Advertisement

ಸಂತೋಷ ಎಂಬುದು ಸಣ್ಣ ಸಕ್ಕರೆ ಕಣ

02:34 AM Sep 09, 2020 | Hari Prasad |

ನಾವೆಲ್ಲಾ ಬದುಕಿನಲ್ಲಿ ಹುಡುಕುತ್ತಿರುವುದೇನು? ನಮಗರಿವಿಲ್ಲದ ಸಂತೋಷವನ್ನು. ಅದಕ್ಕಾಗಿ ಕಸ್ತೂರಿ ಮೃಗದಂತೆ ಊರೆಲ್ಲ ಹುಡುಕುತ್ತೇವೆ; ಆದರೆ ಆ ಪರಿಮಳ ತನ್ನೊಳಗೇ ಇದೆ ಎಂಬುದನ್ನು ಮಾತ್ರ ಅರಿತಿರುವುದೇ ಇಲ್ಲ ; ಅಥವಾ ಆ ಅರಿವೇ ಇರದು.

Advertisement

ಒಬ್ಬ ಆಗರ್ಭ ಶ್ರೀಮಂತ ಒಮ್ಮೆ ತನ್ನಲ್ಲಿದ್ದ ಒಡವೆ, ವಜ್ರ ಎಲ್ಲವನ್ನೂ ಚೀಲಕ್ಕೆ ತುಂಬಿಕೊಂಡು ಕುದುರೆಯೊಂದಿಗೆ ಸಂತೋಷವನ್ನು ಅರಸಿಕೊಂಡು ಹೊರಟ. ಎದುರು ಸಿಕ್ಕವರೆನ್ನೆಲ್ಲ ಕೇಳತೊಡಗಿದ. ಅವನಿಗೆ ಸಿಕ್ಕವರೆಲ್ಲ ಊರ ಕೊನೆಯಲ್ಲಿ ಅರಣ್ಯವಿದೆ. ಅಲ್ಲಿ ಒಬ್ಬ ಸಂತನಿದ್ದಾನೆ, ಅವನು ನಿಮಗೆ ಸರಿಯಾದ ಮಾರ್ಗದರ್ಶನ ಮಾಡಬಹುದು’ ಎಂದರು. ಅದರಂತೆ ಆತ ಅರಣ್ಯವನ್ನು ಹುಡುಕಿಕೊಂಡು ಬಂದ. ಬಹಳಷ್ಟು ಸುಸ್ತಾಯಿತು. ಆದರೂ ಸಂತೋಷವನ್ನು ಹುಡುಕುವ ಉತ್ಸಾಹವಿತ್ತು. ಮತ್ತಷ್ಟು ದೂರ ನಡೆದ ಮೇಲೆ ಕೊನೆಗೂ ಒಂದು ಗುಹೆ ಎದುರಾಯಿತು. ಅದರಲ್ಲಿ ಒಬ್ಬ ಸಂತ ತನ್ನಷ್ಟಕ್ಕೆ ಸಂತೋಷದಿಂದ ಕಾಲ ಕಳೆಯುತ್ತಿದ್ದ.

ಶ್ರೀಮಂತ ಅವನನ್ನು ಕಂಡವನೇ, ಸ್ವಾಮಿಗಳೇ, ನಾನು ಇಂಥವನು. ನನ್ನ ಬಯಕೆ ಇಂಥದ್ದು ಎಂದೆಲ್ಲ ಹೇಳಿದ. ನೀವು ನನಗೆ ಸಂತೋಷವನ್ನು ಹುಡುಕಿಕೊಟ್ಟರೆ ಈ ಎಲ್ಲ ನಗ-ನಾಣ್ಯಗಳನ್ನು ಕೊಟ್ಟು ಬಿಡುವೆ ಎಂದು ಗಂಟನ್ನು ಎದುರಿಗಿಟ್ಟ.

ಸಂತನಿಗೆ ಸಣ್ಣ ನಗೆ ಬಂದಿತು, ತೋರಗೊಡಲಿಲ್ಲ. ರಪ್ಪನೆ ಆ ಗಂಟನ್ನು ಬಾಚಿಕೊಂಡು ಓಡತೊಡಗಿದ. ಆ ಕ್ಷಣದಲ್ಲಿ ಶ್ರೀಮಂತನಿಗೆ ಏನಾಗುತ್ತಿದೆ ಎಂದು ಅರ್ಥವಾಗಲೇ ಇಲ್ಲ. ಯಾಕೆಂದರೆ, ಈ ಸಂತ ಹೀಗೆ ತನ್ನ ಗಂಟನ್ನು ಕದ್ದೊಯ್ಯುತ್ತಾನೆ ಎಂದುಕೊಂಡಿರಲಿಲ್ಲ. ಎರಡು ಕ್ಷಣಗಳಲ್ಲಿ ಆತನಿಗೆ ಎಲ್ಲವೂ ಅರ್ಥವಾಯಿತು.

