ಹೊಸದಿಲ್ಲಿ : ಸೌದಿ ಆರೇಬಿಯದ ರಿಯಾಧ್‌ನಲ್ಲಿ ವಿಮಾನ ರನ್ ವೇ ಯಿಂದ ಸ್ಕಿಡ್ ಆದ ಕಾರಣ ಟೇಕಾಫ್ ವಿಫಲಗೊಂಡಿದ್ದ ಜೆಟ್ ಏರ್ ವೇಸ್ ನ ಇಬ್ಬರು ಪೈಲಟ್‌ಗಳ ವಿಮಾನ ಚಾಲನೆ ಪರವಾನಿಗೆಯನ್ನು (Licence) ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಅಮಾನತುಗೊಳಿಸಿದೆ.
ಕಳೆದ ಆಗಸ್ಟ್ 3ರಂದು ನಡೆದಿದ್ದ ಈ ಘಟನೆಯ ತನಿಖೆ ಈಗ ಪ್ರಗತಿಯಲ್ಲಿದೆ.
ತಾನು ಡಿಜಿಸಿಎ ಸಂಪರ್ಕದಲ್ಲಿದ್ದು ಪ್ರಕಣದ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದೇನೆ ಎಂದು ಜೆಟ್ ಏರ್ ವೇಸ್ ಹೇಳಿದೆ. ಡಿಜಿಸಿಎ ನಿಮಯಗಳಿಗೆ ಅನುಗುಣವಾಗಿ ತಾನು ಎಲ್ಲ ಅವಶ್ಯಕತೆಗಳಿಗೆ ಇನ್ನು ಮುಂದೆಯೂ ಬದ್ಧನಾಗಿರುವುದಾಗಿ ಜೆಟ್ ಏರ್ ವೇಸ್ ಹೇಳಿದೆ.
“ಈ ಘಟನೆಯು ಈಗ ತನಿಖೆಯಲ್ಲಿರುವುದರಿಂದ ಈ ಬಗ್ಗೆ ನಾವು ಯಾವುದೇ ಹೇಳಿಕೆ, ಪ್ರತಿಕ್ರಿಯೆ ನೀಡುವಂತಿಲ್ಲ’ ಎಂದು ಜೆಟ್ ಏರ್ ವೇಸ್ ವಕ್ತಾರ ಹೇಳಿದ್ದಾರೆ.
150 ಮಂದಿಯನ್ನು ಒಳಗೊಂಡಿದ್ದ ಮುಂಬಯಿಗೆ ಹೋಗಲಿದ್ದ ಜೆಟ್ ಏರ್ ವೇಸ್ ವಿಮಾನ ರಿಯಾದ್ ನಿಂದ ಹೊರಡುವಾಗ ಈ ಘಟನೆ ನಡೆದಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಚಾಲಕ ಸಿಬಂದಿಗಳು ಸುರಕ್ಷಿತವಾಗಿ ಪಾರಾಗಿದ್ದರು.