Advertisement

ಕೇವಲ 16,499 ರೂ.ಗಳಿಗೆ ಭಾರತದಲ್ಲಿ ʻಜಿಯೋಬುಕ್‌ʼ ಬಿಡುಗಡೆ… ವಿಶೇಷತೆಗಳೇನು..?

07:19 PM Aug 06, 2023 | Team Udayavani |

21 ನೇ ಶತಮಾನ ಸ್ಮಾರ್ಟ್‌ ಗ್ಯಾಜೆಟ್‌ಗಳ ಯುಗ. ಮೊಬೈಲ್‌, ಲ್ಯಾಪ್‌ಟಾಪ್‌ಗಳು ಈಗ ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎನ್ನುವಂತಾಗಿದೆ. ವಿದ್ಯಾರ್ಥಿಗಳಿಗಾಗಲಿ, ಕಛೇರಿಯಲ್ಲಿ ದುಡಿಯುವವರಿಗಾಗಲಿ ಲ್ಯಾಪ್‌ಟಾಪ್‌ ಬೇಕೇ ಬೇಕು ಎನ್ನುವಂತಾಗಿದೆ. ಆದರೆ ಭಾರತದಲ್ಲಿ ಲ್ಯಾಪ್‌ಟಾಪ್‌ಗೆ ಭಾರೀ ಬೆಲೆ ಇರುವುದರಿಂದ ಅದೆಷ್ಟೋ ಬಡ ವಿದ್ಯಾರ್ಥಿಗಳಷ್ಟೇ ಅಲ್ಲ ಕಛೇರಿ ಸಿಬ್ಬಂದಿಗಳೂ ತಮ್ಮ ಸ್ಮಾರ್ಟ್‌ ಫೋನ್‌ನಲ್ಲೇ ಹಲವು ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ.

Advertisement

ಭಾರತದ ಜನರ ಅವಶ್ಯಕತೆ, ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಭಾರತದ ದೈತ್ಯ ಉದ್ಯಮ ಸಂಸ್ಥೆ ʻಜಿಯೋʼ ಹೊಸದಾಗಿ ಲ್ಯಾಪ್‌ಟಾಪ್‌ ಒಂದನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಕೇವಲ 16,499 ರೂ. ಗಳಿಗೆ ಗ್ರಾಹಕರ ಕೈಗೆಟಕುವ ಈ ಲ್ಯಾಪ್‌ಟಾಪ್‌ಗೆ ಕಂಪನಿ ʻಜಿಯೋ ಬುಕ್‌ʼ ಎಂದು ನಾಮಕರಣ ಮಾಡಿದೆ.

ಇತ್ತೀಚೆಗಷ್ಟೇ ಭಾರತಕ್ಕೆ ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಟ್ಯಾಬ್‌ಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಸದ್ಯ ಈ ಕಾನೂನು 3 ತಿಂಗಳ ಮಟ್ಟಿಗೆ ಮುಂದೂಡಲ್ಪಟ್ಟಿದೆಯಾದರೂ ಇದೇ ಸಮಯದಲ್ಲಿ ಜಿಯೋ ಭಾರತದ ಟೆಕ್‌ ಕ್ಷೇತ್ರದಲ್ಲಿನ ತನ್ನ ಬೃಹತ್‌ ಬಾಹುಳ್ಯವನ್ನು ವಿಸ್ತರಿಸುವ ಮುನ್ಸೂಚನೆ ನೀಡಿದೆ.

ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಎಲ್ಲಾ ವಯೋಮಾನಗಳ ಜನರ ಕನಿಷ್ಠ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಜಿಯೋ ತನ್ನ ಹೊಚ್ಚ ಹೊಸ ʻಜಿಯೋ ಬುಕ್‌ʼ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ನೂತನ ಜಿಯೋಬುಕ್‌ ಅನ್ನು ಆನ್‌ಲೈನ್‌ ಪಾಠಗಳು, ಕೋಡ್‌ ಕಲಿಕೆಗಳು, ಕ್ರಿಯೇಟಿವ್‌ ಕೆಲಸಗಳು, ಇತ್ಯಾದಿ ಕೆಲಸಗಳಿಗೂ ಬಳಸಬಹುದಾಗಿದೆ. ಹೀಗಾಗಿ ಜಿಯೋ ಇದನ್ನು ʻಕ್ರಾಂತಿಕಾರಕ ಡಿಜಿಟಲ್‌ ಕಲಿಕಾ ಬುಕ್‌ʼ ಅಂತಲೇ ಕರೆದುಕೊಂಡಿದೆ. ಆಗಸ್ಟ್‌ 5 ರಿಂದ ಜಿಯೋಬುಕ್‌ ಗ್ರಾಹಕರಿಗೆ ಲಭ್ಯವಾಗಿದ್ದು ಎಲ್ಲಾ ಜಿಯೋ ಸ್ಟೋರ್‌, ರಿಲಯನ್ಸ್‌ ಡಿಜಿಟಲ್‌ ಹಾಗೂ ಅಮೇಜಾನ್‌ನಂತಹ ಇ-ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಖರೀದಿಸಬಹುದಾಗಿದೆ.

