Advertisement

ಜೀವಯಾನ: ಉಪಯೋಗಿಸಿದಷ್ಟು ಹರಿತವಾಗುವ ದೇಹ ಮತ್ತು ಮನಸ್ಸು

01:36 AM Sep 08, 2020 | Hari Prasad |

ಯುವ ವೈದ್ಯರೊಬ್ಬರಿಗೆ ತನ್ನಲ್ಲಿಗೆ ಬಂದ ರೋಗಿಯ ಸಮಸ್ಯೆಯೇನು ಎಂಬುದು ಅರ್ಥವಾಗಲಿಲ್ಲ.

Advertisement

ಆ ಮನುಷ್ಯನಿಗೆ ಎಲ್ಲವೂ ಸರಿಯಾಗಿತ್ತು. ಆದರೂ ಏನೋ ರೋಗ ಇದೆ ಎಂಬ ಸಂಶಯ. ಕೊನೆಗೆ ಯುವ ವೈದ್ಯರು ಹಿರಿಯ ಸಹೋದ್ಯೋಗಿಯ ಸಹಾಯ ಯಾಚಿಸಿದರು.

ಅವರು ಎಲ್ಲವನ್ನೂ ಕೇಳಿದ ಬಳಿಕ, ‘ಆ ಮನುಷ್ಯನಿಗೆ ದಿನವೂ ಹತ್ತು ಕೊಡದಷ್ಟು ನೀರನ್ನು ಬಾವಿಯಿಂದ ಸೇದಿ ತೆಂಗಿನ ಮರದ ಬುಡಕ್ಕೆ ಹಾಕಲು ಹೇಳಿ. ಅವರಿಗೆ ಎಲ್ಲವೂ ಸರಿಯಾಗಿದೆ, ದೇಹ ಚಟುವಟಿಕೆ ಇಲ್ಲದೆ ಜಡ್ಡು ಗಟ್ಟಿದೆ ಅಷ್ಟೇ. ಬಾವಿಯಿಂದ ನೀರು ಸೇದಿ ಮೈಗೆ ದಣಿವಾದಾಗ ಚೆನ್ನಾಗಿ ಹಸಿವೆಯಾಗುತ್ತದೆ, ಪೊಗದಸ್ತಾಗಿ ಉಂಡಾಗ ಒಳ್ಳೆಯ ನಿದ್ದೆಯೂ ಬರುತ್ತದೆ. ಅವರ ಸಮಸ್ಯೆಗೆ ಇಷ್ಟೇ ಮದ್ದು ಸಾಕು’ ಎಂದರಂತೆ.

ನಮ್ಮ ದೇಹವನ್ನು ನಾವು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳದಿರುವುದೇ ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ಎನ್ನುವುದಕ್ಕೆ ಸದ್ಗುರು ಜಗ್ಗಿ ವಾಸುದೇವ್‌ ಅವರು ಪ್ರವಚನವೊಂದರಲ್ಲಿ ಹೇಳಿದ ಕತೆ ಇದು.

ನಾವು 200 ವರ್ಷಗಳ ಹಿಂದೆ ಬದುಕಿದ್ದರೆ ಈಗಿನದ್ದಕ್ಕಿಂತ 20 ಪಟ್ಟು ಹೆಚ್ಚು ದೈಹಿಕ ಶ್ರಮ ವಹಿಸುತ್ತಿದ್ದೆವು. ಆಗ ಎಲ್ಲ ಕಡೆಗೂ ನಡೆದೇ ಹೋಗಬೇಕಾಗಿತ್ತು, ಕೆಲಸ ಗಳನ್ನು ಕೈಗಳಲ್ಲೇ ಮಾಡಬೇಕಾಗಿತ್ತು.

Advertisement

ಆದರೆ ಇವತ್ತು ವಾಹನಗಳಿವೆ, ಕೆಲಸಗಳನ್ನು ಮಾಡಲು ಯಂತ್ರಗಳಿವೆ. ಆದ್ದರಿಂದ ನಾವು ದೇಹವನ್ನು ತುಂಬಾ ಕಡಿಮೆ ಉಪಯೋಗಿಸುತ್ತಿದ್ದೇವೆ. ದೇಹ ಮತ್ತು ಮನಸ್ಸು – ಎರಡೂ ಕುಡುಗೋಲಿನಂತೆ. ಉಪಯೋಗಿಸುತ್ತಿದ್ದರೆ ಮಾತ್ರ ಹರಿತವಾಗಿರುತ್ತವೆ, ಇಲ್ಲವಾದರೆ ತುಕ್ಕು ಹಿಡಿಯುತ್ತದೆ. ದೇಹ ಮತ್ತು ಮನಸ್ಸನ್ನು ಉಪಯೋಗಿಸಿದಷ್ಟು ಅವು ಚುರುಕಾಗಿರುತ್ತವೆ.

