ಶ್ರೀನಗರ: ಅನಂತ್‌ನಾಗ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸೇನಾ ಪಡೆಗಳು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಉಗ್ರ , ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಸಜ್ಜದ್ ಮಕ್ಬೂಲ್ ಭಟ್ ಮತ್ತು ಇನ್ನೋರ್ವ ಪ್ರಮುಖ ಉಗ್ರ ತೌಸಿಫ್ ನನ್ನು ಹತ್ಯೆಗೈಯಲಾಗಿದೆ.
ಬಿಜ್‌ಬಿಹಾರದ ಮರ್ಹಾಮಾ ಸಂಗಮ್ ಗ್ರಾಮದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ.
ಸಜ್ಜದ್ ಭಟ್ ಪುಲ್ವಾಮಾ ದಾಳಿ ಕಾರು ಒದಗಿಸಿದ್ದ ಎನ್ನುವ ವಿಚಾರವನ್ನು ಸೇನಾ ಪಡೆಗಳು ತಿಳಿಸಿವೆ. ತೌಸಿಫ್ ಲಷ್ಕರ್ ಸಂಘಟನೆಯ ಪ್ರಮುಖ ಉಗ್ರ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೊಡೆದುರುಳಿಸಿವೆ.
ಅನಂತ್‌ನಾಗ್ ಜಿಲ್ಲೆಯ ಅಚಬಾಲ್ ಪ್ರದೇಶದಲ್ಲಿ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಸೇನೆಯ ಮೇಜರ್‌ವೊಬ್ಬರು ಹುತಾತ್ಮರಾಗಿ, ಮತ್ತೂಬ್ಬ ಅಧಿಕಾರಿ ಹಾಗೂ ಇಬ್ಬರು ಯೋಧರು ಗಾಯಗೊಂಡ ಘಟನೆ ನಡೆದಿದೆ. ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿತ್ತು.
ಪುಲ್ವಮಾದಲ್ಲಿ ಫೆಬ್ರವರಿ 14 ರಂದು ಸ್ಫೋಟಕ ತುಂಬಿದ್ದ ಕಾರನ್ನು ಸಿಆರ್‌ಪಿಎಫ್ ವಾಹನಕ್ಕೆ ಗುದ್ದಿಸಲಾಗಿತ್ತು. ಭೀಕರ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು.