ಬೆಂಗಳೂರು: ಪಾನಿಪೂರಿ ವ್ಯಾಪಾರಿಯೊಬ್ಬರ ಮನೆಯ ಬಾಗಿಲ ಮೇಲಿದ್ದ ಕೀ ತೆಗೆದುಕೊಂಡು ನಗದು, ಚಿನ್ನಾಭರಣ ದೋಚಿದ್ದ “ಪಾನಿಪೂರಿ ವ್ಯಾಪಾರಿ’ಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೀಲಸಂದ್ರದ ರಾಜೀವ್ ಕುಮಾರ್ ಗುಪ್ತಾ(26) ಬಂಧಿತ. ಆರೋಪಿಯಿಂದ 39 ಸಾವಿರ ರೂ. ನಗದು, 46 ಗ್ರಾಂ ತೂಕದ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ.
ಜೋಗುಪಾಳ್ಯದ ಸರಸ್ವತಿಪುರಂ ನಿವಾಸಿ ಪುಷ್ಪೇಂದ್ರ ಗುಪ್ತಾ ಎಂಬವರ ಮನೆಗೆ ನುಗ್ಗಿದ್ದ ಆರೋಪಿ ಬೀರುವಿನಲ್ಲಿದ್ದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡು ಸಬ್‌ಇನ್ಸ್‌ಪೆಕ್ಟರ್ ನಾಗರತ್ನ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಮಧ್ಯಪ್ರದೇಶ ಮೂಲದ ಪುಷ್ಪೇಂದ್ರ ಕಳೆದ 8 ವರ್ಷಗಳಿಂದ ನಗರದ ಸರಸ್ವತಿಪುರಂನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಪಾನಿಪೂರಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಹಬ್ಬದ ಪ್ರಯುಕ್ತ ಆ.27ರಂದು ಪುಷ್ಪೇಂದ್ರ ಅವರ ಪತ್ನಿ ಹಾಗೂ ಮಕ್ಕಳು ತವರು ರಾಜ್ಯ ಮಧ್ಯಪ್ರದೇಶಕ್ಕೆ ತೆರಳಿದ್ದರು. ಆ.30ರಂದು ಎಂದಿನಂತೆ ಪುಷ್ಪೇಂದ್ರ ಮನೆಗೆ ಬೀಗ ಹಾಕಿಕೊಂಡು ಬೀಗ ಕೀ ಅನ್ನು ಬಾಗಿಲ ಮೇಲೆ ಇರಿಸಿ ಪಾನಿಪೂರಿ ವ್ಯಾಪಾರಕ್ಕೆ ತೆರಳಿದ್ದರು. ಆ.31ರಂದು ಮಧ್ಯಾಹ್ನ ಮನೆಯ ಬೀರು ನೋಡಿದಾಗ ನಗದು ಹಾಗೂ ಚಿನ್ನ, ಬೆಳ್ಳಿ ಆಭರಣಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ಹಾಗೂ ಸ್ಥಳೀಯರು ನೀಡಿದ ಮಾಹಿತಿಯ ಸುಳಿವಿನ ಮೇರೆಗೆ ಆರೋಪಿ ರಾಜೀವ್ ಕುಮಾರ್ ಗುಪ್ತಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸಂಬಂಧಿಯಿಂದಲೇ ಕೃತ್ಯ: ಬಂಧಿತ ಆರೋಪಿ ರಾಜೀವ್ ಕುಮಾರ್ ಗುಪ್ತಾ ಮಧ್ಯಪ್ರದೇಶ ಮೂಲದವನಾಗಿದ್ದು, ದೂರುದಾರ ಪುಪ್ಪೇಂದ್ರ ಗುಪ್ತಾನ ಸಂಬಂಧಿಕನಾಗಿದ್ದಾನೆ. ಈತ ಕೂಡ ಕೋರಮಂಗಲದಲ್ಲಿ ಪಾನಿಪೂರಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದ. ಆಗಾಗ ಪುಪ್ಪೇಂದ್ರ ಮನೆಗೆ ಬಂದು ಹೋಗುತ್ತಿದ್ದ. ಆಗ ಪುಪ್ಪೇಂದ್ರ ಮನೆಯ ಬೀಗ ಕೀ ಬಾಗಿಲ ಮೇಲೆ ಇರಿಸುವ ವಿಚಾರ ತಿಳಿದುಗೊಂಡಿದ್ದ. ಮತ್ತೂಂದೆಡೆ ಪುಷ್ಪೇಂದ್ರ ಪತ್ನಿ ಮಧ್ಯಪ್ರದೇಶಕ್ಕೆ ಹೋಗಿದ್ದಾರೆ ಎಂದು ತಿಳಿದು, ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.