Advertisement

ಕಳೆದುಕೊಳ್ಳುವುದರಲ್ಲಿ ಸಂತೋಷವೇ ದೊಡ್ಡದು!

04:07 AM Sep 25, 2020 | Hari Prasad |

ಬದುಕಿನ ಸಂತೋಷ ಯಾವುದರಲ್ಲಿದೆ ಎಂದು ಹುಡುಕುವುದು ನಮ್ಮ ಜಾಯಮಾನ.

Advertisement

ಕೈಯಲ್ಲಿರುವ ಗಿಳಿಯನ್ನು ಸರಿಯಾಗಿ ಗಮನಿಸದೇ, ಅರ್ಥ ಮಾಡಿಕೊಳ್ಳದೇ ಎದುರಿನ ಮರದ ಮೇಲಿರುವ ಮತ್ತೊಂದು ಹಕ್ಕಿಯನ್ನು ನೋಡುತ್ತಿರುತ್ತೇವೆ.

ಆದರೆ ನಿಜವಾಗಲೂ ಸಂತೋಷ ಯಾವುದರಲ್ಲಿದೆ? ಇರುವುದನ್ನು ಇಟ್ಟುಕೊಂಡು ಅನುಭವಿಸುವುದರಲ್ಲೋ, ಇದ್ದದ್ದನ್ನು ಮತ್ತೂಬ್ಬರಿಗೆ ಕೊಟ್ಟು ಕಳೆದುಕೊಳ್ಳುವುದರಲ್ಲೋ?

ಇದೇ ಒಂದು ಬಗೆಯ ಕೌತುಕ ಹುಟ್ಟಿಸುವಂಥದ್ದು. ಈ ಕೌತುಕವೇ ಇಂದಿಗೂ ಬದುಕನ್ನು ನಿತ್ಯ ಹರಿದ್ವರ್ಣವಾಗಿಸಿರುವುದು.

ಝೆನ್‌ ಕಥೆಯೊಂದರಲ್ಲಿ ಇದಕ್ಕೊಂದು ಉತ್ತರವೆಂಬುದಿದೆ. ಆದರೆ ಅದೇ ಇದಮಿತ್ಥಂ ಎಂದಲ್ಲ. ಮತ್ತಷ್ಟು ರೀತಿಯಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಿದೆ.

Advertisement

ಝೆನ್‌ ಗುರುವೊಬ್ಬರು ದಿನವೂ ತನ್ನನ್ನು ಸಂದರ್ಶಿಸಲು ಬಂದವರನ್ನು ಮಾತನಾಡಿಸುತ್ತಾ ಬಹಳ ಕುಸುರಿ ಕಲೆಯಿಂದ ಕೂಡಿದ್ದ ಚೆಂದದ ಟೀ ಕುಡಿಯುವ ಲೋಟವನ್ನು ತೋರಿಸಿ ಹೀಗೆ ಹೇಳುತ್ತಿದ್ದರು – ‘ನೋಡಿ, ನನ್ನ ಶಿಷ್ಯನೊಬ್ಬ ಕೊಟ್ಟಿರುವ ಪಿಂಗಾಣಿಯ ಲೋಟವಿದು. ಬಹಳ ಒಳ್ಳೆಯವನಾಗಿದ್ದ. ಅವನ ನೆನಪಿಗೆ ಇದನ್ನು ಇಟ್ಟುಕೊಂಡಿದ್ದೇನೆ’ ಎಂದು ಮುಗುಳ್ನಗುತ್ತಿದ್ದರು. ಆ ಬಳಿಕ ಅಲ್ಲೇ ಇದ್ದ ದಂಡೆಯ ಮೇಲೆ ಕಪ್‌ ನ್ನು ಇಡುತ್ತಿದ್ದರು.