Advertisement

ಜಿಯೋಬುಕ್‌ನ ಪ್ರಮುಖ ವಿಶೇಷತೆಗಳು ಹೀಗಿವೆ…

~ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ತಯಾರಾಗಿರುವ ಜಿಯೋಬುಕ್‌ನಲ್ಲಿ ಜಿಯೋ ಆಪರೇಟಿಂಗ್‌ ಸಿಸ್ಟಮ್‌ ಇರಲಿದೆ.

~ 4 G-LTE ಮತ್ತು ಡುಯೆಲ್‌ ಬ್ಯಾಂಡ್‌ WiFi ಸಾಮರ್ಥ್ಯ ಈ ಹೊಸ ಜಿಯೋಬುಕ್‌ನಲ್ಲಿ ಲಭ್ಯವಾಗಲಿದೆ. ಲ್ಯಾಪ್‌ಟಾಪ್‌ಗೆ ಜಿಯೋ ಸಿಮ್‌ ಅಳವಡಿಸಿಕೊಳ್ಳಬಹುದಾಗಿದ್ದು, ದೇಶದ ಯಾವುದೇ ಮೂಲೆಯಲ್ಲೂ ಇಂಟರ್‌ನೆಟ್‌ ತಡೆ ಇಲ್ಲದೆ ಗ್ರಾಹಕರು ಸದಾ ಇಂಟರ್‌ನೆಟ್‌ ಸಂಪರ್ಕಿತರಾಗಿರುವುದೇ ನಮ್ಮ ಗುರಿ ಎಂದು ಜಿಯೋ ಹೇಳಿದೆ.

~ ಸುಮಾರು 75 ಕ್ಕೂ ಹೆಚ್ಚು ಶಾರ್ಟ್‌ಕಟ್‌ ಕೀಗಳು

~ವೈರ್‌ಲೆಸ್‌ ಪ್ರಿಂಟಿಂಗ್‌ ಫೆಸಿಲಿಟಿ

~ ಚಾಟ್‌ಬಾಟ್‌

~ಜಿಯೋ ಟಿವಿ ಮೂಲಕ ಶೈಕ್ಷಣಿಕ ವಿಷಯಗಳ ಬಗ್ಗೆ ಮಾಹಿತಿ

~ಜಿಯೋ ಗೇಮ್ಸ್‌

~ʻಜಿಯೋ ಬಯಾನ್‌ʼ ಸುಲಭವಾಗಿ ಕೋಡಿಂಗ್‌ ಕಲಿಕೆಗೆ ಅವಕಾಶ. C / C++, ಜಾವಾ, ಪೈಥಾನ್, ಪರ್ಲ್‌ ಮುಂತಾದ ವಿಭಿನ್ನ ಕೋಡಿಂಗ್‌ ಭಾಷೆಗಳೂ ಲಭ್ಯ.

~ ಮಲ್ಟಿ ಟಾಸ್ಕಿಂಗ್‌ ಸ್ಕ್ರೀನ್‌- ಎರಡು, ಮೂರು ಟ್ಯಾಬ್‌ಗಳನ್ನು ಒಂದೇ ಸಮಯದಲ್ಲಿ ಬಳಸಲು ಸಾಧ್ಯ- ವಿದ್ಯಾರ್ಥಿಗಳಿಗೆ ನೋಟ್ಸ್‌ ಮಾಡಿಕೊಳ್ಳಲು ಸಹಕಾರಿ.

ಜಿಯೋಬುಕ್‌ ವಿನ್ಯಾಸ ಮತ್ತು ಸಾಮರ್ಥ್ಯ…

ಜಿಯೋಬುಕ್‌ಗೆ ನೀಡಲಾಗಿರುವ ಮ್ಯಾಟ್‌ ಫಿನಿಷ್‌ ಅದರ ಪ್ರಮುಖ ವಿಶೇಷತೆಗಳಲ್ಲೊಂದು. ಕೇವಲ 11.6” (26.46 cm) ಗ್ರಾಹಕ ಸ್ನೇಹಿ Anti-glare ಡಿಸ್ಪ್ಲೇಯನ್ನು ಜಿಯೋ ಬುಕ್‌ ಹೊಂದಿದೆ. ಇದು ಡಿಸ್ಪ್ಲೆಯಲ್ಲಿನ ರಿಫ್ಲೆಕ್ಷನ್‌ ತಡೆಗಟ್ಟುತ್ತದೆ. ಇದರ ಮತ್ತೊಂದು ಪ್ರಮುಖ ವೈಶಿಷ್ಟ್ಯ ಇದರ ತೂಕ. ತೀರಾ ಹಗುರವಾದ ಜಿಯೋಬುಕ್‌ ಕೇವಲ 990 ಗ್ರಾಂ ತೂಕವಿದೆ. ಇದು ಜುಯೋಬುಕ್‌ ಅನ್ನು ಎಲ್ಲಿಂದೆಲ್ಲಿಗೂ ಸುಲಭವಾಗಿ ಕೊಂಡೊಯ್ಯಲು ತುಂಬಾ ಸಹಕಾರಿಯಾಗಿದೆ.

