Advertisement
ದೂರದ ಯೂರೋಪ್ ಖಂಡದ ಜರ್ಮನಿಯಲ್ಲಿ ನಡೆದ ಯಹೂದಿಯರ ನೋವು, ಕಣ್ಣೀರಿನ ಕಥೆ , ಅದಕ್ಕೆ ಕಾರಣನಾದ ಹಿಟ್ಲರ್ ಎಂಬ ನರರೂಪಿ ರಾಕ್ಷಸನ ಬಗ್ಗೆ ನಮಗೆಲ್ಲಾ ತಿಳಿದಿದೆ. ಯಹೂದಿಯರ ನರಮೇಧದ ಬಗ್ಗೆ ನಾವು ಮಾತನಾಡುತ್ತೇವೆ, ಅದರ ಇತಿಹಾಸವನ್ನು ಓದುತ್ತೇವೆ.ಆದರೆ ನಮ್ಮದೇ ದೇಶದಲ್ಲಿ ನಮ್ಮದೇ ಜನಗಳ ಮೇಲೆ ನಡೆದ ಮಾರಣಹೋಮ, ಅತ್ಯಾಚಾರದ ಬಗ್ಗೆ ನಮಗೆಷ್ಟು ಗೊತ್ತು?
Related Articles
Advertisement
ಇದನ್ನು ಚಿತ್ರ ಎಂದು ಹೇಳುವುದಕ್ಕಿಂತ ಒಂದು ಡಾಕ್ಯುಮೆಂಟರಿ ಎನ್ನಬಹುದು. ಸಿನಿಮಾ ಎಂದರೆ ಪ್ರೇಮಕಥೆ, 4 ಹಾಡು, ಒಂದಷ್ಟು ಹೊಡೆದಾಟ ಬಡಿದಾಟ , ಮತ್ತೊಂದಷ್ಟು ನಾಟಕೀಯತೆ ಅತಿರಂಜಿತ ದೃಶ್ಯಗಳಿರುವ ಎರಡೂವರೆ ತಾಸಿನ ಮನರಂಜನೆ ಎಂದೆಲ್ಲಾ ನಿರೀಕ್ಷೆಗಳಿದ್ದರೆ ಈ ಚಿತ್ರದಲ್ಲಿ ನಿರಾಸೆಯೇ ಸಿಗಬಹುದು. ಬೋರ್ ಅನ್ನಿಸಬಹುದು. ಯಾಕೆಂದರೆ ಇದು ಗೋಳಿನ ಕಥೆ , ನೋವು ಕಣ್ಣಿರು ರಕ್ತಪಾತಗಳೇ ತುಂಬಿರುವ ಸತ್ಯಕಥೆ.
1989-90ರದಶಕದಲ್ಲಿ ನಡೆದ ಸಾಲು ಸಾಲು ಕೊಲೆಗಳು, ಹೆಣ್ಣು ಮಕ್ಕಳ ಅತ್ಯಾಚಾರಗಳು, ಮಾರಣಹೋಮ, ಗಲಭೆಗಳು, ಹೊತ್ತಿ ಉರಿದ ಕಾಶ್ಮೀರ , ಪಾಕಿಸ್ತಾನ ಬೆಂಬಲಿತ ಪ್ರತ್ಯೇಕತಾವಾದಿಗಳು ,ಉಗ್ರಗಾಮಿಗಳ ಅಟ್ಟಹಾಸ, ಪ್ರತಿ ನಿಮಿಷವೂ ಜೀವ ಕೈಯಲ್ಲಿ ಹಿಡಿದು ಜೋರಾಗಿ ಉಸಿರೆಳೆದುಕೊಳ್ಳಲೂ ಸಹ ಹೆದರಿ ಕುಳಿತ ಅಸಾಹಯಕ ಪಂಡಿತರು. ಕೈಲಾಗದ ಹೇಡಿ ಕಾಶ್ಮಿರದ ಸರ್ಕಾರ, ಕೈಚೆಲ್ಲಿ ಕುಳಿತ ಕೇಂದ್ರ ಸರ್ಕಾರ. ಪಕ್ಷಪಾತಿ ಸುದ್ದಿಮಾಧ್ಯಮಗಳು… ಹೀಗೆ ಆ ಘಟನೆಗಳಿಗೆಲ್ಲಾ ಸಾಧ್ಯವಾದಷ್ಟು ಜೀವ ತುಂಬುವ ನ್ಯಾಯಕೊಡುವ ಕೆಲಸವನ್ನು ತಮಗಿರುವ ಚೌಕಟ್ಟಿನಲ್ಲಿ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಸಮರ್ಪಕವಾಗಿಯೇ ನಿರ್ವಹಿಸಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಸ್ವತಃ ಒಬ್ಬ ಕಾಶ್ಮೀರಿ ಪಂಡಿತ ಜನಾಂಗದ ವ್ಯಕ್ತಿಯಾಗಿರುವ ಅನುಪಂ ಖೇರ್ ಪಾತ್ರವನ್ನು ಅಭಿನಯಿಸಿಲ್ಲ. ಬದಲಾಗಿ ಜೀವಿಸಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಚಿತ್ರದಲ್ಲಿ ತೋರಿಸಿದ ಹಿಂಸಾಚಾರ , ಮಹಿಳೆಯೊಬ್ಬಳನ್ನು ಜೀವಂತವಾಗಿ ಕತ್ತರಿಸುವ ದೃಶ್ಯ , 24ಜನರನ್ನು ಸಾಲಾಗಿ ನಿಲ್ಲಿಸಿ ಕಿಂಚಿತ್ ಕರುಣೆ ಇಲ್ಲದೆ ಗುಂಡು ಹಾರಿಸುವ ದೃಶ್ಯ , ಮಹಿಳೆಯರ ಸಾಮೂಹಿಕ ಅತ್ಯಾಚಾರ, ಬೆತ್ತಲುಗೊಳಿಸುವ ನಿರ್ದಯತೆಯ ಪರಮಾವಧಿ ಎಲ್ಲವೂ ಎಲ್ಲವೂ ಸತ್ಯವೆಂಬುದಕ್ಕೆ ಇಂದಿಗೂ ಅದನ್ನೆಲ್ಲಾ ಕಣ್ಣಾರೆ ಕಂಡು ಜೀವಉಳಿಸಿಕೊಂಡು ಓಡಿಬಂದ ನೂರಾರು ಜೀವಗಳ ಕಣ್ಣೀರೇ ಸಾಕ್ಷಿ.
ಪಂಡಿತರ ಅನ್ಯಾಯದ ಕಥೆ ಅಷ್ಟಕ್ಕೆ ಮುಗಿಯುವುದಿಲ್ಲ. ಆ ನರಮೇಧದಲ್ಲಿ ಸಾವನ್ನಪ್ಪಿರುವವರು 400ರಿಂದ 500 ಮಂದಿ ಎಂಬುದು ಆಗಿನ ಸರ್ಕಾರ ಕೊಟ್ಟ ಅಥವಾ ಜನತೆಯ ಮುಂದಿಟ್ಟ ಅರ್ಧ ಸತ್ಯ . ಬ್ರಿಟಿಷರ ಕಾಲದಲ್ಲಿ ಅಂದರೆ 194`ರಲ್ಲಿ ನಡೆದ ಜನಗಣತಿಯಲ್ಲಿ 80ಸಾವಿರದಷ್ಟಿದ್ದ ಕಾಶ್ಮೀರಿ ಪಂಡಿತರು 2011 ರ ಜನಗಣತಿಯ ವೇಳೆ 2ರಿಂದ 3 ಸಾವಿರಕ್ಕೆ ಬಂದು ತಲುಪಿದ್ದಾರೆಂಬುದಕ್ಕಿಂತ ಬೇರೆ ಯಾವ ಉದಾಹರಣೆ ಬೇಕು.