ಒಂದು ದಿನ ಒಬ್ಬ ಸಂದರ್ಶಕ ಆ ಲೋಟವನ್ನು ತೆಗೆದುಕೊಂಡು ನೋಡಲು ಹೋಗಿ ಕೆಳಗೆ ಬೀಳಿಸಿದ.
ಲೋಟ ಒಡೆದು ಚೂರು ಚೂರಾಯಿತು. ಕೂಡಲೇ ಗುರುವಿನ ಇತರ ಶಿಷ್ಯರು ಬಂದು, ‘ಹೇಗೆ ಒಡೆದು ಹಾಕಿದೆ? ಅದರ ಮೇಲೆ ಅವರಿಗೆಷ್ಟು ಪ್ರೀತಿಯಿತ್ತು, ಗೊತ್ತಾ?’ ಎಂದು ದಬಾಯಿಸತೊಡಗಿದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಝೆನ್‌ ಗುರು, ಏನಾಯಿತು ಎಂದು ಕೇಳಿದರು. ಶಿಷ್ಯರು ದೂರು ನೀಡುವವರಂತೆ ಇಡೀ ಕಥೆಯನ್ನು ವಿವರಿಸಿದರು. ಅದಕ್ಕೆ ಗುರು ಏನೂ ಹೇಳಲಿಲ್ಲ, ಮುಗುಳ್ನಗುತ್ತಾ ಮೊದಲೇ ಅದು ಒಡೆದು ಹೋಗಿತ್ತು ಎಂದು ಹೇಳಿ ಮುನ್ನಡೆದರು.

ಸಣ್ಣದೊಂದು ಘಟನೆಯ ಹಿಂದಿನ ಅರ್ಥ ಬಹಳ ದೊಡ್ಡದು. ಸಂತೋಷ ಎನ್ನುವುದು ಬರೀ ಹೊಂದುವುದರಲ್ಲಿ, ಅನುಭವಿಸುವುದರಲ್ಲಷ್ಟೇ ಇಲ್ಲ. ಕಳೆದುಕೊಳ್ಳುವುದರಲ್ಲೂ ಇದೆ. ಹಾಗೆ ಹೇಳುವುದಾದರೆ ಸಂತೋಷದ ಮೊದಲರ್ಧ ಭಾಗವನ್ನು ಮಾತ್ರ ಅನುಭವಿಸಿದ್ದೇವೆ. ಮತ್ತೊಂದರ್ಧ ಭಾಗ ಅನುಭವಿಸಿದ್ದೇ ಕಡಿಮೆ. ಆ ಎರಡನೇ ಭಾಗದ ಅನುಭವದ ಕೊರತೆಯೇ ನಮ್ಮನ್ನು ಬಹಳವಾಗಿ ಕಾಡುವಂಥದ್ದು. ಕಳೆದುಕೊಳ್ಳುವ ಮೂಲಕ ಸಂತೋಷ ಪಡುವುದು ಬದುಕಿನತ್ತ ಧನಾತ್ಮಕ ನೆಲೆಯತ್ತ ಯೋಚಿಸಲು ಪ್ರೇರೇಪಿಸಬಲ್ಲದು.

ಅದೇ ದೊಡ್ಡದು. ಸುಖ-ದುಃಖ, ಸೋಲು-ಗೆಲುವು ಸಾಮಾನ್ಯವೆನ್ನುವ ಬದುಕಿನಲ್ಲಿ ನಾವು ಎರಡರ ಅನುಭವವನ್ನೂ ಪಡೆಯಲು ಸಿದ್ಧರಿರಬೇಕು. ಆಗ ನಿಜವಾಗಲೂ ಬದುಕಿನಲ್ಲಿ ಗೆಲ್ಲಲು ಸಾಧ್ಯ. ಇಲ್ಲವಾದರೆ ಸೋತು ಗೆದ್ದೆನೆಂದು ಬೀಗುವುದಷ್ಟನ್ನೇ ಬಿಟ್ಟರೆ ನಿಜವಾದ ಗೆಲುವನ್ನು ಅನುಭವಿಸಿಯೇ ಇರುವುದಿಲ್ಲ. ಬನ್ನಿ ಸೋಲೋಣ, ಮತ್ತೆ ಗೆಲ್ಲೋಣ.

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next