Advertisement

ಆತ್ಯಂತಿಕ ಆನಂದವೇ ನಮ್ಮ ಮೂಲಸ್ಥಿತಿ

10:57 PM Aug 18, 2020 | mahesh |

ದೇವತೆಗಳು ಒಮ್ಮೆ ಅತ್ಯುನ್ನತ ಜ್ಞಾನವನ್ನು ಸೃಷ್ಟಿಸಿ ಅದನ್ನು ಮನುಷ್ಯನಿಗೆ ಕೊಡಲು ಬಯಸಿದರಂತೆ. ಆದರೆ ಅದು ಅವನಿಗೆ ಸುಲಭವಾಗಿ ಸಿಗಬಾರದು ಎಂಬ ಉದ್ದೇಶದಿಂದ ಎಲ್ಲಾದರೂ ಅಡಗಿಸಿ ಇಡಬೇಕು ಎಂದುಕೊಂಡರು. “ಎಲ್ಲಿ ಅವಿತಿರಿಸಬಹುದು?’ ಎಂಬ ಪ್ರಶ್ನೆಗೆ ದೇವತೆಯೊಬ್ಬರು, “ಹಿಮಾಲಯದ ತುದಿಯಲ್ಲಿ’ ಎಂದರೆ ಇನ್ನೊಬ್ಬರು “ಸಾಗರದ ಆಳದಲ್ಲಿ’ ಎಂದರು. ಅಲ್ಲಿಂದೆಲ್ಲ ಮನುಷ್ಯ ಅದನ್ನು ಬೇಗನೆ ಹುಡುಕಿ ತೆಗೆಯಬಹುದು ಎಂದಾಯಿತು. ಕೊನೆಗೆ ಮನುಷ್ಯನ ಮನಸ್ಸಿನ ಮೂಲೆಯಲ್ಲಿ ಅಡಗಿಸಿ ಇರಿಸಬಹುದು, ಅವನು ಹೊರಗೆಲ್ಲ ಹುಡುಕುತ್ತಾನೆಯೇ ವಿನಾ ತನ್ನ ಮನಸ್ಸಿನೊಳಗೆ ಇಣುಕುವ ಸಾಧ್ಯತೆ ಇಲ್ಲ ಎಂಬ ಒಮ್ಮತಕ್ಕೆ ಬರಲಾಯಿತಂತೆ!

Advertisement

ಎಲ್ಲೋ ಕಿವಿಗೆ ಬಿದ್ದ ಕಥೆ ಇದು. ರಮಣ ಮಹರ್ಷಿಗಳು ಇದನ್ನು ಇನ್ನೊಂದು ಬಗೆಯಲ್ಲಿ ಹೇಳುತ್ತಾರೆ. ಆತ್ಯಂತಿಕ ಅಥವಾ ಪರಿಪೂರ್ಣ ಆನಂದವು ಹೊರಗೆಲ್ಲೋ ಇಲ್ಲ; ಅದು ನಮ್ಮೊಳಗೆಯೇ ಇದೆ, ನಮ್ಮ ಅಸ್ತಿತ್ವದ ತಿರುಳೇ ಸಚ್ಚಿದಾನಂದ ಎನ್ನುತ್ತಾರೆ ಅವರು.

ಸಾಮಾನ್ಯವಾಗಿ ನಾವು ಬಾಹ್ಯ ವಸ್ತು, ಘಟನೆ, ಸನ್ನಿವೇಶಗಳಿಂದ ಸಂತೋಷ ಉಂಟಾಗುತ್ತದೆ ಎಂದುಕೊಳ್ಳುತ್ತೇವೆ. ಹೊಸ ಕಾರು ಖರೀದಿಸಿದರೆ, ಮನೆ ಕಟ್ಟಿದರೆ, ಸಂಬಳ ಹೆಚ್ಚಿದರೆ ಇತ್ಯಾದಿ ಇತ್ಯಾದಿ. ಆದರೆ ನಿಜಕ್ಕೂ ಹಾಗಲ್ಲ. ಸಂತೋಷ ನಮ್ಮೊಳಗೆಯೇ ಇದೆ. ನಮ್ಮ ಮನಸ್ಸು ದ್ವಂದ್ವ , ಬೇಸರ, ಏಳುಬೀಳುಗಳನ್ನು ಅನುಭವಿಸುತ್ತಿದ್ದರೂ ನಮ್ಮ ಅಸ್ತಿತ್ವದ ಕೇಂದ್ರದಲ್ಲಿ ಪರಿಪೂರ್ಣ ಶಾಂತಿ ಮತ್ತು ಸಂತುಷ್ಟಿಯ ಸ್ಥಿತಿ ಇದೆ. ಆಸೆಗಳು ಮತ್ತು ಭಯ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡುತ್ತವೆ. ಆಸೆ ಈಡೇರಿದಾಗ, ಭಯ ಅಳಿದಾಗ ಮನಸ್ಸಿನ ಮೇಲ್ಮೆ„ಯ ಉಬ್ಬರವಿಳಿತಗಳು ಅಡಗಿ ಶಾಂತ ಸ್ಥಿತಿ ನೆಲೆಯಾದಾಗ ಮನಸ್ಸು ಮತ್ತೆ ಆಂತರಿಕವಾದ ಆನಂದವನ್ನುಆಸ್ವಾದಿಸುತ್ತದೆ.