ಆ ನೆಲ ಅವರದ್ದು, ಅಲ್ಲಿನ ಸಂಸ್ಕೃತಿ , ಭಾಷೆ ಅದೆಲ್ಲಾ ಅವರದ್ದೂ ಸಹ. ಪೀಳಿಗೆಗಳು ತಲೆಮಾರುಗಳು ಬೇರೂರಿ ತಮ್ಮತನವನ್ನು ಧಾರೆ ಎರೆದ ನೆಲ ಅದು ಅವರ ಪರಿಚಯ. ಅವರ ಗುರುತು, ಅವರ ಹೆಮ್ಮೆ. ಇಂದಿಗೂ ಅವರನ್ನು ಗುರುತಿಸುವುದು ಕಾಶ್ಮೀರಿ ಪಂಡಿತ್ ಎಂದೇ ತಾನೆ. ಹಾಗೆ ಆ ನೆಲದೊಂದಿಗೆ ಹಾಸುಹೊಕ್ಕಾಗಿ ಬೆರೆತು ಬೇರೂರಿದವರನ್ನು ಇದ್ದಕ್ಕಿದ್ದಂತೆ ಮತಾಂತರ ಗೊಳ್ಳಿ, ಓಡಿಹೋಗಿ ಇಲ್ಲವೆ ಸಾಯಿರಿ ಎಂಬ ಆಯ್ದುಕೊಳ್ಳಲಾಗದ ಆಯ್ಕೆಗಳನ್ನು ಕೊಟ್ಟಾಗ ಆ ಜನ ಯಾವುದನ್ನೂ ಆಯ್ಕೆಮಾಡಿದರೂ ಸಹ ಸತ್ತಂತೆಯೇ ಎಂಬುದು ಕಟುಸತ್ಯ.
ಇದು ಮುಚ್ಚಿಟ್ಟ ಬಚ್ಚಿಟ್ಟ ಇತಿಹಾಸವಾದರೆ ಮತ್ತೊಂದೆಡೆ ದೇಶದ ದೊಡ್ಡ ದೊಡ್ಧ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಕಂಡುಬರುವ ರಾಜಕೀಯ ಅಲ್ಲಿನ ವಿದ್ಯಾರ್ಥಿಗಳು ಚುನಾವಣೆಗಳ ಮೇಲೆ ರಾಜಕೀಯ ಪಕ್ಷಗಳು ಬೀರುವ ಪ್ರಭಾವ . ಪ್ರೊಪೆಸರ್ ಎನ್ನಿಸಿಕೊಂಡವರೇ ವ್ಯವಸ್ಥಿತವಾಗಿ ವಿದ್ಯಾರ್ಥಿಗಳ ಬ್ರೇನ್ ವಾಷ್ ಮಾಡುವ ರೀತಿ. ನಮ್ಮದೇ ದೇಶ ನಮ್ಮದೇ ಸರ್ಕಾರದ ವಿರುದ್ದ ನಮ್ಮ ವಿದ್ಯಾರ್ಥಿಗಳನ್ನೇ ಎತ್ತಿಕಟ್ಟಿ ರಾಜಾರೋಷವಾಗಿ ಮಾಡುವ ದೇಶದ್ರೋಹ . ಮತ್ತೆ ಹಾಗೆ ಒಂದು ದೇಶದ್ರೋಹದ ಆರೋಪದ ಕೇಸ್ ಧಾಖಲಾದರೆ ಸಾಕು ಒಂದು ನೊಬೆಲ್ ಪಾರಿತೋಷಕ ಪಡೆದಂತೆ ಹೆಮ್ಮೆಯಿಂದ ಓಡಾಡುವ ವಿದ್ಯಾರ್ಥಿಗಳು ಎಲ್ಲವೂ ಈಗ ನಡೆಯುತ್ತಿರುವ ವರ್ತಮಾನವಷ್ಟೆ.
