ಚಿಂಚೋಳಿ: ತಾಲೂಕಿನ ಮಿರಿಯಾಣ, ಕಿಷ್ಟಾಪುರ, ಭೈರಂಪಳ್ಳಿ ಗ್ರಾಮಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ, ಜೆಸ್ಕಾಂದಿಂದ ವಿದ್ಯುತ್ ಪರವಾನಗಿ ಪಡೆಯದೇ ಅನಧಿಕೃತವಾಗಿ (ಹುಕ್) ಹಾಕಿಕೊಂಡು ವಿದ್ಯುತ್ ಬಳಕೆ ಮಾಡಿಕೊಂಡು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾಗ ಬೀದರ-ಕಲಬುರಗಿ ಜೆಸ್ಕಾಂ ಜಾಗೃತದಳ ಮತ್ತು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತಾಲೂಕಿನ ಮಿರಿಯಾಣ, ಕಿಷ್ಠಾಪುರ, ಭೈರಂಪಳ್ಳಿ ಗ್ರಾಮಗಳಲ್ಲಿರುವ ಸರ್ಕಾರಿ ಜಮೀನು ಮತ್ತು ಪಟ್ಟಾ ಜಮೀನುಗಳಲ್ಲಿ ಗಣಿಗಾರಿಕೆಗಾಗಿ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೇ ಹಲವು ವರ್ಷಗಳಿಂದ ಗಣಿಗಾರಿಕೆ ನಡೆಸಲಾಗುತ್ತಿದೆ. ಅಲ್ಲದೇ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿರುವ ಕುರಿತ ಖಚಿತ ಮಾಹಿತಿ ಮೇರೆಗೆ ಜೆಸ್ಕಾಂ ಜಾಗೃತ ದಳ ಇನ್ಸ್‌ಪೆಕ್ಟರ್ ಸಚಿನ್ ಚೆಲವಾದಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸತ್ಯಾಭಾಮಾ, ಸೇಡಂ ವಿಭಾಗದ ಇಇ ಖಂಡಪ್ಪ, ಎಇಇ ಉಮೇಶ ಗೋಳ, ಎಸ್.ಇ,ಶಿವರಾಮ ನಾಯಕ ಮತ್ತು ಜೆಸ್ಕಾಂ ಸಿಬ್ಬಂದಿ ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಅಧಿಕಾರಿಗಳು ಕಲ್ಲುಗಣಿಗಳ ಮೇಲೆ ದಾಳಿ ನಡೆಸಿದರು.
ಭೈರಂಪಳ್ಳಿ, ಮಿರಿಯಾಣ, ಕಿಷ್ಟಾಪುರ ಗಣಿಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದನ್ನು ಕಟ್ ಮಾಡಲಾಗಿದೆ. ದಾಖಲೆ ಇಲ್ಲದ ವಿದ್ಯುತ್ ಪರಿವರ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 35 ಕಲ್ಲುಗಣಿಗಳಲ್ಲಿ ಜೆಸ್ಕಾಂದಿಂದ ಯಾವುದೇ ವಿದ್ಯುತ್ ಪರವಾನಗಿ ಇಲ್ಲದೇ ವಿದ್ಯುತ್ ಬಳಸಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿತ್ತು. ಕೆಲವು ಕಡೆಗಳಲ್ಲಿ ವಿದ್ಯುತ್ ತಂತಿಗಳಿಗೆ ಹುಕ್ ಹಾಕಿಕೊಂಡು ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿತ್ತು. ಈ ಕಳ್ಳಾಟ ಅನೇಕ ವರ್ಷಗಳಿಂದ ನಡೆಯುತ್ತಿತ್ತು ಎಂದು ಸೇಡಂ ವಿಭಾಗ ಕಾರ್ಯಪಾಲಕ ಖಂಡಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿ ಸತ್ಯಭಾಮಾ ಮಾತನಾಡಿ, ಇಲಾಖೆಯಿಂದ ಕೇವಲ 17 ಗಣಿಗಳಿಗೆ ಲೀಜ್ ನೀಡಲಾಗಿದೆ. ಆದರೆ ಇಲ್ಲಿ ಬಹಳಷ್ಟು ಕಡೆಗಳಲ್ಲಿ ಅಕ್ರಮ ಗಣಿಗಾರಿಕೆಗಳೇ ಹೆಚ್ಚಿವೆ. ಅಂದಾಜು 150ಕ್ಕೂ ಹೆಚ್ಚು ಗಣಿಗಳಿವೆ ಎಂದು ತಿಳಿಸಿದರು. ಗಣಿಗಾರಿಕೆಗೆ ಲೀಜ್ ಪಡೆದರೆ ಮಾತ್ರ ವಿದ್ಯುತ್ ಸಂಪರ್ಕ ಕೊಡಬೇಕು. ಆದರೆ ಇಲ್ಲಿ ವಿದ್ಯುತ್ ಸಂಪರ್ಕಗಳು ಅಕ್ರಮವಾಗಿದೆ. ಸರ್ಕಾರಿ ಜಮೀನು 149ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಮಿರಿಯಾಣ ಗ್ರಾಮದ ಕೆರೆಗೆ ನೀರು ಹರಿದು ಬರುತ್ತಿರುವ ಸಣ್ಣ ನಾಲೆಯಲ್ಲಿ ಪರಸಿ ಗಣಿಗಾರಿಕೆ ನಡೆಸಲಾಗಿದೆ ಎಂದರು.
