Advertisement

Jesus Christ: ಕರಾವಳಿಯಾದ್ಯಂತ ಪವಿತ್ರ ಗುರುವಾರ ಆಚರಣೆ

11:58 PM Apr 06, 2023 | Team Udayavani |

ಮಂಗಳೂರು/ಉಡುಪಿ/ಬೆಳ್ತಂಗಡಿ: ಕ್ರೈಸ್ತರು ಎ. 6ರಂದು ಪವಿತ್ರ ಗುರುವಾರ ಆಚರಿಸಿ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಸ್ಮರಿಸಿದರು. ಆ ಪ್ರಯುಕ್ತ ಚರ್ಚ್‌ಗಳಲ್ಲಿ ಮತ್ತು ಇತರ ಕ್ರೈಸ್ತ ಪ್ರಾರ್ಥನ ಮಂದಿರಗಳಲ್ಲಿ ಗುರುವಾರ ಸಂಜೆ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆ ನಡೆದವು.

Advertisement

ಮಂಗಳೂರು ಬಿಷಪ್‌ ಡಾ| ಪೀಟರ್‌ ಪಾವ್ಲ್‌ ಸಲ್ಡಾನ್ಹಾ ಅವರು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ವಿಶೇಷ ಪ್ರವಚನ ನೀಡಿ, ಪವಿತ್ರ ಗುರುವಾರದ ಆಚರಣೆಯ ಮೂಲಕ ವಿಶ್ವದ ಕೊನೆಯ ದಿನಗಳವರೆಗೂ ಇಂತಹ ಕೊನೆಯ ಭೋಜನದ ಆಚರಣೆಯನ್ನು ಮುಂದುವರಿಸಿಕೊಂಡು ಹೋಗೋಣ ಎನ್ನುವ ಸಂದೇಶವನ್ನು ನೀಡುವ ಜತೆಗೆ ಪವಿತ್ರ ಪರಮ ಪ್ರಸಾದದ ಮೂಲಕ ದೇವರ ಸಂಬಂಧವನ್ನು ಗಟ್ಟಿ ಮಾಡುತ್ತಾರೆ ಎಂದರು.

ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನದ ಸಂದರ್ಭ 12 ಮಂದಿ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ್ದು, ಅದರ ಸಂಕೇತವಾಗಿ ಬಿಷಪ್‌ ಹಾಗೂ ಇತರ ಚರ್ಚ್‌ಗಳಲ್ಲಿ ಸ್ಥಳೀಯ ಧರ್ಮಗುರುಗಳು 12 ಜನ ಕ್ರೈಸ್ತರ ಪಾದಗಳನ್ನು ತೊಳೆದರು.

ಇಂದು “ಗುಡ್‌ ಫ್ರೈಡೆ”
ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಪ್ರಯುಕ್ತ ಎ. 7ರಂದು “ಗುಡ್‌ ಫ್ರೈಡೆ’ ಆಚರಿಸಲಾಗುತ್ತದೆ. ಮಂಗಳೂರಿನ ಬಿಷಪ್‌ ಅವರು ಶಕ್ತಿನಗರದ ಮದರ್‌ ಆಫ್‌ ಗಾಡ್‌ ಚರ್ಚ್‌ನಲ್ಲಿ ಪ್ರಾರ್ಥನೆ ಮತ್ತು ಪ್ರವಚನ ನಡೆಸಲಿದ್ದಾರೆ. ಈಸ್ಟರ್‌ ಜಾಗರಣೆಯ ಬಲಿಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆಸಿಕೊಡಲಿದ್ದಾರೆ. ರವಿವಾರ ಈಸ್ಟರ್‌ ಹಬ್ಬದ ಬಲಿಪೂಜೆಯನ್ನು ಬಂಟ್ವಾಳದ ವಾಮದಪದವಿನ ಚರ್ಚ್‌ನಲ್ಲಿ ನಡೆಸಲಿದ್ದಾರೆ.

ಉಡುಪಿ
ಉಡುಪಿ: ಉಡುಪಿ ಜಿಲ್ಲಾದ್ಯಂತ ಪವಿತ್ರ ಗುರುವಾರ (ಮೊಂಡಿ ಥರ್ಸ್‌ಡೇ)ವನ್ನು ಕ್ರೈಸ್ತರು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು.
ಧರ್ಮಪ್ರಾಂತದ ಪ್ರಧಾನ ಧಾರ್ಮಿಕ ಕಾರ್ಯಕ್ರಮವು ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಉಡುಪಿ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ… ಐಸಾಕ್‌ ಲೋಬೊ ನೇತೃತ್ವದಲ್ಲಿ ನೆರವೇರಿತು.

Advertisement

ಪ್ರಧಾನ ಧರ್ಮಗುರುವಂ| ವಲೇರಿಯನ್‌ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಜೋಯ್‌ ಅಂದ್ರಾದೆ, ಪಿಲಾರ್‌ ಸಭೆಯ ರೆ| ಡೆನಿjಲ್‌ ಮಾರ್ಟಿಸ್‌, ರೆ| ನಿತೇಶ್‌ ಡಿ’ಸೋಜಾ ಉಪಸ್ಥಿತರಿದ್ದರು.

ಧರ್ಮಾಧ್ಯಕ್ಷರು 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವ ಮೂಲಕ ಯೇಸು ಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶ ಸಾರಿದರು. ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ 12 ಮಂದಿ ಪ್ರೇಷಿತರ ಪಾದಗಳನ್ನು ಆಯಾಯ ಚರ್ಚ್‌ನ ಧರ್ಮಗುರುಗಳು ತೊಳೆದರು.

ಬೆಳ್ತಂಗಡಿ
ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತಕ್ಕೆ ಒಳಪಟ್ಟ 55 ಚರ್ಚ್‌ಗಳಲ್ಲಿ ಬೆಳಗ್ಗೆ 8ಕ್ಕೆ ಬಲಿಪೂಜೆಯೊಂದಿಗೆ ಪವಿತ್ರ ಗುರುವಾರದ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಬೆಳ್ತಂಗಡಿ ಸಂತ ಲಾರೆನ್ಸರ ಕೆಥೆಡ್ರಲ್‌ ದೇವಾಲಯದಲ್ಲಿ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್‌ ಮುಕ್ಕುಯಿ ಅವರು ಪ್ರಾರ್ಥನಾ ವಿಧಿ ವಿಧಾನಗಳನ್ನು ನೆರವೇರಿಸಿ ದಿವ್ಯಬಲಿಪೂಜೆ ಅರ್ಪಿಸಿದರು. 12 ಜನರ ಪಾದಗಳನ್ನು ತೊಳೆಯುವ ವಿಧಿ ವಿಧಾನಗಳನ್ನು ನೆರವೇರಿಸಿದರು.

ಧರ್ಮಪ್ರಾಂತದ ಚಾನ್ಸೆಲರ್‌ ವಂ| ಲಾರೆನ್ಸ್‌ ಪುಣೋಳಿಲ್‌ ಪ್ರವಚನ ನೀಡಿದರು. ಕೆಥೆಡ್ರಲ್‌ ದೇವಾಲಯದ ವಂ| ಥಾಮಸ್‌ ಕಣ್ಣಾಂಙಳ್‌, ಧರ್ಮಪ್ರಾಂತದ ಮುಖ್ಯ ನ್ಯಾಯಾಧೀಶ ವಂ| ಕುರಿಯಾಕೋಸ್‌ ವೆಟ್ಟುವಯಿ, ಜ್ಞಾನ ನಿಲಯ ನಿರ್ದೇಶಕ ವಂ| ಜೋಸೆಫ್‌ ಮಟ್ಟಂ ಹಾಗೂ ಒಸಿಡಿ ವಂ| ವಿನ್ಸೆಂಟ್‌ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next