ಆರೋಗ್ಯವಾಗಿರಲು ಅತ್ಯಂತ ಸುಲಭವಾದ ಉಪಾಯ ಎಂದರೆ ದೈಹಿಕವಾಗಿ ಹೆಚ್ಚು ಶ್ರಮ ವಹಿಸುವುದು. ಕೆಲಸಗಳಿಗಾಗಿ ಯಂತ್ರಗಳನ್ನು, ಓಡಾಟಕ್ಕಾಗಿ ವಾಹನಗಳನ್ನು ಉಪಯೋಗಿಸದೆ ದೈಹಿಕ ಶ್ರಮಕ್ಕೆ ಅವಕಾಶ ಮಾಡಿಕೊಡುವುದು. ದೇಹದ ವಿವಿಧ ಅಂಗಾಂಗಗಳಿಗೆ ಕೆಲಸ ಕೊಟ್ಟು ದುಡಿಸಿದರೆ ನಮಗೆ ತೊಂದರೆ ಕೊಡುತ್ತಿರುವ ಅನಾರೋಗ್ಯಗಳಲ್ಲಿ ಶೇ. 80ರಷ್ಟು ಪರಿಹಾರವಾಗುತ್ತವೆ. ಇನ್ನುಳಿದ ಶೇ. 10ರಷ್ಟು ನಮ್ಮ ಆಹಾರ-ವಿಹಾರಗಳನ್ನು ಸರಿಪಡಿಸಿಕೊಂಡರೆ ಇಲ್ಲವಾಗುತ್ತವೆ.

ಉತ್ತಮ ಆರೋಗ್ಯ ಎಂಬುದು ಮನುಷ್ಯ ಸೃಷ್ಟಿಸಿದ್ದಲ್ಲ ಅಥವಾ ಅದು ಅವನ ಪರಿಕಲ್ಪನೆಯಲ್ಲ. ಬದುಕು ಚೆನ್ನಾಗಿ ಸಾಗುತ್ತಿದ್ದರೆ ಅದೇ ಆರೋಗ್ಯ. ಸಕ್ರಿಯ ಜೀವನ ನಡೆಸುತ್ತಿದ್ದೀರಿ ಎಂದಾದರೆ ಆರೋಗ್ಯವಾಗಿದ್ದೀರಿ ಎಂದರ್ಥ. ಅದಕ್ಕಾಗಿಯೇ ದೈಹಿಕ ಶ್ರಮಕ್ಕೆ ಹೆಚ್ಚು ಅವಕಾಶ ಮಾಡಿ ಕೊಡಬೇಕು.

ಇವೆಲ್ಲವೂ ಒಂದು ಸರಪಣಿಯಂತೆ. ಚೆನ್ನಾಗಿ ಕೆಲಸ ಮಾಡಿದರೆ ದೇಹ ದಣಿಯುತ್ತದೆ, ಚೆನ್ನಾಗಿ ಹಸಿವಾಗುತ್ತದೆ. ಹೊಟ್ಟೆಯಲ್ಲಿ ಜೀರ್ಣರಸಗಳು ಸ್ರಾವಗೊಂಡು ಆಹಾರಕ್ಕಾಗಿ ಕಾಯುತ್ತವೆ. ಆಗ ಊಟ ರುಚಿಸುತ್ತದೆ, ಸಾಕಷ್ಟು ಉಣ್ಣಲು ಸಾಧ್ಯವಾಗುತ್ತದೆ.

ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಕೆಲಸ ಮಾಡಿ ದಣಿದ ದೇಹಕ್ಕೆ ಉತ್ತಮ ಆಹಾರ ಸಿಕ್ಕಿದ ಬಳಿಕ ಮಲಗಿದರೆ ಭರ್ಜರಿ ನಿದ್ದೆಯೂ ಬರುತ್ತದೆ. ಆಗ ಮನಸ್ಸು ಕೂಡ ಸ್ವಸ್ಥವಾಗಿರುತ್ತದೆ.

ದೇಹ ಶ್ರಮ, ಉತ್ತಮ ಆಹಾರ ಮತ್ತು ಒಳ್ಳೆಯ ನಿದ್ದೆ – ಉತ್ತಮ ಆರೋಗ್ಯಕ್ಕೆ ಆಧುನಿಕ ವಿಜ್ಞಾನವೂ ಹೇಳುವುದು ಇದನ್ನೇ ಅಲ್ಲವೆ!

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next