ಜಾಗೃತಿ ದಳದ ತಂಡ ದಾಳಿಗೂ ಮುನ್ನವೇ ಎಲ್ಲ ಗಣಿಗಾರಿಕೆಗಳನ್ನು ಬಂದ್ ಮಾಡಲಾಗಿತ್ತು. ಗಣಿ ಮಾಲಿಕರಿಗೆ ದಾಳಿ ಮಾಹಿತಿ ನೀಡಿ ದಾಳಿ ನಡೆಸುವ ಪ್ರಯೋಜನವೇನು ಎಂಬ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಲಿಲ್ಲ. ಕಿಷ್ಟಾಪುರ, ಮಿರಿಯಾಣ, ಭೈರಂಪಳ್ಳಿ ಗ್ರಾಮಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮಾಲಿಕರು ತೆಲಂಗಾಣ ರಾಜ್ಯದವರೇ ಇರುವುದರಿಂದ ತೆಲಂಗಾಣ ರಾಜ್ಯದ ದಾಖಲೆ ಇಲ್ಲದ ವಿದ್ಯುತ್ ಪರಿವರ್ತಕಗಳಿಗೆ ಸಂಪರ್ಕ ಕಲ್ಪಿಸಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದಾಗಿ ನಮ್ಮ ರಾಜ್ಯಕ್ಕೆ ಬರುವ ಆದಾಯ ಖೋತಾ ಆಗುತ್ತಿದೆ. ತೆಲಂಗಾಣ ರಾಜ್ಯದಿಂದ ವಿದ್ಯುತ್ ಪರಿವರ್ತಕಗಳನ್ನು ತಂದು ಗಣಿಗಾರಿಕೆ ನಡೆಸಲಾಗುತ್ತಿದೆ ಎನ್ನುವುದನ್ನು ಜೆಸ್ಕಾಂ ಜಾಗೃತ ದಳ ಮತ್ತು ಗಣಿ ಭೂವಿಜ್ಞಾನ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ದಾಳಿಯಲ್ಲಿ ಟಿಸಿ, ಸ್ಟಾಟರ್, ಸರ್ವಿಸ್ ವೈರ್ ವಶಪಡಿಸಿಕೊಳ್ಳಲಾಗಿದ್ದು, ಎಲ್ಲವನ್ನು ಸೇಡಂ ವಿಭಾಗಕ್ಕೆ ಒಪ್ಪಿಸಲಾಗಿದೆ. ಅಲ್ಲದೇ ವರದಿಯನ್ನು ನೀಡಲಾಗಿದೆ ಎಂದು ಎಇಇ ಉಮೇಶ ಗೊಳಾ ತಿಳಿಸಿದ್ದಾರೆ.
ಮಿರಿಯಾಣ, ಕಿಷ್ಠಾಪುರ, ಭೈರಂಪಳ್ಳಿ ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ದಂಧೆ ನಡೆಸಲು ಸ್ಥಳೀಯರ ಕುಮ್ಮಕು ಇದೆ ಎಂದು ಅಧಿಕಾರಿಗಳ ಎದುರು ಕೆಲವರು ದೂರು ನೀಡಿದರು.
ಜೆಸ್ಕಾಂ ಜಾಗೃತ ದಳ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದಾಳಿಯಿಂದ ದಿನನಿತ್ಯ ಕೂಲಿ ಕೆಲಸ ಮಾಡುತ್ತಿದ್ದ ಗಣಿ ಕಾರ್ಮಿಕರು ಮರದ ಕೆಳಗೆ ಕುಳಿತಿದ್ದರು.