ಬೆಂಗಳೂರು: ಚುನಾವಣೆಯ ಎಂದರೇ ಹಣದ ಮೇಲಾಟ, ಬಾಯಿ ಮಾತಿನ ಆಶ್ವಾಸನೆ ಹಾಗೂ ಆಮೀಷಗಳ ಅಬ್ಬರ ಸಾಮಾನ್ಯ. ಇವುಗಳ ಮಧ್ಯೆ 13 ವರ್ಷಗಳಿಂದ ಮಾತು ಬಿಟ್ಟಿರುವ ಸಾಮಾನ್ಯ ಹೋರಾಟಗಾರನೊಬ್ಬರು ಕಣಕ್ಕಿಳಿದಿದ್ದಾರೆ.
ಇವರ ಚುನಾವಣಾ ಚಿಹ್ನೆ ಚಪ್ಪಲಿ, ಮಾಡುವುದು ಬರಿ ಕಾಲ್ನಡಿಗೆಯ ಮೌನ ಪ್ರಚಾರ. ಇನ್ನು ಇವರ ಒಟ್ಟಾರೆ ಚುನಾವಣಾ ವೆಚ್ಚ ಕೇವಲ 80ರೂ, ಅಷ್ಟೇ. ಹೌದು, ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅಂಬ್ರೋಸ್ ಡಿಮೆಲ್ಲೋ(ಅಮೃತ್) ಎಂಬ ಮೌನ ಹೋರಾಟಗಾರನ ಕಥೆ ಇದು.
ಕಳೆದ 16 ವರ್ಷಗಳಿಂದ ಅನೇಕ ಸಾಮಾಜಿಕ, ರಾಜಕೀಯ ಹಾಗೂ ಸರ್ಕಾರದ ವಿವಿಧ ನಿಯಮಗಳ ವಿರುದ್ದ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳೇ ನನ್ನ ಹೋರಾಟದ ಭಾಗವಾಗಿದ್ದು ನನ್ನ ಸ್ಪರ್ಧೆಯ ಮೂಲಕವಾದರೂ ವಿಧಾನ ಸಭೆ ಅಥವಾ ಸಂಸತ್ತಿಗೆ ಸಾಮಾನ್ಯ ಜನರ ಸಮಸ್ಯೆಗಳು ತಿಳಿಯಲಿ ಎಂಬ ಉದ್ದೇಶದಿಂದ ಚುನಾವಣೆಗೆ ಸ್ವರ್ಧಿಸುತ್ತಿದ್ದೇನೆ ಎಂದು ತಮ್ಮ ಚುನಾವಣಾ ಕರಪತ್ರದಲ್ಲಿ ತಿಳಿಸಿದ್ದಾರೆ.
ಮೋದಿ ಜತೆ ಸ್ಪರ್ಧೆ: ಚುನಾವಣೆಯಲ್ಲಿ ನಾನು ಯಾರ ವಿರುದ್ದವೂ ಸ್ಪರ್ಧಿಸುವುದಿಲ್ಲ ಎನ್ನುವ ಇವರು, 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರವಾದ ವಾರಣಾಸಿಯ ಲ್ಲಿಯೂ ಸ್ಪರ್ಧಿಸಿದ್ದಾರೆ. ಅಲ್ಲದೇ 2013 ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪೇಟೆ, 2015ರಲ್ಲಿ ಶಿಕಾರಿಪುರ, 2017 ಹೆಬ್ಟಾಳದಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ವರ್ಧಿಸಿದ್ದಾರೆ.
ಪುಸ್ತಕ ಮಾರಿ ಗಳಿಸಿದ್ದೇ ಠೇವಣಿ: ಪ್ರಗತಿ ಪರ ಪುಸ್ತಕಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಅಂಬ್ರೋಸ್, ಕಳೆದ 4 ತಿಂಗಳ ಹಿಂದೆ ಸಾಹಿತಿಗಳೊಬ್ಬರ ಬಳಿ 200 ಪುಸ್ತಕಗಳನ್ನು ಪಡೆದು ಅವುಗಳನ್ನು ಮಾರಿ ಸಂಗ್ರಹವಾದ 40000ರೂ ಹಣದಲ್ಲಿ 30000 ಹಣವನ್ನು ಸಾಹಿತಿಗಳಿಗೆ ಹಿಂದಿರುಗಿಸಿ ಉಳಿದ 10000ರೂ ಠೇವಣಿ ಇಟ್ಟಿದ್ದಾರೆ. ಠೇವಣಿ ಹೋದರೂ ಪರವಾಗಿಲ್ಲ ಜನರಿಗೆ ನನ್ನ ಹೋರಾಟ ತಿಳಿಯಬೇಕು ಎಂಬುದು ಇವರ ನಿಲುವು.ಈವರೆಗೂ ಚುನಾವಣೆ ವೆಚ್ಚವಾಗಿ ಕೇವಲ 80 ರೂ. ಖರ್ಚು ಮಾಡಿದ್ದಾರೆ.
ಚುನಾವಣೆಗಳಲ್ಲಿ ಕೇವಲ ಶ್ರೀಮಂತ ಹಾಗೂ ಪ್ರಬಲ ರಾಜಕಾರಣಿಗಳು ಮಾತ್ರವೇ ಆಯ್ಕೆಯಾಗುತ್ತಿದ್ದು, ಅವರಿಗೆ ಜನ ಸಾಮಾನ್ಯರ ಕಷ್ಟದ ಅನುಭವ ಇರುವುದೂ ಇಲ್ಲ ಅರ್ಥವಾಗುವುದೂ ಇಲ್ಲ. ಹಾಗಾಗಿಯೇ ಪ್ರಸ್ತುತ ಜನರ ಸಮಸ್ಯೆಗಳು ತಿಳಿದಿರುವ ನಾವು (ಹೋರಾಟ ಗಾರರು) ಚುನಾವಣೆ ಸ್ಪರ್ಧಿಸಬೇಕು.
-ಅಂಬ್ರೋಸ್ ಡಿ.ಮೆಲ್ಲೋ, ಶಿವಾಜಿ ನಗರ ಅಭ್ಯರ್ಥಿ
* ಜಯಪ್ರಕಾಶ್ ಬಿರಾದಾರ್