ಜಿಯೋಬುಕ್‌ನಲ್ಲಿ ಸ್ಲಿಮ್‌ ಬಾಡಿಯಿದ್ದರೂ 2.0 GHz Octa Core ಪ್ರೊಸೆಸರ್‌ ಇರಲಿದ್ದು 4 GB LPDDR4 RAM, 64 GB ಸ್ಟೋರೇಜ್‌ ಹೊಂದಿದೆ. ಬಾಹ್ಯ ಮೆಮೊರಿ ಕಾರ್ಡ್‌ ಸೌಲಭ್ಯ ಇದರ ಮತ್ತೊಂದು ವಿಶೇಷತೆ. ಸಿಮ್‌ ಕಾರ್ಡ್‌ ಪೋರ್ಟ್‌ ಹತ್ತಿರದಲ್ಲೇ ನೀಡಲಾಗಿರುವ ಮೆಮೊರಿ ಕಾರ್ಡ್‌ ಪೋರ್ಟ್‌ನಲ್ಲಿ ಮೊಬೈಲ್‌ ಫೋನ್‌ಗೆ ಬಳಸುವ ಎಸ್‌ಡಿ ಕಾರ್ಡ್‌ ಹಾಕುವ ಸೌಲಭ್ಯ ನೀಡಿದ್ದು ಇದು 256 GB ಯ ತನಕ ಸ್ಟೋರೇಜ್‌ ವಿಸ್ತರಿಸಲು ಸಹಕಾರಿಯಾಗಲಿದೆ. ಎರಡು USB/ HDMI ಪೋರ್ಟ್‌ಗಳೂ ಜಿಯೋಬುಕ್‌ನಲ್ಲಿ ಇರಲಿದೆ. ಮ್ಯಾಕ್‌ ಬುಕ್‌ಗಳಲ್ಲಿ ದೊರಕುವ ಕಮ್ಯಾಂಡ್‌ ಆಪ್ಷನ್‌ನಂತೆಯೇ ಜಿಯೋಬುಕ್‌ನಲ್ಲಿ ʻಜಿಯೋʼ ಬಟನ್‌ ಇರಲಿದೆ. ಕೀಬೋರ್ಡ್‌ಗಳ ಕೀಗಳು ದೊಡ್ಡದಾಗಿದ್ದು ಸುಲಭವಾಗಿ ಟೈಪಿಂಗ್‌ ಮಾಡಲು ಸಹಕಾರಿಯಾಗಲಿವೆ.

4,000 mAH ಬ್ಯಾಟರಿ ಇರಲಿದ್ದು 8 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಸಿಗಲಿದೆ. ಜಿಯೋಬುಕ್‌ನಲ್ಲಿ ಉತ್ತಮ ಗುಣಮಟ್ಟದ ಎರಡು ಸ್ಪೀಕರ್‌ಗಳಿರಲಿವೆ. ಇನ್ನು ವಿಡಿಯೋ ಕಾಲಿಂಗ್‌ಗೆ ಸಹಕಾರಿಯಾಗುವಂತೆ 2 MP ಕ್ಯಾಮರಾವನ್ನು ನೀಡಲಾಗಿದ್ದು ಜೊತೆಯಲ್ಲಿ ಎರಡು ಸಣ್ಣ ಮೈಕ್ರೋಫೋನ್‌ ವ್ಯವಸ್ಥೆಯೂ ಇದೆ.

ದೇಶದ ಜನರಿಗಾಗಿ ಹಲವು ಹೊಸ ಯೋಜನೆಗಳನ್ನು ನೀಡುತ್ತಾ ಬಂದಿರುವ ʻಜಿಯೋʼ ಶೈಕ್ಷಣಿಕ ಉದ್ದೇಶಕ್ಕಾಗಿ ಜಿಯೋಬುಕ್‌ ಅನ್ನು ಬಿಡುಗಡೆ ಮಾಡಿದ್ದರೂ ಯಾವುದೇ ವಯೋಮಾನದವರಿಗೂ ಉಪಯೋಗಿಸಬಹುದಾಗಿದೆ.

~ ಪ್ರಣವ್‌ ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next