ಒಂದು ಕಡೆ ಮೊಮ್ಮಗನ ಕನಸು ಮತ್ತೂಂದು ಕಡೆ ತಾತನ ಪ್ರೇರಣೆ.. ಇವೆರಡರ ಗುರಿ ಒಂದೇ, ಅದು ಹಾಕಿ ಆಟದಲ್ಲಿ ಮಿಂಚುವುದು. ಹೌದು, ಮೇ 19ರಂದು ತೆರೆಕಂಡಿರುವ “ಜರ್ಸಿ ನಂ.10′ ಚಿತ್ರ ಹಾಕಿ ಕ್ರೀಡೆಯ ಸುತ್ತ ನಡೆಯುವ ಕಥಾನಕ ಹೊಂದಿದೆ. ಇಡೀ ಸಿನಿಮಾದ ಮೂಲ ಅಂಶ ಕೂಡಾ ಇದೇ. ಕಾಲೇಜಿನಲ್ಲಿ ಹಾಕಿ ಆಟದಲ್ಲಿ ಮುಂದಿದ್ದ ಯುವಕ ಮುಂದೆ ರಾಷ್ಟ್ರಮಟ್ಟದಲ್ಲಿ ಹೇಗೆ ಮಿಂಚುತ್ತಾನೆ, ಆತನ ಈ ಹಾದಿಯಲ್ಲಿ ಏನೇನು ಅಡೆತಡೆಗಳನ್ನು ಎದುರಿಸುತ್ತಾನೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ.
ನಿರ್ದೇಶಕ ಆದ್ಯ ಅವರು ಈ ಸಿನಿಮಾದ ನಿರ್ದೆಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಒಂದು ಕಮರ್ಷಿಯಲ್ ಸಿನಿಮಾವನ್ನು ಹೇಗೆ ಕಟ್ಟಿಕೊಡಬೇಕು ಎಂಬ ಕಲ್ಪನೆ ಆದ್ಯ ಅವರಿಗಿದೆ. ಹಾಗಾಗಿ, ಚಿತ್ರದಲ್ಲಿ ಹಾಡು, ಫೈಟ್ ಅಲ್ಲಲ್ಲಿ ಬರುವ ಕಾಮಿಡಿ ಸನ್ನಿವೇಶಗಳು ಪ್ರೇಕ್ಷಕರಿಗೆ ಖುಷಿ ಕೊಡುತ್ತವೆ.
ಇಂದಿನ ಯುವಕರಿಗೆ ಪ್ರೇರಣೆಯಾಗುವಂತಹ ನ್ಪೋರ್ಟ್ಸ್ ಹಿನ್ನೆಲೆ ಸಿನಿಮಾದ ಪ್ಲಸ್ ಎನ್ನಬಹುದು. ಸಣ್ಣ ಊರಿನ ಹುಡುಗನೊಬ್ಬ ಅಡೆತಡೆಗಳನ್ನು ದಾಟಿ ಹೇಗೆ ತನ್ನ ಗುರಿಸಾಧಿಸುತ್ತಾನೆ ಎಂಬ ಅಂಶವನ್ನು ಹೇಳಲಾಗಿದೆ.
ಚಿತ್ರದಲ್ಲಿ ಕ್ರೀಡೆ ಜೊತೆಗೆ ಲವ್‌ಸ್ಟೋರಿಯೂ ಇದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ನಾಯಕ ಬೇರೆ ಬೇರೆ ಕಾಲಘಟ್ಟದಲ್ಲಿ ಆ ನಾಯಕಿಯರ ಜೊತೆ ಪ್ರೀತಿಗೆ ಬೀಳುತ್ತಾನೆ. ಆ ಮೂಲಕ ಚಿತ್ರ ಲವ್‌ಸ್ಟೋರಿಯಾಗಿಯೂ ಸಾಗುತ್ತದೆ. ಇಲ್ಲಿ ಬರುವ ಲವ್‌ಸ್ಟೋರಿ ಸಾಕಷ್ಟು ಏರಿಳಿತಗಳೊಂದಿಗೆ, ಟ್ವಿಸ್ಟ್‌ಟರ್ನ್ನೊಂದಿಗೆ ಸಾಗಿ ಪ್ರೇಕ್ಷಕರ ಕುತೂಹಲ ಕಾಯ್ದಿರಿಸುತ್ತದೆ.
ಸಿನಿಮಾವನ್ನು ತಾಂತ್ರಿಕವಾಗಿ ಮತ್ತಷ್ಟು ಚೆಂದಗಾಣಿಸುವ ಅವಕಾಶ ಚಿತ್ರತಂಡಕ್ಕಿತ್ತು. ನಾಯಕರಾಗಿ ನಟಿಸಿರುವ ಆದ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಟೆನ್ನಿಸ್ ಕೃಷ್ಣ, ಮಂಡ್ಯ ರಮೇಶ್, ಚಂದನ್ ಆಚಾರ್, ಥ್ರಿಲ್ಲರ್ ಮಂಜು ನಟಿಸಿದ್ದಾರೆ.