ಹಾಗಾಗಿ ಪರಿಪೂರ್ಣ ಸಂತುಷ್ಟಿ ನಮ್ಮೊಳಗೆಯೇ ಇದೆ. ಅದರ ಅನುಭವಕ್ಕೆ ತಡೆಯೊಡ್ಡುವುದು ನಮ್ಮ ಮನಸ್ಸು. ಹಾಗಾದರೆ ಸಚ್ಚಿದಾನಂದ ಸ್ಥಿತಿ ಎಂದರೇನು? ಅದು ಬೇರೇನೂ ಅಲ್ಲದ, ಬೇರೇನೂ ಇಲ್ಲದ ಕೇವಲ ಅಸ್ತಿತ್ವದ ಆನಂದ. ಪರಿಪೂರ್ಣ ಶಾಂತಿಯಿಂದ ಕೂಡಿದ ಅಸ್ತಿತ್ವದ ಅನುಭವದಲ್ಲಿ ಆ ಸಚ್ಚಿದಾನಂದ ಸ್ಥಿತಿಯಿರುತ್ತದೆ. ಸ್ಪಷ್ಟ ಸ್ವಪ್ರಜ್ಞೆಯ ಬೆಳಕು ಮಾತ್ರ ಬೆಳಗುತ್ತಿದ್ದು, ಮನಸ್ಸಿನ ಎಲ್ಲ ಚಟುವಟಿಕೆಗಳು ನಿಲುಗಡೆಗೊಂಡಾಗ ಆ ಸಚ್ಚಿದಾನಂದ ಸ್ಥಿತಿ ನೆಲೆಗೊಳ್ಳುತ್ತದೆ. ಆದ್ದರಿಂದ ಪರಿಪೂರ್ಣ ಆನಂದ ಅಥವಾ ಪರಿಪೂರ್ಣ ಶಾಂತಿಯ ಸ್ಥಿತಿ ಎಂಬುದು ಮನಸ್ಸಿನ ಮೂಲಕ ಆಗುವ ಅರಿವನ್ನು ಮೀರಿದ್ದು, ಯಾವುದೇ ರೀತಿಯ ಪ್ರಶ್ನೆ, ಆಲೋಚನೆ, ಚಿಂತನೆಗಳಿಗಿಂತ ಆಚೆಗಿನದ್ದು.

ಆತ್ಯಂತಿಕ ಆನಂದಮಯ ಸ್ಥಿತಿಯು ನಮ್ಮೊಳಗೆ ಇರುವಂಥದ್ದು ಮಾತ್ರವಲ್ಲ, ಅದೇ ನಮ್ಮ ಮೂಲ ಸ್ಥಿತಿಯೂ ಆಗಿದೆ. ಬಾಹ್ಯ ಅನುಭವ, ಸನ್ನಿವೇಶಗಳಿಂದ ಪಡೆದದ್ದು ಎಂದು ನಾವು ಸಾಮಾನ್ಯವಾಗಿ ಭಾವಿಸುವ ಸಂತೋಷ, ಆನಂದವು ನಿಜಕ್ಕೂ ನಮ್ಮ ಮೂಲ ಸ್ಥಿತಿ. ಆ ಮೂಲಸ್ಥಿತಿಯನ್ನು ನಾವು ಎಷ್ಟು ಆಳವಾಗಿ, ಗಾಢವಾಗಿ ಪ್ರಜ್ಞೆಯೊಳಕ್ಕೆ ತಂದುಕೊಳ್ಳುತ್ತೇವೆಯೋ ಅಷ್ಟು ಚೆನ್ನಾದ ಆನಂದ ಉಂಟಾಗುತ್ತದೆ.

Advertisement

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next