ವಿಜಯಕುಮಾರ ಎಸ್.ಕಲ್ಲಾ
ಜೇವರ್ಗಿ: ದೇಶ ಸ್ವತಂತ್ರಗೊಂಡು 7 ದಶಕ ಕಳೆದಿದೆ. ಅಭಿವೃದ್ಧಿ ವೇಗ ಪಡೆದಿದೆ. ಉಡಾನ್ ಯೋಜನೆಯಿಂದ ಆಕಾಶಯಾನ ಹೆಚ್ಚಿದೆ. ಆದರೆ, ಜೇವರ್ಗಿ ತಾಲೂಕು ಖ್ಯಾದಾಪುರ ಗ್ರಾಮಕ್ಕೆ ಮಾತ್ರ ಇದುವರೆಗೆ ಸರ್ಕಾರಿ ಬಸ್ ಕೂಡ ಬಂದಿಲ್ಲ. ಪಟ್ಟಣಕ್ಕೆ ಹೋಗಬೇಕೆಂದರೆ 5 ಕಿಮೀ ನಡೆದು ಬಸ್ ಹತ್ತಬೇಕು!
ಹುಬ್ಬೇರಿಸಬೇಡಿ, ಜೇವರ್ಗಿ ಪಟ್ಟಣದಿಂದ 23 ಕಿಮೀ ದೂರದಲ್ಲಿರುವ ಖ್ಯಾದಾಪುರದ ದುಸ್ಥಿತಿ ಇದು. 900 ಜನಸಂಖ್ಯೆ ಇರುವ ಗ್ರಾಮ, 10 ಕಿಮೀ ದೂರದ ಬೀಳವಾರ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಮೂವರು ಗ್ರಾಪಂ ಸದಸ್ಯರಿದ್ದಾರೆ. ಸಮರ್ಪಕ ಮೂಲಸೌಕರ್ಯಗಳೂ ಇಲ್ಲ. ಕುಡಿಯುವ ನೀರಿಗೆ ಅಲೆದಾಟ ತಪ್ಪಿದ್ದಲ್ಲ. ಬಸ್ ಇಲ್ಲದೇ ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರು ಪರದಾಡುತ್ತಲೇ ಇದ್ದಾರೆ. ದುರಂತ ಎಂದರೆ ಬಸ್ ಸೌಕರ್ಯ ಇಲ್ಲದ್ದಕ್ಕೆ ಅದೆಷ್ಟೋ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಗ್ರಾಮದಲ್ಲಿ ಕೇವಲ ಐದನೇ ತರಗತಿವರೆಗೆ ಮಾತ್ರ ಶಾಲೆಯಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಜೇವರ್ಗಿಗೆ ತೆರಳಲೇಬೇಕು. ಸುಮಾರು 5 ಕಿಮೀ ದೂರದ ಮುದವಾಳ ಕೆ. ಗ್ರಾಮದ ಕ್ರಾಸ್‌ವರೆಗೆ ನಡೆದುಕೊಂಡು ಬರಬೇಕು. ವಾಪಸ್ ಮನೆಗೆ ಬರುವಾಗಲು 5 ಕಿಮೀ ನಡೆದುಕೊಂಡೇ ಬರಬೇಕು. ಅಲ್ಲದೇ ಇಲ್ಲಿನ ನಿವಾಸಿಗಳು ವ್ಯಾಪಾರ, ವ್ಯವಹಾರಕ್ಕಾಗಿ ಜೇವರ್ಗಿ ಪಟ್ಟಣವನ್ನೇ ಅವಲಂಬಿಸಿದ್ದಾರೆ. ಆರೋಗ್ಯ ಹದಗೆಟ್ಟರೆ ಚಿಕಿತ್ಸೆಗಾಗಿ ಆಸ್ಪತ್ರೆಯೂ ಇಲ್ಲ. ಹೀಗಾಗಿ ರೋಗಿಗಳನ್ನು ದೂರದ ಜೇವರ್ಗಿ ಪಟ್ಟಣಕ್ಕೆ ಕರೆದುಕೊಂಡು ಹೋಗಲು ಗ್ರಾಮಸ್ಥರು ಖಾಸಗಿ ವಾಹನಗಳಿಗೆ ದುಬಾರಿ ಬಾಡಿಗೆ ನೀಡುವುದು ತಪ್ಪಿಲ್ಲ.
ಕಿವಿಗೊಡದ ಅಜಯಸಿಂಗ್: ಈ ಸಮಸ್ಯೆ ಬಗ್ಗೆ ಗ್ರಾಮಸಭೆಗಳಲ್ಲಿ, ಶಾಸಕ ಡಾ| ಅಜಯಸಿಂಗ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರು ಪಟ್ಟಣಕ್ಕೆ ತೆರಳಿದರೆ ಸಂಜೆಯೊಳಗೆ ಮರಳಿ ಊರು ಸೇರಬೇಕು. ರಾತ್ರಿಯಾದರೆ ಸಂಕಷ್ಟ ತಪ್ಪಿದ್ದಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಬಸ್ ಬಿಡುವಂತೆ ಕೇಳಿದರೆ ಪ್ರತಿಕ್ರಿಯೆ ನೀಡುತ್ತಿಲ್ಲ.