Advertisement
ಒಳ್ಳೆಯದನ್ನು ತರುತ್ತದೆ ಎಂದು ನಂಬಿ ಏನೇನನ್ನೋ ಧರಿಸುತ್ತಾರೆ, ಮನೆಯಲ್ಲಿ ತಂದಿಡುತ್ತಾರೆ. ಲಕ್ಕಿ ನಂಬರ್, ಲಕ್ಕಿ ಶರಟು, ಅದೃಷ್ಟದ ವಾಹನ… ಹೀಗೆ ನಂಬಿ ಅದೃಷ್ಟಕ್ಕಾಗಿ ಹುಡುಕಾಡುವ, ಕಾಯುವ ಪಟ್ಟಿ ಬೆಳೆಯುತ್ತದೆ.
Related Articles
Advertisement
ಅತಿಶಯ ಎಂಬಂತಹ ಒಂದು ಕಥೆಯಿದೆ. ಬಸ್ ನಿಲ್ದಾಣದಲ್ಲಿ ಹ್ಯಾಪು ಮೋರೆ ಹಾಕಿಕೊಂಡಿದ್ದ ಒಬ್ಬನನ್ನು ಇನ್ನೊಬ್ಬ ಕೇಳಿದನಂತೆ, “ಏನಾಯಿತು?’ ಆತ ಹೇಳಿದ, “ನನ್ನ ಮೊದಲನೇ ಹೆಂಡತಿ ಸತ್ತುಹೋದಳು. ಎರಡನೇ ಪತ್ನಿ ಓಡಿಹೋಗಿದ್ದಾಳೆ. ಮಗು ಅಪರಾಧ ಮಾಡಿ ಜೈಲುಪಾಲಾಗಿದ್ದಾನೆ. ಮಗಳಿಗೆ ತೀವ್ರ ಅನಾರೋಗ್ಯವಿದೆ. ಆಸ್ತಿಪಾಸ್ತಿ ಪಾಲಾಗಿ ನನಗೇನೂ ಉಳಿದಿಲ್ಲ…’
ಇನ್ನೊಬ್ಟಾತ ಹೇಳಿದ, “ಅಯ್ಯೋ ಎಂಥ ದುರದೃಷ್ಟ! ಅಂದಹಾಗೆ ನಿನ್ನ ಉದ್ಯೋಗವೇನು?’ ಮೊದಲನೆಯಾತ ಹೇಳಿದ, ‘ಅದೃಷ್ಟದ ಹರಳುಗಳನ್ನು ಮಾರುವುದು…’
ಇವತ್ತಿನ ದಿನದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ಏನೇನು ಅನುಭವಿಸುತ್ತೇವೆ ಅನ್ನುವುದು ಖಂಡಿತವಾಗಿಯೂ ನಮ್ಮದೇ. ನಮ್ಮ ಹೆಂಡತಿ, ಮಕ್ಕಳು, ಸುತ್ತಮುತ್ತಲಿನವರ ಜತೆಗೆ ಎಷ್ಟು ಘರ್ಷಣೆ ನಡೆಸುತ್ತೇವೆ, ಎಷ್ಟು ಪ್ರೀತಿ ವಾತ್ಸಲ್ಯಗಳಿಂದ ನಡೆದು ಕೊಳ್ಳುತ್ತೇವೆ ಎಂಬುದು ನಮ್ಮೊಳಗೆಯೇ ಇರು ವಂಥದ್ದು. ನಮ್ಮ ಪರಿಸರಕ್ಕೆ ನಾವು ಸ್ಪಂದಿಸುವ ಸೂಕ್ಷ್ಮತೆ, ವಿವೇಚನೆ, ಬುದ್ಧಿವಂತಿಕೆಗಳನ್ನು ಆಧರಿಸಿರುತ್ತದೆ. ಜಗಳವಾದರೆ ಅದು ದುರಾದೃಷ್ಟದಿಂದ ಆದದ್ದಲ್ಲ, ನಕ್ಕು ನಲಿದರೆ ಅದಕ್ಕೆ ಅದೃಷ್ಟ ಕಾರಣವಲ್ಲ.
ಒಂದೆಡೆ ಸುಮಧುರ ಕಂಪಿನ ಹೂವು ಗಳುಳ್ಳ ಗಿಡ, ಇನ್ನೊಂದೆಡೆ ಮುಳ್ಳುಗಿಡ ಇದೆ ಎಂದುಕೊಳ್ಳಿ. ಚಿಟ್ಟೆಗಳು, ದುಂಬಿಗಳು, ಕೊನೆಗೆ ನಾವು ಕೂಡ ಮುಖ ಮಾಡುವುದು ಸುವಾಸನೆಯ ಹೂಗಿಡದ ಕಡೆಗೆ ಅಲ್ಲವೆ? ನಮ್ಮ ಜೀವನ ಕೂಡ ಹಾಗೆಯೇ; ಕೆಲವು ಉತ್ಕೃಷ್ಟ ಗುಣಗಳು, ಅಂಶಗಳು ನಮ್ಮಲ್ಲಿದ್ದರೆ ಎಲ್ಲರೂ ನಮ್ಮತ್ತ ಆಕರ್ಷಿತರಾಗುತ್ತಾರೆ. ಬದುಕನ್ನು ಸುಮಧುರ ಹೂವುಗಳ ಗಿಡವಾಗಿಸುವ ಸಾಧ್ಯತೆಯತ್ತ ಮುಖ ಮಾಡೋಣ…
(ಸಂಗ್ರಹ)