ಜೇವರ್ಗಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಏರುತ್ತಿದ್ದು, ತಾಪಮಾನ ಜನತೆಯನ್ನು ಹೈರಾಣಾಗಿಸಿದೆ. ಇದರಿಂದ ತಂಪು ಪಾನೀಯ ಎಷ್ಟು ಕುಡಿದರೂ ಸಮಾಧಾನವಾಗುತ್ತಿಲ್ಲ, ಅದಕ್ಕಾಗಿ ಜನರು ದಾಹ ತೀರಿಸಿಕೊಳ್ಳಲು ಬಡವರ ಫ್ರಿಜ್ ಎನಿಸಿರುವ ಮಣ್ಣಿನ ಮಡಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ.
ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ತಾಪಮಾನದಲ್ಲಿ ಮತ್ತಷ್ಟು ಏರಿಕೆ ಕಂಡಿದ್ದು, ಪ್ರತಿದಿನ 42ರಿಂದ 43 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ಬೆಳಗ್ಗೆ 8 ಗಂಟೆಯಿಂದಲೇ ಬಿಸಿಲಿನ ಝಳ ಆರಂಭಗೊಳ್ಳುತ್ತಿದ್ದು, ಮದ್ಯಾಹ್ನ 12ಗಂಟೆ ವೇಳೆಗೆ ನೆತ್ತಿ ಸುಡುವಷ್ಟು ಬಿಸಿಲಿನ ಪ್ರಮಾಣ ಹೆಚ್ಚುತ್ತಿದೆ. ಸಂಜೆ 5ಗಂಟೆ ವರೆಗೂ ಉರಿಯುವ ಬಿಸಿಲು ಹಾಗೂ ಝಳ ಜನರನ್ನು ಹೈರಾಣಾಗಿಸುತ್ತಿದೆ.
ಗ್ರಾಮೀಣ ಭಾಗಕ್ಕೆ ಸೀಮಿತವಾಗಿ ಕಣ್ಮರೆಯಾಗುವ ಹಂತ ತಲುಪಿದ್ದ ಮಣ್ಣಿನ ಮಡಿಕೆಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಬಿಸಿಲಿನ ಝಳದಿಂದ ಹೈರಾಣಾದ ಸಂದರ್ಭದಲ್ಲಿ ದಾಹ ತೀರಿಸಿಕೊಳ್ಳಲು ಮಣ್ಣಿನ ಮಡಿಕೆಗಳಿಗೆ ಜನರು ಮೊರೆ ಹೋಗುತ್ತಿದ್ದಾರೆ. ಮನೆಗಳಲ್ಲಿ ಸ್ಟೀಲ್, ಪ್ಲಾಸ್ಟಿಕ್, ತಾಮ್ರದ ಪಾತ್ರೆಗಳಲ್ಲಿ ಶೇಖರಿಸುವ ನೀರು ಬಿಸಿ ಆಗುತ್ತಿರುವುದರಿಂದ ಎಷ್ಟು ನೀರು ಸೇವಿಸಿದರೂ ದಾಹ ತೀರದ ಅನುಭವ ಆಗುತ್ತಿದೆ. ಆದ್ದರಿಂದ ಜನರು ಮಣ್ಣಿನ ಮಡಿಕೆಗಳತ್ತ ಮುಖ ಮಾಡುತ್ತಿದ್ದು, ಪಟ್ಟಣದಲ್ಲಿ ಮಣ್ಣಿನ ಮಡಿಕೆಗಳ ಮಾರಾಟವು ಹೆಚ್ಚಾಗಿದೆ. ಬಡವರಷ್ಟೇ ಅಲ್ಲದೇ ಮನೆಯಲ್ಲಿ ರೆಫ್ರಿಜಿರೇಟರ್ ಇರುವ ಶ್ರೀಮಂತರೂ ಮಡಿಕೆ ನೀರಿಗೆ ಮನಸ್ಸು ಮಾಡುತ್ತಿದ್ದಾರೆ. ಬಹುತೇಕರು ಆರೋಗ್ಯಕ್ಕೆ ಒತ್ತು ನೀಡುತ್ತಿದ್ದು, ಮಡಿಕೆಯಲ್ಲಿನ ತಂಪು ನೀರಿಗೆ ಮೊರೆ ಹೋಗುತ್ತಿದ್ದಾರೆ.