ನಮ್ಮ ಜಾತ್ಯಾತೀತ, ಉದಾರವಾದಿ ಮಹಾನ್ ನಾಯಕರು ನಟ ನಟಿಯರು , ಸಾಹಿತಿಗಳು ಚಿಂತಕರು ಬುದ್ದಿಜೀವಿಗಳು ತಮ್ಮ ತಾರತಮ್ಯತೊರೆದು ವೋಟ್ ಬ್ಯಾಂಕ್ ರಾಜಕಾರದಿಂದ ಕೆಲ ಸಮಯವಾದರೂ ಹೊರಬಂದು ಒಂದೇ ಒಂದು ಸಲವಾದರು ಕಾಶ್ಮೀರಿ ಪಂಡಿತರ ಪರವಾಗಿ ಧ್ವನಿ ಎತ್ತುವ ಧೈರ್ಯ ಸಾಹಸ ತೋರುವರೆ???
ಎಷ್ಟೋ ವರ್ಷಗಳ ನಂತರವಾದರೂ ಸತ್ಯವನ್ನು ಹೇಳಲು ಹೊರಟ ಈ ಚಿತ್ರವನ್ನು ಅವರೆಲ್ಲಾ ಈಗಾಗಲೇ ವಿರೋಧಿಸಿದ್ದಾರೆ. ಆದರೆ ಸತ್ಯವೆಂಬುದು ನಿಧಾನವಾಗಿಯಾದರೂ ಸರಿ ಹೊರಬರಲೇಬೇಕಲ್ಲ. ಪ್ರತಿಬಾರಿಯೂ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ಪರವಹಿಸುವ ದೊಡ್ಡಣ್ಣನಂತಹ ದೇಶಗಳಿಗೂ ಕಾಶ್ಮೀರ ಭಾರತದ ಭಾಗವೇ ಅಲ್ಲವೆಂದು ನಕ್ಷೆಯನ್ನು ಬಿಂಬಿಸುವ ಪರದೇಶಿ ಸರ್ಕಾರಗಳಿಗೂ , ಕಾಶ್ಮೀರದ ಆರ್ಟಿಕಲ್ 370ಯನ್ನು ತೆಗೆದುಹಾಕಿದಾಗ ಪಾಕಿಸ್ತಾನಕ್ಕಾದ ಮಹಾಮೋಸವೆಂಬಂತೆ ಬೊಬ್ಬೆಹೊಡೆದ ಮಹಾನ್ ಸ್ಟೇಟ್ಸ್ ಮೆನ್ ಗಳಿಗೂ ಕಾಶ್ಮಿರದ ನಿಜವಾದ ಹಕಿಕತ್ತು, ಕಾಶ್ಮಿರದ ನಿಜವಾದ ನೋವಿನ ಪುಟಗಳು ಕಾಣಲೇಬೇಕಿದೆ.
ಕಾಶ್ಮೀರಿಪಂಡಿತರೆಡೆಗೆ ಒಂದು ಸಣ್ಣ ಸಂತಾಪ ಹಾಗೂ ಮತ್ತೊಂದು ಭರವಸೆಯ ಬೆಂಬಲ ನಿಮಗಿದ್ದರೆ ತಪ್ಪದೇ ಚಿತ್ರ ನೋಡಿ ಕಾಶ್ಮೀರ್ ಫೈಲ್ಸ್. ಯಾರನ್ನು ಬೆಂಬಲಿಸಲು ಮತ್ಯಾರನ್ನೋ ದ್ವೇಷಿಸಲು ಖಂಡಿತವಾಗಿ ಅಲ್ಲ. ಕೇವಲ ಮಾನವೀಯತೆಯಿಂದ ಮಾನವೀಯತೆಗಾಗಿ.
*ಅಶ್ವಿನಿ ಕುಲಕರ್ಣಿ, ಹುಬ್ಬಳ್ಳಿ