‘ಜನರೇ ಸಂತ ನನ್ನ ಗಂಟನ್ನು ಕದ್ದೊಯ್ಯುತ್ತಿದ್ದಾನೆ. ದಯವಿಟ್ಟು ಅವನನ್ನು ಹಿಡಿಯಿರಿ’ ಎಂದು ಬೊಬ್ಬೆ ಹಾಕುತ್ತಾ ಸಂತನ ಹಿಂದೆ ಶ್ರೀಮಂತ ಓಡಿದ. ಆದರೆ ಸಂತನಿಗೆ ಇಡೀ ಊರಿನ ಬೀದಿಗಳು ಗೊತ್ತಿತ್ತು. ತಪ್ಪಿಸಿಕೊಂಡು ಕಣ್ಮರೆಯಾದ. ಶ್ರೀಮಂತ ಅಲ್ಲಿ ಇಲ್ಲಿ ಸುತ್ತಾಡಿ ಸಪ್ಪೆ ಮೋರೆ ಹಾಕಿಕೊಂಡು ಮರಳಿ ಗುಹೆಗೇ ಬಂದ. ಆಶ್ಚರ್ಯ! ಸಂತ ಕಣ್ಮುಚ್ಚಿ ನಗುತ್ತಾ ಕುಳಿತಿದ್ದಾನೆ, ಎದುರಿಗೆ ಆ ಗಂಟಿದೆ.

Advertisement

ಶ್ರೀಮಂತ ಮೊದಲು ಮಾಡಿದ್ದು ಏನು ಗೊತ್ತೇ? ತತ್‌ಕ್ಷಣವೇ ಆ ಗಂಟನ್ನು ಗಬಕ್ಕನೆ ಬಾಚಿಕೊಂಡ. ಬಹಳ ಖುಷಿಯಾಯಿತು. ಗಂಟು ಸಿಕ್ಕೀತಲ್ಲ ಎಂದು ಮಹದಾನಂದ ಪಟ್ಟ. ಇದನ್ನು ಕಣ್ಮುಚ್ಚಿಕೊಂಡೇ ಅನುಭವಿಸುತ್ತಿದ್ದ ಸಂತ ಮೆಲ್ಲಗಿನ ಧ್ವನಿಯಲ್ಲಿ, ನಿನ್ನ ಗಂಟು ಸಿಕ್ಕಿದ್ದು ಖುಷಿ ಯಾಯಿತೇ? ಎಂದು ಕೇಳಿದ. ಹೌದೌದು, ನನ್ನ ಬದುಕಿನಲ್ಲಿ ಇಷ್ಟೊಂದು ಖುಷಿ ಆಗಿಯೇ ಇರಲಿಲ್ಲ ಎಂದು ಹೇಳಿದ ಶ್ರೀಮಂತ.

ಅದಕ್ಕೆ ಸಂತನು, “ಎಲ್ಲರೂ ತಮ್ಮಲ್ಲಿ ಏನಿದೆಯೋ ಅದರಲ್ಲೇ ಖುಷಿಯನ್ನು ಕಾಣುವುದಿಲ್ಲ, ಬೇರೆಯದರಲ್ಲೇ ಹುಡುಕು ತ್ತಾರೆ. ಅದೇ ಸಮಸ್ಯೆ’ ಎಂದ. ಆಗ ಶ್ರೀಮಂತ ನಿಗೆ ವಾಸ್ತವದ ಅರಿವಾಯಿತು. ಸಂತನಿಗೆ ಶಿರಬಾಗಿ ನಮಸ್ಕರಿಸಿ ಅಲ್ಲಿಂದ ವಾಪಸಾದ.  ನಾವೂ ಹಾಗೆಯೇ ತಾನೇ. ನಮ್ಮೊಳಗಿರುವ ಸಂತೋಷದ ಸಣ್ಣ ಸಣ್ಣ ಸಕ್ಕರೆ ಕಣಗಳನ್ನು ಸಣ್ಣದೆಂದು ನಿರ್ಲಕ್ಷಿಸಿ, ದೊಡ್ಡ ಸಂತೋಷ ಹುಡುಕಿಕೊಂಡು ಹೊರಡುತ್ತೇವೆ. ಅದರಲ್ಲಿ ಅರ್ಥವೇ ಇರದು.

(ಸೂಫಿಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next