ಆರೋಗ್ಯದ ದೃಷ್ಟಿಯಿಂದ ಫ್ರಿಡ್ಜ್ನಲ್ಲಿ ಇಟ್ಟಿರುವ ತಂಪಾದ ನೀರಿಗಿಂತ ಮಣ್ಣಿನ ಮಡಿಕೆಯಲ್ಲಿನ ನೀರೇ ದೇಹಕ್ಕೆ ಉತ್ತಮವಾಗಿದೆ. ಹೀಗಾಗಿ ಮನೆಗಳಲ್ಲಿ ಫ್ರಿಡ್ಜ್ ಇದ್ದರೂ ಮಡಿಕೆ ನೀರಿಗೆ ಜನತೆ ಮನಸ್ಸು ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಮಂಗಳವಾರ ನಡೆಯುವ ಸಂತೆ ಹಾಗೂ ಕುಂಬಾರರ ಮನೆಗಳ ಹತ್ತಿರ ಮಡಿಕೆಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಬೇಸಿಗೆ ದಿನವಾಗಿದ್ದರಿಂದ ಮಡಿಕೆಗಳ ಖರೀದಿಗೆ ಜನತೆ ಉತ್ಸಾಹ ತೋರುತ್ತಿರುವುದರಿಂದ ವ್ಯಾಪಾರವು ಚುರುಕು ಪಡೆದಿದ್ದು, 80 ರೂ.ದಿಂದ 250ರೂ. ಗಳವರೆಗೆ ವಿವಿಧ ಗಾತ್ರದ ಮಣ್ಣಿನ ಮಡಿಕೆಗಳು ಮಾರಾಟವಾಗುತ್ತಿವೆ.
ಅನಾದಿ ಕಾಲದಿಂದ ಮಡಿಕೆ ತಯಾರಿಕೆ ವೃತ್ತಿಯಲ್ಲಿ ತೊಡಗಿರುವ ಅನೇಕ ಕುಂಬಾರ ಕುಟುಂಬಗಳ ಬದುಕು ಬೀದಿಗೆ ಬರುತ್ತಿದ್ದು, ಬೇಸಿಗೆ ದಿನಗಳಲ್ಲಿ ಮಾತ್ರ ಮಡಿಕೆ ವ್ಯಾಪಾರ ಚೆನ್ನಾಗಿರುತ್ತದೆ. ಉಳಿದ ದಿನಗಳಲ್ಲಿ ನಮ್ಮತ್ತ ತಿರುಗಿ ನೋಡುವವರು ಇರುವುದಿಲ್ಲ. ಆದ್ದರಿಂದ ಸರ್ಕಾರ ಕುಂಬಾರ ಬದುಕು ಕಟ್ಟಿಕೊಳ್ಳಲು ಯೋಜನೆಗಳನ್ನು ರೂಪಿಸಬೇಕು ಎಂದು ಕುಂಬಾರರು ಆಗ್ರಹಿಸಿದ್ದಾರೆ.
ಎಲ್ಲ ಮನೆಗಳಲ್ಲಿಯೂ ಪ್ಲಾಸ್ಟಿಕ್ ಆವರಿಸಿಕೊಂಡಿದ್ದು, ಮಡಿಕೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಆದರೂ ನಾವು ಕಲಿತ ವಿದ್ಯೆಯನ್ನು ಜೀವನೋಪಯಕ್ಕಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಬೇಸಿಗೆ ದಿನಗಳಲ್ಲಿ ಮಾತ್ರ ಮಣ್ಣಿನ ಮಡಿಕೆಗಳಿಗೆ ಬೆಲೆ. ಉಳಿದ ದಿನಗಳಲ್ಲಿ ನಮ್ಮನ್ನು ಕೇಳುವವರೇ ಇರುವುದಿಲ್ಲ. ಸರ್ಕಾರ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಕುಂಬಾರ ಸಮಾಜಕ್ಕೆ ಬದುಕು ಕಟ್ಟಿಕೊಳ್ಳಲು ಯೋಜನೆ ರೂಪಿಸಬೇಕು.
•
ದೌಲತ್ರಾಯ ಕುಂಬಾರ ಗೂಗಿಹಾಳ,
ಅಧ್ಯಕ್ಷರು, ರಾಜ್ಯ ಕುಂಬಾರ ಯುವ ಸೈನ್ಯ ತಾಲೂಕು ಘಟಕ
ಪ್ರಸಕ್ತ ವರ್ಷ ಬಿಸಿಲಿನ ಝಳ ಹೆಚ್ಚಾಗಿದ್ದು, 42ರಿಂದ 43 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಮನೆಯಲ್ಲಿರುವ ಫ್ರಿಡ್ಜ್ ನೀರು ಕುಡಿಯುವುದರಿಂದ ಆರೋಗ್ಯ ಹಾಳಾಗುತ್ತಿದೆ. ಆದ್ದರಿಂದ ಮಣ್ಣಿನ ಮಡಿಕೆ ಖರೀದಿಗೆ ಬಂದಿದ್ದೇನೆ.
• ಸಿದ್ರಾಮ ಕಟ್ಟಿ ಕೋಳಕೂರ,
ಸ್ಥಳೀಯ ನಿವಾಸಿ
ವಿಜಯಕುಮಾರ ಎಸ್.ಕಲ್ಲಾ