಕುಟುಂಬಗಳಿಗೆ ಸಕ್ಕರೆ ಪಾಕ ಆಹಾರವಾಗಿ ನೀಡಿ 3-4 ದಿವಸಕ್ಕೊಮ್ಮೆ ಜೇನು ತೆಗೆಯುತ್ತಾರೆ. ಇದು ಸಕ್ಕರೆ ಪಾಕಕ್ಕೆ ಸಮ, ಔಷಧ ಗುಣ ಇರುವುದಿಲ್ಲ ಎನ್ನುತ್ತಾರೆ ಜೇನು ಕೃಷಿಕ ಶ್ಯಾಮ ಭಟ್. ಜೇನು ಇಳುವರಿ ಕುಸಿತ
ಈ ಬಾರಿ ವಾತಾವರಣವೂ ಜೇನು ಕೃಷಿಗೆ ಪೂರಕವಾಗಿಲ್ಲ. ಜೇನು ಸಂತತಿ ಕಡಿಮೆಯಾಗುತ್ತಿದೆ. ಆಹಾರದ ಕೊರತೆಯೂ ಇದೆ. ಈಗ ರೋಗಬಾಧೆ. ಪರಾಗಸ್ಪರ್ಶಕ್ಕೆ ಜೇನು ನೊಣಗಳ ಕೊಡುಗೆ ಅಪಾರ ವಾಗಿದ್ದು, ಅವು ನಾಶವಾದರೆ ವಿವಿಧ ಬೆಳೆ, ಮೇವು ಉತ್ಪಾದನೆಯ ಮೇಲೂ ಪರಿಣಾಮವಾಗುತ್ತದೆ. ಸಂಸ್ಕೃರಿಸಿದ ಜೇನು ಶುದ್ಧ
ಪೆಟ್ಟಿಗೆಯಿಂದ ತೆಗೆದ ಜೇನು ಪರಿಶುದ್ಧ ಎನ್ನಲು ಸಾಧ್ಯವಿಲ್ಲ. ರೈತರಿಂದ ಜೇನು ಖರೀದಿಸಿ, ಸಂಸ್ಕರಿಸಿ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ಸಂಘದ ವ್ಯವಸ್ಥಾಪಕ ನಿರ್ದೇಶಕ ತಿಮ್ಮಯ್ಯ ಪಿ. ಗುಣಮಟ್ಟದ ಕೊರತೆ
ಹೊರ ರಾಜ್ಯಗಳಿಂದ ಜೇನು ಕುಟುಂಬ ಸ್ಥಳಾಂತರಿಸಿ, ಇಳುವರಿ ಪಡೆದ ಮೇಲೆ ರೋಗ ಬಂದ ಪೆಟ್ಟಿಗೆಗಳನ್ನು ಇಲ್ಲೇ ಬಿಡಲಾಗುತ್ತದೆ. ಅಧಿಕ ಜೇನು ಉತ್ಪಾದಿಸುವುದನ್ನು ಕಂಡರೆ ಸಕ್ಕರೆ ಪಾಕ ಬಳಕೆ ಖಚಿತ. ರೋಗ ಹಬ್ಬಿದೆ. ಕೃಷಿಕರು ತಮ್ಮ ಜಮೀನಿನಲ್ಲಿ ಹೊರ ರಾಜ್ಯಗಳಿಂದ ತರುವ ಜೇನುಪೆಟ್ಟಿಗೆ ಇರಿಸಲು ಅವಕಾಶ ಕೊಡಬಾರದು. ಐಎಸ್‌ಐ ಮಾರ್ಕ್ ಇರುವ ಜೇನು ಪೆಟ್ಟಿಗೆಗಳನ್ನು ಸಂಘದ ಮೂಲಕ ವಿತರಿಸಲಾಗುವುದು.
– ಚಂದ್ರಾ ಕೋಲ್ಚಾರು ಅಧ್ಯಕ್ಷರು, ದ.ಕ. ಜೇನು ವ್ಯ. ಸ. ಸಂಘ – ಕಿರಣ್ ಪ್ರಸಾದ್ ಕುಂಡಡ್ಕ